ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಹಲ್ಗಾಮ್‌ ದಾಳಿಗೆ ಪ್ರತೀಕಾರ; 250 ಕಿಲೋ ಮೀಟರ್ ಬೆನ್ನಟ್ಟಿ ಉಗ್ರರ ಬೇಟೆಯಾಡಿದ ಭಾರತೀಯ ಸೇನೆ

ಪಹಲ್ಗಾಮ್ ದಾಳಿಯಲ್ಲಿ 26 ಅಮಾಯಕರನ್ನು ಹತ್ಯೆಗೈದ ಮೂವರು ಉಗ್ರರನ್ನು ಭಾರತೀಯ ಸೇನೆ 93 ದಿನಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಹೊಡೆದುರುಳಿಸಿದೆ. ಆಪರೇಷನ್ ಮಹದೇವ್ ಕಾರ್ಯಾಚರಣೆಯ ಮೂಲಕ 250 ಕಿಲೋ ಮೀಟರ್‌ಗಳಷ್ಟು ಬೆನ್ನಟ್ಟಿ ಉಗ್ರರ ಅಡಗುತಾಣ ಪತ್ತೆಹಚ್ಚಿ ಎನ್‌ಕೌಂಟರ್ ನಡೆಸಲಾಗಿದೆ.

ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರರು (ಸಂಗ್ರಹ ಚಿತ್ರ)

ದೆಹಲಿ, ಏ. 21: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಧರ್ಮದ ಆಧಾರದ ಮೇಲೆ ಪ್ರವಾಸಿಗರನ್ನು ಗುರುತಿಸಿ ನಡೆಸಿದ ಈ ಹತ್ಯಾಕಾಂಡಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳು, ಆಪರೇಷನ್ ಮಹದೇವ್ (Operation Mahadev) ಎಂಬ ಬೃಹತ್ ಕಾರ್ಯಾಚರಣೆಯ ಮೂಲಕ ಕೊನೆಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಿವೆ.

2025ರ ಏಪ್ರಿಲ್ 22ರಂದು ಲಷ್ಕರ್-ಎ-ತೈಬಾ ಸಂಘಟನೆಯ ಮೂವರು ಪಾಕಿಸ್ತಾನಿ ಉಗ್ರರು ನಡೆಸಿದ ಈ ದಾಳಿಯಲ್ಲಿ 26 ಮಂದಿ ಅಮಾಯಕರು ಸಾವನ್ನಪ್ಪಿದ್ದರು. ಸುಲೈಮಾನ್ ಶಾ (Sulaiman Shah), ಹಮ್ಜಾ ಅಫ್ಘಾನಿ(Hamza Afgani) ಮತ್ತು ಜಿಬ್ರಾನ್ ಭಾಯ್ (Jibran Bhai) ಎಂಬ ಉಗ್ರರು ಈ ಕೃತ್ಯ ಎಸಗಿದ್ದರು. ದಾಳಿಯ ಬೆನ್ನಲ್ಲೇ ಈ ಉಗ್ರರು ಕಣಿವೆ ರಾಜ್ಯದಿಂದ ತಪ್ಪಿಸಿಕೊಳ್ಳದಂತೆ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟವು.

93 ದಿನಗಳ ನಿರಂತರ ಕಾರ್ಯಾಚರಣೆ

ಭಾರತೀಯ ಸೇನೆ, ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಪ್ಯಾರಾ (ವಿಶೇಷ ಪಡೆ) ಸೇರಿ ವಿವಿಧ ಏಜೆನ್ಸಿಗಳು ಒಗ್ಗೂಡಿ ಈ ಕಾರ್ಯಾಚರಣೆ ನಡೆಸಿದವು. ದಕ್ಷಿಣ ಕಾಶ್ಮೀರದ ಹಪತ್ನಾರ್ ಮತ್ತು ಟ್ರಾಲ್‌ನಿಂದ ಹಿಡಿದು ದಾಚಿಗಾಮ್‌ನ ಅತ್ಯಂತ ಕಡಿದಾದ ಅರಣ್ಯ ಪ್ರದೇಶದವರೆಗೂ ಉಗ್ರರನ್ನು ಬೆನ್ನಟ್ಟಲಾಯಿತು. 300 ಚದರ ಕಿಲೋಮೀಟರ್‌ಗಳಿಗೂ ಹೆಚ್ಚು ವಿಸ್ತೀರ್ಣಕ್ಕೆ ವಿಸ್ತರಿಸಿದ್ದ ಕಾರ್ಯಾಚರಣೆಯನ್ನು ತಂತ್ರಜ್ಞಾನದ ನೆರವಿನಿಂದ ಹಂತಹಂತವಾಗಿ ಕಡಿಮೆ ಮಾಡುತ್ತ ಬರಲಾಯಿತು. ಡ್ರೋನ್ ಮತ್ತು ಸುಧಾರಿತ ಸಂವೇದಕಗಳನ್ನು (Sensors) ಬಳಸಿ ದಟ್ಟ ಕಾಡಿನಲ್ಲಿ ಅಡಗಿದ್ದ ಉಗ್ರರ ಚಲನವಲನಗಳನ್ನು ಪತ್ತೆಹಚ್ಚಲಾಯಿತು.

ಹಾರ್ಮುಜ್ ಜಲಸಂಧಿ ದಾಟಿದ ಮೊದಲ ಭಾರತೀಯ ಗ್ಯಾಸ್ ಟ್ಯಾಂಕರ್ ‘ಜಗ್ ವಿಕ್ರಮ್’

93 ದಿನಗಳ ನಿರಂತರ ಕಾರ್ಯಾಚರಣೆ

2025ರ ಜುಲೈ 28ರಂದು ಈ ಕಾರ್ಯಾಚರಣೆ ಅಂತಿಮ ಘಟ್ಟ ತಲುಪಿತು. ಪ್ಯಾರಾ ವಿಶೇಷ ಪಡೆಯ ತಂಡವೊಂದು ದುರ್ಗಮ ಹಾದಿಯಲ್ಲಿ ಸುಮಾರು 10 ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಸಾಗಿ ಉಗ್ರರ ಅಡಗುತಾಣವನ್ನು ತಲುಪಿತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರೂ ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ಸುಮಾರು 250 ಕಿಲೋ ಮೀಟರ್‌ಗಳಷ್ಟು ದೂರ ಉಗ್ರರನ್ನು ಬೆನ್ನಟ್ಟಿ ನಡೆಸಿದ ಈ 93 ದಿನಗಳ ಸುದೀರ್ಘ ಕಾರ್ಯಾಚರಣೆಯು ಭಾರತೀಯ ಸೇನೆಯ ಅಚಲ ಸಂಕಲ್ಪ ಮತ್ತು ವೃತ್ತಿಪರತೆಗೆ ಸಾಕ್ಷಿ. ಅಮಾಯಕರ ರಕ್ತ ಹರಿಸಿದವರು ಭಾರತದ ಮಣ್ಣಿನಲ್ಲಿ ಅಡಗಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನಿಸಲಾಗಿದೆ.