ದೆಹಲಿ: ಜೂಜಾಟ, ಬೆಟ್ಟಿಂಗ್ ಸೇರಿದಂತೆ ಆನ್‌ಲೈನ್ ಗೇಮಿಂಗ್‌ನಿಂದ (Online Gaming) ಪ್ರತಿ ವರ್ಷ ದೇಶದಲ್ಲಿ ಅಂದಾಜು 45 ಕೋಟಿ ಜನರು ಸುಮಾರು 20,000 ಕೋಟಿ ರೂ.ಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನು ಆಘಾತಕಾರಿ ಮಾಹಿತಿಯನ್ನು ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ. ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 (Online Gaming Bill 2025) ಅನ್ನು ಲೋಕಸಭೆ ಅಂಗೀಕರಿಸುವ ಮೊದಲು ಈ ಬಗ್ಗೆ ಮಾಹಿತಿ ನೀಡಲಾಯಿತು. ಆನ್‌ಲೈನ್ ಗೇಮಿಂಗ್ ವೇದಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಮಂಡಿಸಲಾದ ಆನ್‌ಲೈನ್ ಗೇಮಿಂಗ್ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಮಸೂದೆ-2025 ಅನ್ನು ಸಂಸತ್‌ನಲ್ಲಿ ಮಂಡಿಸಲಾಯಿತು.
ಆನ್‌ಲೈನ್ ಬೆಟ್ಟಿಂಗ್ ಅನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವುದು, ಹಣ ಆಧಾರಿತ ಎಲ್ಲ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸುವುದು, ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಹಣಕಾಸು ವ್ಯವಹಾರ ನಡೆಸಲು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಅನುಮತಿ ನಿಷೇಧಿಸುವ ಗುರಿಯನ್ನು ಇದು ಹೊಂದಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಮಂಡಿಸಿದ ಹೊಸ ಮಸೂದೆಯು, ಜೂಜಾಟದ ಅಪ್ಲಿಕೇಶನ್ (Gambling apps)ಗೆ ದಂಡ ವಿಧಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಒಳಗೊಂಡಿದೆ. ಈ ಪ್ರಸ್ತಾವಿತ ಕಾನೂನು ಇ-ಸ್ಪೋರ್ಟ್ಸ್ ಮತ್ತು ಹೊರಾಂಗಣ ಆಟಗಳನ್ನು ಪ್ರೋತ್ಸಾಹಿಸಲೂ ಪ್ರಯತ್ನಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಮಸೂದೆ ಕುರಿತಾದ ವಿವರ ಇಲ್ಲಿದೆ.
ಈ ಸುದ್ದಿಯನ್ನೂ ಓದಿ: Monsoon Session: ಬಂಧಿತ ಪ್ರಧಾನಿ, ಮುಖ್ಯಮಂತ್ರಿಯನ್ನು ವಜಾಗೊಳಿಸುವ ಮಸೂದೆ; ಪ್ರತಿ ಹರಿದು ಅಮಿತ್ ಶಾ ಮೇಲೆ ಎಸೆದ ಪ್ರತಿಪಕ್ಷ ಸದಸ್ಯರು
ಪ್ರಮುಖ ಉದ್ದೇಶ
- ಸಕಾರಾತ್ಮಕ ಪರಿಣಾಮ ಬೀರುವ ಆಟಗಳಿಗೆ ಉತ್ತೇಜನ: ಇ-ಸ್ಪೋರ್ಟ್ಸ್ ಮತ್ತು ಸುರಕ್ಷಿತ ಸಾಮಾಜಿಕ ಅಥವಾ ಶೈಕ್ಷಣಿಕ ಆಟಗಳಿಗೆ ಪ್ರೋತ್ಸಾಹ.
- ರಿಸ್ಕಿ ಮನಿ ಗೇಮ್‌ಗಳ ನಿಷೇಧ: ವ್ಯಸನ ಅಥವಾ ಆರ್ಥಿಕ ನಷ್ಟವನ್ನು ಉಂಟುಮಾಡುವ ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಗೇಮ್‌ಗಳ ನಿಷೇಧ.
- ವಂಚನೆಯಿಂದ ರಕ್ಷಣೆ: ವಂಚನೆ, ಹಣ ವರ್ಗಾವಣೆ ಮತ್ತು ಇತರ ಆನ್‌ಲೈನ್ ಅಪಾಯಗಳಿಂದ ಬಳಕೆದಾರರ, ವಿಶೇಷವಾಗಿ ಯುವಕರ ರಕ್ಷಣೆ.
- ಮಾರ್ಗಸೂಚಿ: ಭಾರತದ ಗೇಮಿಂಗ್ ಉದ್ಯಮವನ್ನು ಬೆಳೆಸಲು ನಿಯಮಗಳು ಮತ್ತು ಮಾರ್ಗಸೂಚಿಗಳ ಪರಿಚಯ.
ಕಾನೂನು ಉಲ್ಲಂಘಿಸಿದರೆ ನೀಡುವ ಶಿಕ್ಷೆಯ ವಿವರ
- ಆನ್‌ಲೈನ್ ಮನಿ ಗೇಮ್ ಒದಗಿಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ 1 ಕೋಟಿ ರೂ. ದಂಡ.
- ಮನಿ ಗೇಮ್‌ಗಳ ಜಾಹೀರಾತಿಗೆ ಉತ್ತೇಜನ ನೀಡಿದರೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ 50 ಲಕ್ಷ ರೂ. ದಂಡ.
- ಮನಿ ಗೇಮ್‌ಗೆ ಸಂಬಂಧಿಸಿದ ಆರ್ಥಿಕ ವಹಿವಾಟು ನಡೆಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ 1 ಕೋಟಿ ರೂ. ದಂಡ.
- ಪುನರಾವರ್ತಿತ ಅಪರಾಧ ಕಂಡುಬಂದರೆ 3-5 ವರ್ಷಗಳ ಜೈಲು ಶಿಕ್ಷೆ ಮತ್ತು 2 ಕೋಟಿ ರೂ.ವರೆಗೆ ದಂಡ.
- ಕೆಲವು ಅಪರಾಧಗಳು ಜಾಮೀನು ರಹಿತ.
- ಅಪರಾಧಗಳಿಗೆ ಸಂಬಂಧಿಸಿದ ಡಿಜಿಟಲ್/ಭೌತಿಕ ಆಸ್ತಿಯನ್ನು ಅಧಿಕಾರಿಗಳು ತನಿಖೆ ಮಾಡಬಹುದು, ಶೋಧಿಸಬಹುದು ಮತ್ತು ವಶಪಡಿಸಿಕೊಳ್ಳಬಹುದು.
- ಕೆಲವು ಪ್ರಕರಣಗಳಲ್ಲಿ ವಾರಂಟ್ ಇಲ್ಲದೆ ಶೋಧಿಸುವ ಮತ್ತು ಬಂಧಿಸುವ ಅಧಿಕಾರ.
ಕಾನೂನಿನ ಉಪಯೋಗ
- ಆರ್ಥಿಕತೆಗೆ ಶಕ್ತಿ: ಜಗತ್ತಿನಲ್ಲೇ ಭಾರತವನ್ನು ಪ್ರಮುಖ ಗೇಮಿಂಗ್ ಹಬ್ ಆಗಿ ಪರಿವರ್ತಿಸುವುದು.
- ಯುವ ಜನತೆಗೆ ಉತ್ತೇಜನ: ಕೌಶಲ್ಯ ಆಧಾರಿತ ಗೇಮಿಂಗ್ ಮತ್ತು ಇ-ಸ್ಪೋರ್ಟ್ಸ್‌ಗೆ ಪ್ರೋತ್ಸಾಹ.
- ಸುರಕ್ಷತೆ: ಮನಿ ಗೇಮ್‌ನ ಜಾಲದಿಂದ ಕುಟುಂಬಗಳ ರಕ್ಷಣೆ.
- ಜಾಗತಿಕ ನಾಯಕತ್ವ: ಜವಾಬ್ದಾರಿಯುತ ಗೇಮಿಂಗ್ ಮತ್ತು ಡಿಜಿಟಲ್ ನೀತಿಯಲ್ಲಿ ಭಾರತದ ಪಾತ್ರವನ್ನು ಬಲಪಡಿಸುವುದು.
ವಿರೋಧ ಏಕೆ?
ಮಸೂದೆಯನ್ನು ಅವಸರದಿಂದ ಮಂಡಿಸಲಾಗಿದೆ, ತಮ್ಮೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸಿಲ್ಲ ಎಂದು ಪ್ರತಿಪಕ್ಷದ ನಾಯಕರು ಟೀಕಿಸಿದ್ದಾರೆ.
- ಅಪಾಯದಲ್ಲಿ ಕೈಗಾರಿಕೆ ಮತ್ತು ಉದ್ಯೋಗಗಳು: ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರ ಪ್ರಕಾರ 2,000ಕ್ಕೂ ಹೆಚ್ಚು ಗೇಮಿಂಗ್ ಸ್ಟಾರ್ಟ್‌ಅಪ್‌ಗಳು ಮತ್ತು 2 ಲಕ್ಷಕ್ಕೂ ಹೆಚ್ಚು ಐಟಿ, ಎಐ ಮತ್ತು ಡಿಸೈನ್ ಉದ್ಯೋಗದ ಮೇಲೆ ಪರಿಣಾಮ ಬೀರಬಹುದು. ಮಸೂದೆಯಿಂದಾಗಿ 4 ಲಕ್ಷ ಉದ್ಯೋಗ ಕಡಿತಗೊಳ್ಳುವ ಭೀತಿ ಇದೆ ಎಂದು ಮತ್ತೋರ್ವ ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಹೇಳಿದ್ದಾರೆ.
- ವಿದೇಶಿ ಹೂಡಿಕೆಗೆ ಬೆದರಿಕೆ: ಮಸೂದೆಯು 6 ಬಿಲಿಯನ್ ಡಾಲರ್ ಹೂಡಿಕೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಕಾರ್ತಿ ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ.
- ಆದಾಯ ಮತ್ತು ತೆರಿಗೆ ನಷ್ಟ: ಅವರ ಪ್ರಕಾರ ಭಾರತವು ಜಿಎಸ್‌ಟಿ ಮತ್ತು ಆದಾಯ ತೆರಿಗೆ ನಷ್ಟದಿಂದ ವಾರ್ಷಿಕವಾಗಿ ಸುಮಾರು 20,000 ಕೋಟಿ ರೂ.ಗಳನ್ನು ಕಳೆದುಕೊಳ್ಳಬಹುದು. ಆನ್‌ಲೈನ್ ಗೇಮಿಂಗ್ ಪ್ರಸ್ತುತ ಶೇ. 28 ಜಿಎಸ್‌ಟಿ ಮತ್ತು ನಿವ್ವಳ ಗಳಿಕೆಯ ಮೇಲೆ ಶೇ. 30ರಷ್ಟು ತೆರಿಗೆಯನ್ನು ಒಳಗೊಂಡಿದೆ.
- ಕಾನೂನು ಬಾಹಿರ ಚಟುವಟಿಕೆ: ಆನ್‌ಲೈನ್ ಗೇಮಿಂಗ್ ನಿಷೇಧಿಸುವುದರಿಂದ ಬಳಕೆದಾರರು ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವ ಅಪಾಯವಿದೆ.
- ಅರ್ಥ ವ್ಯವಸ್ಥೆ ಕುಸಿತ: ಜಾಹೀರಾತು, ಡೇಟಾ ಸೆಂಟರ್, ಪ್ರಾಯೋಜಕತ್ವ ಮತ್ತು ಸೈಬರ್ ಭದ್ರತೆಗಾಗಿ ವಾರ್ಷಿಕವಾಗಿ ಖರ್ಚು ಮಾಡುವ 7,000 ಕೋಟಿ ರೂ. ಆದಾಯ ಕಣ್ಮರೆಯಾಗಬಹುದು.
- ರಾಷ್ಟ್ರೀಯ ಭದ್ರತೆಗೆ ಅಪಾಯ: ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟಾಗಬಹುದು.