ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Online Gaming Bill 2025: ಆನ್‌ಲೈನ್‌ ಗೇಮಿಂಗ್‌ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ

ಲೋಕಸಭೆಯಲ್ಲಿ ಅಂಗೀಕಾರಗೊಂಡ ಹಣವನ್ನು ತೊಡಗಿಸಿ ಆಡುವ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಮಹತ್ವದ ವಿದೇಯಕಕ್ಕೆ ಗುರುವಾರ (ಆಗಸ್ಟ್‌ 21) ರಾಜ್ಯಸಭೆಯಲ್ಲೂ ಅನುಮೋದನೆ ಸಿಕ್ಕಿದೆ. ಲೋಕಸಭೆಯ ಅನುಮೋದನೆಯ ನಂತರ ರಾಜ್ಯಸಭೆಯಲ್ಲಿಯೂ ಅಂಗೀಕಾರವಾದ ವಿದೇಯಕವು, ಇ-ಸ್ಪೋರ್ಟ್ಸ್ ಮತ್ತು ಆನ್‌ಲೈನ್ ಸಾಮಾಜಿಕ ಗೇಮಿಂಗ್ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ದೆಹಲಿ: ಲೋಕಸಭೆಯಲ್ಲಿ ಅಂಗೀಕಾರಗೊಂಡ ಹಣವನ್ನು ತೊಡಗಿಸಿ ಆಡುವ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಮಹತ್ವದ ವಿದೇಯಕಕ್ಕೆ ಗುರುವಾರ (ಆಗಸ್ಟ್‌ 21) ರಾಜ್ಯಸಭೆಯಲ್ಲೂ ಅನುಮೋದನೆ ಸಿಕ್ಕಿದೆ (Online Gaming Bill 2025). ಗೇಮಿಂಗ್‌ ಅಪ್ಲಿಕೇಷನ್‌ಗಳಿಂದಾಗಿ ಯುವ ಜನತೆಯಲ್ಲಿ ಹೆಚ್ಚುತ್ತಿರುವ ವ್ಯಸನ, ಮಾನಸಿಕ ಅಸ್ವಸ್ಥತೆ, ಹಣ ಅಕ್ರಮ ವರ್ಗಾವಣೆ ಹಾಗೂ ಹಣಕಾಸು ವಂಚನೆ ತಡೆಯುವುದು ಇದರ ಉದ್ದೇಶ. ಈ ಆನ್‌ಲೈನ್‌ ಗೇಮಿಂಗ್‌ ಉತ್ತೇಜನ ಮತ್ತು ನಿಯಂತ್ರಣ ವಿಧೇಯಕ-2025 ಅನ್ನು ಮಂಡಿಸಿದ ಐಟಿ ಸಚಿವ ಅಶ್ವಿನಿ ವೈಷ್ಣವ್‌, ಆನ್‌ಲೈನ್‌ ಗೇಮಿಂಗ್‌ನಿಂದ ವಾರ್ಷಿಕವಾಗಿ ಸುಮಾರು 20,000 ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿದರು.

ಲೋಕಸಭೆಯ ಅನುಮೋದನೆಯ ನಂತರ ರಾಜ್ಯಸಭೆಯಲ್ಲಿಯೂ ಅಂಗೀಕಾರವಾದ ವಿದೇಯಕವು, ಇ-ಸ್ಪೋರ್ಟ್ಸ್ ಮತ್ತು ಆನ್‌ಲೈನ್ ಸಾಮಾಜಿಕ ಗೇಮಿಂಗ್ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ವಿದೇಯಕವು ಜಾಹೀರಾತುಗಳನ್ನು ನಿಷೇಧಿಸುತ್ತದೆ. ಬ್ಯಾಂಕ್‌ ಇಲ್ಲವೇ ಹಣಕಾಸು ಸಂಸ್ಥೆಗಳು ನಡೆಸುವ ಹಣ ವರ್ಗಾವಣೆಗೂ ಕಡಿವಾಣ ಹಾಕಲಿದೆ. ಪೋರ್ಕರ್‌, ರಮ್ಮಿ ಮತ್ತಿತರ ಕಾರ್ಡ್‌ ಆಟ, ಆನ್‌ಲೈನ್‌ ಲಾಟರಿ, ಬೆಟ್ಟಿಂಗ್‌, ಜೂಜುಗಳನ್ನೂ ನಿಯಂತ್ರಿಸಲಿದೆ.

ಈ ಸುದ್ದಿಯನ್ನೂ ಓದಿ: ಆನ್‌ಲೈನ್‌ ಗೇಮಿಂಗ್‌ನಿಂದ ಬಳಕೆದಾರರಿಗೆ ಪ್ರತಿವರ್ಷ 20,000 ಕೋಟಿ ರೂ. ನಷ್ಟ; ಲೋಕಸಭೆಯಲ್ಲಿ ಮಂಡನೆಯಾದ ಮಸೂದೆಯಲ್ಲಿ ಏನಿದೆ?

ಶಿಕ್ಷೆಯ ವಿವರ

  • ಆನ್‌ಲೈನ್ ಮನಿ ಗೇಮ್‌ ಒದಗಿಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ 1 ಕೋಟಿ ರೂ. ದಂಡ.
  • ಮನಿ ಗೇಮ್‌ಗಳ ಜಾಹೀರಾತಿಗೆ ಉತ್ತೇಜನ ನೀಡಿದರೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ 50 ಲಕ್ಷ ರೂ. ದಂಡ.
  • ಮನಿ ಗೇಮ್‌ಗೆ ಸಂಬಂಧಿಸಿದ ಆರ್ಥಿಕ ವಹಿವಾಟು ನಡೆಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ 1 ಕೋಟಿ ರೂ. ದಂಡ.
  • ಪುನರಾವರ್ತಿತ ಅಪರಾಧ ಕಂಡುಬಂದರೆ 3-5 ವರ್ಷಗಳ ಜೈಲು ಶಿಕ್ಷೆ ಮತ್ತು 2 ಕೋಟಿ ರೂ.ವರೆಗೆ ದಂಡ.
  • ಕೆಲವು ಅಪರಾಧಗಳು ಜಾಮೀನು ರಹಿತ.
  • ಅಪರಾಧಗಳಿಗೆ ಸಂಬಂಧಿಸಿದ ಡಿಜಿಟಲ್/ಭೌತಿಕ ಆಸ್ತಿಯನ್ನು ಅಧಿಕಾರಿಗಳು ತನಿಖೆ ಮಾಡಬಹುದು, ಶೋಧಿಸಬಹುದು ಮತ್ತು ವಶಪಡಿಸಿಕೊಳ್ಳಬಹುದು.
  • ಕೆಲವು ಪ್ರಕರಣಗಳಲ್ಲಿ ವಾರಂಟ್ ಇಲ್ಲದೆ ಶೋಧಿಸುವ ಮತ್ತು ಬಂಧಿಸುವ ಅಧಿಕಾರ.

ಪ್ರಮುಖ ಉದ್ದೇಶ

  • ಸಕಾರಾತ್ಮಕ ಪರಿಣಾಮ ಬೀರುವ ಆಟಗಳಿಗೆ ಉತ್ತೇಜನ: ಇ-ಸ್ಪೋರ್ಟ್ಸ್ ಮತ್ತು ಸುರಕ್ಷಿತ ಸಾಮಾಜಿಕ ಅಥವಾ ಶೈಕ್ಷಣಿಕ ಆಟಗಳಿಗೆ ಪ್ರೋತ್ಸಾಹ.
  • ರಿಸ್ಕಿ ಮನಿ ಗೇಮ್‌ಗಳ ನಿಷೇಧ: ವ್ಯಸನ ಅಥವಾ ಆರ್ಥಿಕ ನಷ್ಟವನ್ನು ಉಂಟುಮಾಡುವ ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಗೇಮ್‌ಗಳ ನಿಷೇಧ.
  • ವಂಚನೆಯಿಂದ ರಕ್ಷಣೆ: ವಂಚನೆ, ಹಣ ವರ್ಗಾವಣೆ ಮತ್ತು ಇತರ ಆನ್‌ಲೈನ್ ಅಪಾಯಗಳಿಂದ ಬಳಕೆದಾರರ, ವಿಶೇಷವಾಗಿ ಯುವಕರ ರಕ್ಷಣೆ.
  • ಮಾರ್ಗಸೂಚಿ: ಭಾರತದ ಗೇಮಿಂಗ್ ಉದ್ಯಮವನ್ನು ಬೆಳೆಸಲು ನಿಯಮಗಳು ಮತ್ತು ಮಾರ್ಗಸೂಚಿಗಳ ಪರಿಚಯ.
  • ಆರ್ಥಿಕತೆಗೆ ಶಕ್ತಿ: ಜಗತ್ತಿನಲ್ಲೇ ಭಾರತವನ್ನು ಪ್ರಮುಖ ಗೇಮಿಂಗ್‌ ಹಬ್‌ ಆಗಿ ಪರಿವರ್ತಿಸುವುದು.
  • ಯುವ ಜನತೆಗೆ ಉತ್ತೇಜನ: ಕೌಶಲ್ಯ ಆಧಾರಿತ ಗೇಮಿಂಗ್ ಮತ್ತು ಇ-ಸ್ಪೋರ್ಟ್ಸ್‌ಗೆ ಪ್ರೋತ್ಸಾಹ.
  • ಸುರಕ್ಷತೆ: ಮನಿ ಗೇಮ್‌ನ ಜಾಲದಿಂದ ಕುಟುಂಬಗಳ ರಕ್ಷಣೆ.
  • ಜಾಗತಿಕ ನಾಯಕತ್ವ: ಜವಾಬ್ದಾರಿಯುತ ಗೇಮಿಂಗ್ ಮತ್ತು ಡಿಜಿಟಲ್ ನೀತಿಯಲ್ಲಿ ಭಾರತದ ಪಾತ್ರವನ್ನು ಬಲಪಡಿಸುವುದು.