ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಗಿ ಭದ್ರತೆಯ ನಡುವೆ ನೀಟ್ ಪರೀಕ್ಷೆ ಬರೆದ 20 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು

ಮೇ ತಿಂಗಳ ಆರಂಭದಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಭಾನುವಾರ ನಡೆಸಲಾದ ನೀಟ್ ಮರು ಪರೀಕ್ಷೆಯನ್ನು ಬಿಗಿ ಭದ್ರತೆಯ ನಡುವೆ ನಡೆಸಲಾಗಿದೆ. ಸುಮಾರು 20 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಸೀಟು ಆಕಾಂಕ್ಷಿಗಳು ಪರೀಕ್ಷೆ ಬರೆದಿದ್ದರು. ಆದರೂ ಕಳೆದ ಮೇ ತಿಂಗಳಲ್ಲಿ ಹಾಜರಾತಿಯನ್ನು ಗಮನಿಸಿದರೆ ಈ ಬಾರಿ ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಗಳ ಪ್ರಮಾಣ ಕಡಿಮೆಯಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಬಿಗಿ ಭದ್ರತೆಯ ನಡುವೆ ಜೂನ್ 21ರಂದು ಭಾನುವಾರ ದೇಶದ ಒಟ್ಟು 5,440 ಕೇಂದ್ರಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಸೀಟು (medical aspirants) ಆಕಾಂಕ್ಷಿಗಳು NEET-UG 2026 ಮರು ಪರೀಕ್ಷೆಯನ್ನು (NEET-UG 2026 re-exam) ಬರೆದಿದ್ದಾರೆ. ಮರು ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡ ಅಭ್ಯರ್ಥಿಗಳ ನಿಖರವಾದ ಸಂಖ್ಯೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬಿಡುಗಡೆ ಮಾಡಿಲ್ಲ. ಆದರೆ 20 ಲಕ್ಷಕ್ಕೂ ಹೆಚ್ಚು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಲಾಗಿದೆ. ಇದರಲ್ಲಿ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕಳೆದ ಮೇ 3 ರಂದು ನಡೆದ ನೀಟ್ ಪರೀಕ್ಷೆಗೆ 22,79,743 ಅಭ್ಯರ್ಥಿಗಳು ನೋಂದಾಯಿಸಿ ಕೊಂಡಿದ್ದು, 22,75,011 ಮಂದಿ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಇದರಲ್ಲಿ 22,05,035 ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪ ಕೇಳಿ ಬಂದಿದ್ದರಿಂದ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 21ರಂದು ಭಾನುವಾರ ಮರು ಪರೀಕ್ಷೆಯನ್ನು ಬಿಗಿ ಭದ್ರತೆಯಲ್ಲಿ ನಡೆಸಲಾಗಿದೆ.

ನೀಟ್ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆಯೂ ಸೋರಿಕೆ? ವೈರಲ್ ವಿಡಿಯೊದ ಅಸಲಿಯತ್ತೇನು?

ದೇಶದ 5,440 ಕೇಂದ್ರಗಳಲ್ಲಿ ಭಾನುವಾರ ನಡೆದ ಪದವಿಪೂರ್ವ ರಾಷ್ಟ್ರೀಯ ಅರ್ಹತಾ ಪ್ರವೇಶ ಮರುಪರೀಕ್ಷೆ 2026 ರಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎನ್ನಲಾಗಿದೆ. ಮೇ 3 ರಂದು ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧವಾಗಿ ಕೇಂದ್ರ ತನಿಖಾ ದಳ (ಸಿಬಿಐ) ಇದುವರೆಗೆ 13 ಮಂದಿಯನ್ನು ಬಂಧಿಸಿದೆ.

ಮೇ 3 ರಂದು ನಡೆದ ಪರೀಕ್ಷೆಯ ಹಾಜರಾತಿ ಪ್ರಮಾಣ ಶೇಕಡಾ 96.92 ಆಗಿದ್ದು, ಇದಕ್ಕೆ ಹೋಲಿಸಿದರೆ ಜೂನ್ 21 ರಂದು ನಡೆದ ಮರು ಪರೀಕ್ಷೆಯಲ್ಲಿ ಹಾಜರಾತಿ ಪ್ರಮಾಣ ಕುಸಿದಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮಹಾನಿರ್ದೇಶಕ (ಡಿಜಿ) ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.

ನೀಟ್ ಮರು ಪರೀಕ್ಷೆಗೆ ಹಾಜರಾತಿ ಕಡಿಮೆಯಾಗಿದೆ. ಇದು ಸ್ವಾಭಾವಿಕ. ಯಾಕೆಂದರೆ ಹೆಚ್ಚಿನ ವಿದ್ಯಾರ್ಥಿಗಳು ಇತರ ಕೋರ್ಸ್‌ಗಳಿಗೆ ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರಗಳು, ಸರ್ಕಾರಿ ಇಲಾಖೆಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸಂಪೂರ್ಣ ಬೆಂಬಲ ನೀಡಿವೆ. ಇದರಿಂದಾಗಿ ಈ ಬಾರಿ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸುವುದು ಸಾಧ್ಯವಾಯಿತು. ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಯಾವುದೇ ಇ-ಮೇಲ್‌ ಅಥವಾ ದೂರುಗಳು ಬಂದಿಲ್ಲ. ಹೀಗಾಗಿ ಪರೀಕ್ಷೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ ಎನ್ನುವ ವಿಶ್ವಾಸವಿದೆ ಎಂದರು.

ಶೀಘ್ರದಲ್ಲೇ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲಾಗುವುದು. ಮರು ಪರೀಕ್ಷೆಯನ್ನು ನಾವು 37 ದಿನಗಳಲ್ಲಿ ನಡೆಸಿದ್ದೇವೆ. ಹೀಗಾಗಿ ಫಲಿತಾಂಶಗಳು ಕೂಡ ನಿರೀಕ್ಷಿಸಿರುವುದಕ್ಕಿಂತ ವೇಗವಾಗಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ನೀಟ್ ಮರುಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರದ ತಲಾ 45 ಪ್ರಶ್ನೆಗಳು, ಜೀವಶಾಸ್ತ್ರದ 90 ಪ್ರಶ್ನೆಗಳು ಇದರಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಿಂದ ತಲಾ 45 ಪ್ರಶ್ನೆಗಳನ್ನು ಒಳಗೊಂಡಿತ್ತು. ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದೆ.

10,000 ಕ್ಕೂ ಹೆಚ್ಚು ಅಂಗವಿಕಲರು ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಗೆ ವ್ಯಾಪಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ರಸ್ತೆ ಅಪಘಾತ, ಕಿಮೊಥೆರಪಿ ಸೇರಿದಂತೆ ವೈದ್ಯಕೀಯ ಅಗತ್ಯತೆ ಹೊಂದಿದ್ದ ಸುಮಾರು 81 ಅಭ್ಯರ್ಥಿಗಳಿಗೆ ವಿಶೇಷ ವ್ಯವಸ್ಥೆಗಳನ್ನು ಕೂಡ ಒದಗಿಸಲಾಗಿದೆ.

ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ದೇಶಾದ್ಯಂತ ಸುಮಾರು 7,00,000 ಅಧಿಕಾರಿಗಳಲ್ಲಿ ಪೊಲೀಸ್ ತಂಡಗಳು, ವೀಕ್ಷಕರು ಮತ್ತು ಪರೀಕ್ಷಾ ಸಿಬ್ಬಂದಿ ಕೂಡ ಸೇರಿದ್ದರು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ.

ಹಾಲ್‌ ಟಿಕೆಟ್‌ನಲ್ಲಿ ಇರುವವರೇ ಯಾರೋ, ಪರೀಕ್ಷೆಗೆ ಬಂದವರೇ ಇನ್ಯಾರೋ! ನೀಟ್ ಬರೆಯಲು ಬಂದ 9 ವಂಚಕರು ಖೆಡ್ಡಾಕ್ಕೆ

ಬೆಂಗಳೂರು ಮತ್ತು ದೆಹಲಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಡವಾಗಿ ಬಂದ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಆನ್ ಲೈನ್ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5.15 ರವರೆಗೆ ಆಫ್ ಲೈನ್ ಪರೀಕ್ಷೆಗಳನ್ನು ನಡೆಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author