ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಸ್ರೋ ತೊರೆದ 100ಕ್ಕೂ ಹೆಚ್ಚು ವಿಜ್ಞಾನಿಗಳು:‌ ಕೇಂದ್ರ ಸರ್ಕಾರಕ್ಕೆ ತಲೆನೋವಾದ ಸಾಮೂಹಿಕ ರಾಜೀನಾಮೆ

Over 100 scientists leave ISRO: 100ಕ್ಕೂ ಹೆಚ್ಚು ವಿಜ್ಞಾನಿಗಳು ಇಸ್ರೋದಿಂದ ಹೊರ ನಡೆದಿದ್ದಾರೆ. ಬಾಹ್ಯಾಕಾಶ ಇಲಾಖೆ ಅಧಿಕೃತವಾಗಿ ನಿರ್ಗಮನಗಳ ಸಂಖ್ಯೆಯನ್ನು ಬಹಿರಂಗಪಡಿಸದಿದ್ದರೂ, ಇತ್ತೀಚಿನ ತಿಂಗಳಲ್ಲಿ 100ರಿಂದ 120 ವಿಜ್ಞಾನಿಗಳು ರಾಜೀನಾಮೆ ನೀಡಿರಬಹುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಜು. 16: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳ ಸಾಮೂಹಿಕ ರಾಜೀನಾಮೆಯಿಂದ ಬಳಲುತ್ತಿದೆ. ಇತ್ತೀಚಿನ ತಿಂಗಳಲ್ಲಿ ಕನಿಷ್ಠ 100 ವಿಜ್ಞಾನಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಆತಂಕಗೊಂಡಿರುವ ಕೇಂದ್ರ ಸರ್ಕಾರ (Central Government) ವಿಶೇಷವಾಗಿ ಗಗನಯಾನ್‌ನಂತಹ ಮಹತ್ವದ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜ್ಞಾನಿಗಳ ಸ್ವಯಂಪ್ರೇರಿತ ರಾಜೀನಾಮೆ ಮತ್ತು ನಿವೃತ್ತಿ ಕುರಿತ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲು ಮುಂದಾಗಿದೆ.

ಗಗನಯಾನ ಮತ್ತು ಇತರ ಪ್ರಮುಖ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಗ್ರೂಪ್ ಎ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯಿಂದ ರಾಜೀನಾಮೆ ಅಥವಾ ಸ್ವಯಂಪ್ರೇರಿತ ನಿವೃತ್ತಿ ವಿನಂತಿಗಳನ್ನು ಸ್ವೀಕರಿಸದಂತೆ ಕೇಂದ್ರವು ಇಸ್ರೋಗೆ ನಿರ್ದೇಶನ ನೀಡಿದೆ ಎಂದು ಜುಲೈ 14ರಂದು ಬಿಡುಗಡೆಯಾದ ಆಂತರಿಕ ದಾಖಲೆಯಲ್ಲಿ ತಿಳಿಸಲಾಗಿದೆ. ಇನ್ನು ಮುಂದೆ ರಾಜೀನಾಮೆ ಹಾಗೂ ನಿವೃತ್ತಿಗೆ ಸಂಬಂಧಿಸಿದ ಎಲ್ಲ ಮನವಿಗಳನ್ನು ಬಾಹ್ಯಾಕಾಶ ಇಲಾಖೆಗೆ ಕಡ್ಡಾಯವಾಗಿ ಕಳುಹಿಸಲಾಗುವುದು ಎಂದು ಜ್ಞಾಪಕ ಪತ್ರವು ಹೇಳುತ್ತದೆ.

ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಮತ್ತೆ ಬಾಂಬ್ ಬೆದರಿಕೆ ಸಂದೇಶ!

ಈ ಕ್ರಮಕ್ಕೆ ಕಾರಣವೇನು?

ಸುಮಾರು 100 ವಿಜ್ಞಾನಿಗಳು ರಾಜೀನಾಮೆ ಸಲ್ಲಿಸಿದ ನಂತರ ಕೇಂದ್ರದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬಾಹ್ಯಾಕಾಶ ಇಲಾಖೆ ಅಧಿಕೃತವಾಗಿ ನಿರ್ಗಮನಗಳ ಸಂಖ್ಯೆಯನ್ನು ಬಹಿರಂಗಪಡಿಸದಿದ್ದರೂ, ಇತ್ತೀಚಿನ ತಿಂಗಳಲ್ಲಿ 100 ರಿಂದ 120 ವಿಜ್ಞಾನಿಗಳು ರಾಜೀನಾಮೆ ನೀಡಿರಬಹುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿರುವ ಯುಆರ್ ರಾವ್ ಉಪಗ್ರಹ ಕೇಂದ್ರದಿಂದ (ಯುಆರ್‌ಎಸ್‌ಸಿ) ಸುಮಾರು 80 ವಿಜ್ಞಾನಿಗಳು ಹೊರ ನಡೆದಿದ್ದಾರೆ. ಕೇರಳಂನ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ)ದ ಸುಮಾರು 20 ವಿಜ್ಞಾನಿಗಳುನ ರಾಜೀನಾಮೆ ನೀಡಿರುವುದು ವರದಿಯಾಗಿದೆ. ಮೂಲಗಳ ಪ್ರಕಾರ 100 ರಾಜೀನಾಮೆಗಳನ್ನು ದೃಢಪಡಿಸಿದರೂ, ಈ ಸಂಖ್ಯೆ ಸುಮಾರು 120 ಆಗಿರಬಹುದು ಎಂದು ವರದಿಯೊಂದು ತಿಳಿಸಿದೆ.

ಸಾಮೂಹಿಕ ರಾಜೀನಾಮೆಗಳನ್ನು ಅಂಗೀಕರಿಸಿದ ಇಸ್ರೋ ಅಧ್ಯಕ್ಷ ವಿ. ನಾರಾಯಣ, “ಹೌದು, ಸಾಕಷ್ಟು ಜನ ಸಂಸ್ಥೆಯನ್ನು ತೊರೆಯುತ್ತಾರೆ. ಆದರೆ ಅದು ಪ್ರತಿಯೊಂದು ಸಂಸ್ಥೆಯಲ್ಲೂ ನಡೆಯುವ ಸಾಮಾನ್ಯ ಪ್ರಕ್ರಿಯೆ. ಹೊಸ ಕ್ರಮ ಕೇವಲ ಸಿಬ್ಬಂದಿಯನ್ನು ಉಳಿಸಿಕೊಳ್ಳುವುದಕ್ಕಷ್ಟೇ ಅಲ್ಲ, ಪ್ರಮುಖ ಯೋಜನೆಗಳಿಗೆ ಏಕಾಏಕಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಕ್ಕೂ ಆಗಿದೆ. ಒಬ್ಬರು ಸಂಸ್ಥೆಯನ್ನು ತೊರೆದರೂ, ಅವರ ಜವಾಬ್ದಾರಿಯನ್ನು ಮತ್ತೊಬ್ಬರು ವಹಿಸಿಕೊಳ್ಳುತ್ತಾರೆ. ಈ ವಿಷಯವನ್ನು ನಾವು ಸಮರ್ಪಕವಾಗಿ ನಿರ್ವಹಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.