ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಸ್‌ಐಆರ್‌ ಅಕ್ರಮ ಆರೋಪ: ಅಕ್ಟೋಬರ್ 23ರಿಂದ ದೇಶಾದ್ಯಂತ ಪ್ರತಿಭಟನೆಗೆ ಸಿಜೆಪಿ ಸಜ್ಜು

CJP Protest: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಅಕ್ಟೋಬರ್ 23 ರಿಂದ ದೇಶಾದ್ಯಂತ ಜನಾಂದೋಲನವನ್ನು ಪ್ರಾರಂಭಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ ಘೋಷಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಬೇಕೆಂಬ ತನ್ನ ಬೇಡಿಕೆಯನ್ನು ಸಿಜೆಪಿ ಪುನರುಚ್ಚರಿಸಿತು.

(ಸಂಗ್ರಹ ಚಿತ್ರ)

ನವದೆಹಲಿ, ಅ.15: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಅಕ್ಟೋಬರ್ 23 ರಿಂದ ದೇಶಾದ್ಯಂತ ಜನಾಂದೋಲನವನ್ನು ಪ್ರಾರಂಭಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (Cockroach Janata Paty) ಘೋಷಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿ, ಮುಂಬರುವ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ತನ್ನ ಅಭಿಯಾನವನ್ನು ವಿಸ್ತರಿಸಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸುವುದಾಗಿ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಬೇಕೆಂಬ ತನ್ನ ಬೇಡಿಕೆಯನ್ನು ಸಿಜೆಪಿ ಪುನರುಚ್ಚರಿಸಿತು.

ಅಕ್ಟೋಬರ್ 23ರಿಂದ ತಮ್ಮ ಅಭಿಯಾನದ ಮೂಲಕ ಎದುರಾಳಿಗಳಿಗೆ ಹಿನ್ನಡೆ ಉಂಟುಮಾಡುತ್ತೇವೆ ಎಂದು ಸಿಜೆಪಿ ಹೇಳಿದೆ. ರೈತರು, ದಲಿತರು, ವಿದ್ಯಾರ್ಥಿಗಳು ಮತ್ತು ಯುವಜನರನ್ನು ಒಗ್ಗೂಡಿಸಿ ಅಭಿಯಾನದಲ್ಲಿ ಭಾಗವಹಿಸುವಂತೆ ಮಾಡಲಾಗುವುದು ಎಂದು ಸಿಜೆಪಿ ತಿಳಿಸಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ದೆಹಲಿಯಲ್ಲಿ ದೊಡ್ಡ ಪ್ರತಿಭಟನೆ ನಡೆದಿತ್ತು. ಆ ಪ್ರತಿಭಟನೆ ನಡೆದ ಕೆಲವೇ ದಿನಗಳ ಬಳಿಕ ಈ ಘೋಷಣೆ ಹೊರಬಿದ್ದಿದೆ.

ಜ್ಞಾನೇಶ್ ಕುಮಾರ್‌ ರಕ್ಷಣೆಗಾಗಿ ದೇಶದ ಜನರ ವಿರುದ್ಧ ಮೋದಿ, ಶಾ ನಿಂತಿದ್ದಾರೆ; ಪ್ರಧಾನಿ ವಿರುದ್ಧ ಕಿಡಿಕಾರಿದ ಅಭಿಜೀತ್ ದೀಪ್ಕೆ ಆರೋಪ

ಅಕ್ಟೋಬರ್ 10ರಂದು ನಡೆದ ಪ್ರತಿಭಟನೆಯನ್ನು ಪೊಲೀಸರು ಬಲಪ್ರಯೋಗದ ಮೂಲಕ ನಿಯಂತ್ರಿಸಿದರು. ಸಿಜೆಪಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೇರಿದಂತೆ ಹಲವು ನಾಯಕರು ಜಂತರ್ ಮಂತರ್ ತಲುಪುವ ಮೊದಲೇ ಅವರನ್ನು ಬಂಧಿಸಲಾಯಿತು. ಅಲ್ಲದೆ, ದೆಹಲಿಯ ವಿವಿಧ ಭಾಗಗಳಲ್ಲಿ ಸಾವಿರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಕೇಂದ್ರ ದೆಹಲಿಯ ಕೆಲವು ಭಾಗಗಳಲ್ಲಿ ಬ್ಯಾರಿಕೇಡ್‌ಗಳು ಮತ್ತು ಸಾರ್ವಜನಿಕ ಸಾರಿಗೆ ಮತ್ತು ಇಂಟರ್ನೆಟ್ ಸೇವೆಗಳ ಮೇಲಿನ ನಿರ್ಬಂಧಗಳು ಸೇರಿದಂತೆ ಭಾರಿ ಭದ್ರತಾ ನಿರ್ಬಂಧಗಳನ್ನು ವಿಧಿಸಲಾಯಿತು. ಜಂತರ್ ಮಂತರ್‌ನಲ್ಲಿ ಭಾರಿ ಭದ್ರತೆಯೊಂದಿಗೆ, ಕನ್ನಾಟ್ ಪ್ಲೇಸ್, ದಿಲ್ಲಿ ಹಾತ್ ಮತ್ತು ರಾಜ್ ಘಾಟ್ ಸೇರಿದಂತೆ ಸ್ಥಳಗಳಲ್ಲಿ ಪ್ರತಿಭಟನಾಕಾರರು ಸಣ್ಣ ಪ್ರತಿಭಟನೆಗಳನ್ನು ನಡೆಸಿದರು.