Delhi Blast: ಜಮ್ಮು ಕಾಶ್ಮೀರದ ಯುವಕರೇ ಇವರ ಟಾರ್ಗೆಟ್; ಪಾಕಿಸ್ತಾನ, ದುಬೈನಿಂದ ಮಾಡ್ಯೂಲ್ ನಿರ್ವಹಿಸುತ್ತಿದ್ದ ಉಗ್ರರು!
Red Fort Blast: ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಮಾಡ್ಯೂಲ್ ಬಗ್ಗೆ ತನಿಖೆ ನಡೆಯುತ್ತಿರುವಾಗ, ಗಡಿಯಾಚೆಯಿಂದ ಆನ್‌ಲೈನ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳದವರು ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇರಿಸಿ, ತಮ್ಮ ಸಂಭಾವ್ಯ ನೇಮಕಾತಿಗಳ ಮೇಲೆ ಕಣ್ಣಿಟ್ಟಿದ್ದರು.
ಸಾಂಧರ್ಬಿಕ ಚಿತ್ರ -
ನವದೆಹಲಿ: ದೆಹಲಿ ಸ್ಫೋಟಕ್ಕೆ (Delhi Blast) ಸಂಬಂಧಿಸಿದಂತೆ ಪಾಕಿಸ್ತಾನ (Pakistan) ಮೂಲದ ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಮಾಡ್ಯೂಲ್ ಬಗ್ಗೆ ತನಿಖೆ ನಡೆಯುತ್ತಿರುವಾಗ, ಗಡಿಯಾಚೆಯಿಂದ ಆನ್‌ಲೈನ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಕಳೆದ 48 ಗಂಟೆಗಳಲ್ಲಿ, ಜಮ್ಮುವಿನ ಪೂಂಚ್, ರಾಜೌರಿ, ದೋಡಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಫೋನ್ ಸಂಖ್ಯೆಗಳು ಯುವಕರನ್ನು ಗುರಿಯಾಗಿಸಲು ಉಗ್ರರು ಪ್ರಯತ್ನಿಸಿವೆ ಎಂದು ತಿಳಿದು ಬಂದಿದೆ. ಈ ಖಾತೆಗಳು ಮತ್ತು ಸಂಖ್ಯೆಗಳು ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ದುಬೈ ಮೂಲದವು.
ಭಯೋತ್ಪಾದನಾ ನಿಗ್ರಹ ದಳದವರು ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇರಿಸಿ, ತಮ್ಮ ಸಂಭಾವ್ಯ ನೇಮಕಾತಿಗಳ ಮೇಲೆ ಕಣ್ಣಿಟ್ಟಿದ್ದರು. ಧಾರ್ಮಿಕ ಉಗ್ರವಾದದ ಕಡೆಗೆ ಒಲವು ಹೊಂದಿರುವ ಅಥವಾ ಉಗ್ರಗಾಮಿ ಪ್ರವೃತ್ತಿಯನ್ನು ಹೊಂದಿರುವ ಯುವಕರನ್ನು ಈ ಗುಂಪು ಸೆಳೆಯುತ್ತಿತ್ತು. ಮೊದಲು ಯುವಕರಿಗೆ ಧಾರ್ಮಿಕತೆಯ ಒಲವನ್ನು ತೋರಿ ಬಳಿಕ ಉಗ್ರವಾದವನ್ನು ಭೋದಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಜೈಶ್-ಎ-ಮೊಹಮ್ಮದ್‌ನ ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿದಾಗಿನಿಂದ ಭದ್ರತಾ ಸಂಸ್ಥೆಗಳು ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಟ್ಟಿದ್ದವು. ಕೆಲವು ದಿನಗಳ ಹಿಂದೆ, ಎರಡು ಮೂಲಭೂತ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಇಬ್ಬರು ಅಪ್ರಾಪ್ತ ವಯಸ್ಕರು ನಡೆಸುತ್ತಿದ್ದಾರೆ ಎಂದು ಗುರುತಿಸಲಾಗಿತ್ತು. ಈ ಖಾತೆಗಳನ್ನು ಪಾಕಿಸ್ತಾನಿ ನಿರ್ವಾಹಕ ಅಹ್ಮದ್ ಸಲಾರ್ ಅಲಿಯಾಸ್ ಸಾಕಿಬ್ ಮಾರ್ಗದರ್ಶನ ಮತ್ತು ನಿರ್ದೇಶನದಡಿಯಲ್ಲಿ ನಿರ್ವಹಿಸಲಾಗುತ್ತಿತ್ತು. ಲಷ್ಕರ್-ಎ-ತೈಬಾ ಭಯೋತ್ಪಾದಕ ಗುಂಪಿನ ಪ್ರಾಕ್ಸಿ ಗುಂಪಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಗೆ ಸಂಪರ್ಕ ಹೊಂದಿರುವ ಪಾಕಿಸ್ತಾನ ಮೂಲದ ಪ್ರಚಾರಕ.
ಜೈಶ್-ಎ-ಮೊಹಮ್ಮದ್ ತನ್ನ ಮಹಿಳಾ ಬ್ರಿಗೇಡ್ ಜಮಾತ್-ಉಲ್-ಮೊಮಿನಾತ್‌ಗೆ ಸಂಭಾವ್ಯ ನೇಮಕಾತಿದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ನಂಬಲಾಗಿದೆ. ಮಹಿಳಾ ಬ್ರಿಗೇಡ್ ಅನ್ನು ಜೈಶ್ ಮುಖ್ಯಸ್ಥ ಮಸೂದ್ ಅಜರ್ ನ ಸಹೋದರಿ ಸಾದಿಯಾ ಅಜರ್ ನೇತೃತ್ವ ವಹಿಸಿದ್ದಾಳೆ. ಸಾದಿಯಾ ಮತ್ತು ಇನ್ನೊಬ್ಬ ಸಹೋದರಿ ಸಮೈರಾ, ಸದಸ್ಯರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಆನ್‌ಲೈನ್ ತರಬೇತಿ ಮತ್ತು ನೇಮಕಾತಿ ಅಭಿಯಾನದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಸಿದ್ದಿಕಿ ಬಂಧನ
ನ. 10ರಂದು ಸಂಭವಿಸಿದ್ದ ದೆಹಲಿ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಡಾ. ಉಮರ್ ಹಾಗೂ ಆತನ ಸಂಗಡಿಗರ ಭಯೋತ್ಪಾದನೆಗೆ ಆರ್ಥಿಕ ಸಹಾಯ ನೀಡಿರುವ ಆರೋಪ ಹೊತ್ತಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಜವಾದ್ ಸಿದ್ದಿಕಿ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ. ಜಾರಿ ನಿರ್ದೇಶನಾಲಯವು (ಇ.ಡಿ.) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ), 2002 ರ ಸೆಕ್ಷನ್ 19 ರ ಅಡಿಯಲ್ಲಿ ಜವಾದ್ ಸಿದ್ದಿಕಿಯನ್ನು ವಶಕ್ಕೆ ಪಡೆದು ಕೊಂಡಿದೆ.