ಹೊಸದಿಲ್ಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ನಡೆದ ಉಗ್ರರ ದಾಳಿಯ ಬಳಿಕ ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಾಳಿದೆ (Pahalgam Attack). ದೇಶದಲ್ಲಿರುವ ಪಾಕ್ ಪ್ರಜೆಗಳ ವೀಸಾ ರದ್ದುಗೊಳಿಸಿದ್ದು, ಗಡುವಿನ ಬಳಿಕವೂ ಭಾರತದಲ್ಲೇ ಉಳಿದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಮಧ್ಯೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey) ಅವರು ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿ, ಭಾರತೀಯರನ್ನು ಮದುವೆಯಾಗಿ ಇಲ್ಲಿನ ಪೌರತ್ವ ಪಡೆಯದೆ ವಾಸಿಸುತ್ತಿರುವ ಲಕ್ಷಾಂತರ ಪಾಕಿಸ್ತಾನಿ ಮಹಿಳೆಯರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನು ಅವರು ಪಾಕಿಸ್ತಾನ ಉಗ್ರವಾದದ ಹೊಸ ಮುಖ ಎಂದು ಕರೆದಿದ್ದಾರೆ.
5 ಲಕ್ಷಕ್ಕಿಂತ ಅಧಿಕ ಪಾಕಿಸ್ತಾನಿ ಮಹಿಳೆಯರು ಭಾರತೀಯರನ್ನು ಮದುವೆಯಾಗಿ ಇಲ್ಲೇ ಉಳಿದುಕೊಂಡಿದ್ದಾರೆ. ಆದರೆ ಭಾರತೀಯ ಪೌರತ್ವವನ್ನು ಅವರು ಪಡೆದುಕೊಂಡಿಲ್ಲ ಎಂದು ವಿವರಿಸಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಎಕ್ಸ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Pahalgam Attack: ಜಮ್ಮು ಕಾಶ್ಮೀರದ 48 ಪ್ರವಾಸಿ ತಾಣಗಳು ಬಂದ್ ; ಸರ್ಕಾರದಿಂದ ಆದೇಶ
ನಿಶಿಕಾಂತ್ ದುಬೆ ಹೇಳಿದ್ದೇನು?
ʼʼಪಾಕಿಸ್ತಾನದ ಹೊಸ ರೀತಿಯ ಉಗ್ರವಾದದ ಮುಖ ಈಗ ಅನಾವರಣಗೊಳ್ಳುತ್ತಿದೆ. ಸುಮಾರು 5 ಲಕ್ಷಕ್ಕಿಂತ ಅಧಿಕ ಪಾಕಿಸ್ತಾನಿ ಮಹಿಳೆಯರು ಮದುವೆಯಾಗಿ ಭಾರತದಲ್ಲೇ ನೆಲೆಸಿದ್ದಾರೆ. ಆದರೆ ಇದುವರೆಗೆ ಇಲ್ಲಿನ ಪೌರತ್ವವನ್ನು ಅವರು ಪಡೆದುಕೊಂಡಿಲ್ಲ. ದೇಶದೊಳಗೆ ನುಸುಳಿದ ಇಂತಹ ಶತ್ರುಗಳ ವಿರುದ್ಧ ಹೋರಾಡುವುದು ಹೇಗೆ?ʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಅನೇಕರು ದೇಶದ ಆಂತರಿಕ ಸುರಕ್ಷತೆ ಬಗ್ಗೆ ಭಯ ವ್ಯಕ್ತಪಡಿಸಿದ್ದಾರೆ. ಇಂತಹವರನ್ನು ಕೂಡಲೇ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಏ. 22ರಂದು ಪಾಕಿಸ್ತಾನಿ ಬೆಂಬಲಿತ ಉಗ್ರರು ಪಹಲ್ಗಾಮ್‌ಗೆ ನುಗ್ಗಿ ಗುಂಡಿನ ಮಳೆಗರೆದು 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದಾದ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ನಿಲುವು ತಳೆದಿದೆ. ದೇಶದಲ್ಲಿರುವ ಪಾಕ್ ಪ್ರಜೆಗಳ ವೀಸಾ ರದ್ದುಪಡಿಸಿ ಏ. 27ರ ಮೊದಲು ದೇಶ ತೊರೆಯುವಂತೆ ಆದೇಶ ಹೊರಡಿಸಿದೆ. ದೀರ್ಘಾವಧಿ, ರಾಜತಾಂತ್ರಿಕ ಮತ್ತು ಅಧಿಕೃತ ವೀಸಾ ಹೊರತುಪಡಿಸಿ ಉಳಿದ ಎಲ್ಲ ಪಾಕಿಸ್ತಾನಿ ನಾಗರಿಕರ ಎಲ್ಲ ವೀಸಾ ವಿಭಾಗಗಳನ್ನು ತಕ್ಷಣ ರದ್ದುಪಡಿಸಲಾಗಿತ್ತು.
ತಾತ್ಕಾಲಿಕ ವೀಸಾ ಹೊಂದಿದ್ದ ಸುಮಾರು 537 ಪಾಕಿಸ್ತಾನಿ ನಾಗರಿಕರು ಇದೀಗ ಭಾರತ ತೊರೆದಿದ್ದಾರೆ. ಇನ್ನು 3 ದಿನಗಳಲ್ಲಿ ಸುಮಾರು 850 ಭಾರತೀಯರು ಪಾಕಿಸ್ತಾನದಿಂದ ಮರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಚ್ಚಿ ಬೀಳಿಸಿದ ಹತ್ಯಾಕಾಂಡ
ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲಿನಲ್ಲಿ ಏ. 22ರಂದು ಹತ್ಯಾಕಾಂಡ ನಡೆದಿತ್ತು 2019ರ ಪುಲ್ವಾಮಾ ಘಟನೆಯ ನಂತರ ಈ ಪ್ರದೇಶದಲ್ಲಿ ನಡೆದ ಅತ್ಯಂತ ತೀವ್ರ ದಾಳಿಗಳಲ್ಲಿ ಇದು ಒಂದು ಎನಿಸಿಕೊಂಡಿದೆ. ಏ. 23ರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಂಡ ಪಹಲ್ಗಾಮ್‌ನಲ್ಲಿ ಬೀಡುಬಿಟ್ಟಿದ್ದು, ತನಿಖೆ ಕೈಗೆತ್ತಿಕೊಂಡಿದೆ. ಪ್ರವಾಸಿಗರ ವಿಡಿಯೊದಲ್ಲಿ ಉಗ್ರರ ಚಲನವಲನ ಸೆರೆಯಾಗಿದ್ದು, ಇದರ ಆಧಾರದಲ್ಲಿಯೂ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.