Pahalgam Attack: ಜಮ್ಮು ಕಾಶ್ಮೀರದ 48 ಪ್ರವಾಸಿ ತಾಣಗಳು ಬಂದ್ ; ಸರ್ಕಾರದಿಂದ ಆದೇಶ
ಏ. 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಎನ್‌ಐಎ ತನಿಖೆಯನ್ನು ಚುರುಕುಗೊಳಿಸಿದೆ. ರಾಜ್ಯಾಂದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಭದ್ರತಾ ಪಡೆಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದರಿಂದ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಾಶ್ಮೀರದಾದ್ಯಂತ 87 ಪ್ರವಾಸಿ ತಾಣಗಳಲ್ಲಿ 48 ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ.


ಶ್ರೀನಗರ: ಏ. 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Attack) ನಡೆದ ಭಯೋತ್ಪಾದಕ ದಾಳಿ ಬಳಿಕ ಎನ್‌ಐಎ ತನಿಖೆಯನ್ನು ಚುರುಕುಗೊಳಿಸಿದೆ. ರಾಜ್ಯಾಂದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಭದ್ರತಾ ಪಡೆಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದರಿಂದ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಾಶ್ಮೀರದಾದ್ಯಂತ 87 ಪ್ರವಾಸಿ ತಾಣಗಳಲ್ಲಿ 48 ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಪ್ರವಾಸಿಗರಿಗೆ ಮುಕ್ತವಾಗಿರುವ 87 ತಾಣಗಳಲ್ಲಿ, ಈಗ ಮುಚ್ಚಲಾಗಿರುವ 48 ತಾಣಗಳಲ್ಲಿ ಭದ್ರತಾಪಡೆಗಳು ಬೀಡು ಬಿಟ್ಟಿವೆ. ಈ ಪ್ರದೇಶಗಳು ದುರ್ಗಮ ಹಾದಿಯಲ್ಲಿದ್ದು, ಅಲ್ಲಿ ಸಾಗುವುದೂ ಕಠಿಣವಿದೆ.
ಸದ್ಯ ನಿಷೇಧ ಹೇರಲಾಗಿರುವ ತಾಣಗಳಲ್ಲಿ ಯೂಸ್ಮಾರ್ಗ್, ತೌಸಿಮೈದನ್, ದೂದ್ಪತ್ರಿ, ಅಹರ್ಬಲ್, ಕೌಸರ್ನಾಗ್, ಬಂಗುಸ್, ಕರಿವಾನ್ ಡೈವರ್ ಚಂಡಿಗಮ್, ಬಂಗುಸ್ ವ್ಯಾಲಿ, ವುಲರ್/ವಾಟ್ಲಾಬ್, ರಾಂಪೋರಾ ಮತ್ತು ರಾಜ್ಪೋರಾ ಮತ್ತು ಚೀರ್ಹಾರ್ ಸೇರಿದಂತೆ ಹಲವು ಸೇರಿವೆ. ತೆರೆದಿರುವ ಇತರ ಪ್ರವಾಸಿ ತಾಣಗಳನ್ನು ಹೆಚ್ಚಿನ ಭದ್ರತೆಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಕಾಶ್ಮೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಈಗಾಗಲೇ ಕಾಶ್ಮೀರಕ್ಕೆ ತೆರಳುವವರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಏಪ್ರಿಲ್ 23 ರಂದು 112 ವಿಮಾನಗಳ ಮೂಲಕ 17,653 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅವುಗಳಲ್ಲಿ 6,561 ಆಗಮನಗಳು ಮತ್ತು 11,092 ನಿರ್ಗಮನಗಳು. ಏಪ್ರಿಲ್ 24 ರಂದು, 4,456 ಆಗಮನಗಳು ಮತ್ತು 11,380 ನಿರ್ಗಮನಗಳು ಸೇರಿದಂತೆ 15,836 ಪ್ರಯಾಣಿಕರ ದಟ್ಟಣೆ ಇತ್ತು.
ಪಹಲ್ಗಾಮ್‌ನಲ್ಲಿ ಎನ್‌ಐಎ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಭದ್ರತಾ ಸಂಸ್ಥೆಗಳು ರಾಜ್ಯಾದ್ಯಂತ ಬೃಹತ್ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಸಂಘಟಿತ ದಾಳಿಗಳನ್ನು ನಡೆಸುತ್ತಿದ್ದು, ನೂರಾರು ಶಂಕಿತರು ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡಿದವರನ್ನು ಬಂಧಿಸಿವೆ. ಉಗ್ರರ ಮನೆಗಳನ್ನು ಸೇನೆ ಧ್ವಂಸಗೊಳಿಸಿದೆ. . ಒಂದು ವಾರದ ಹಿಂದಷ್ಟೇ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ್ದರು. 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು.ಈ ದಾಳಿಯ ಹೊಣೆಯನ್ನು ಲಷ್ಕರ್ -ಎ- ತೊಯ್ಬಾದ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿತ್ತು.
ಈ ಸುದ್ದಿಯನ್ನೂ ಓದಿ: Pahalgam Attack: ಪಹಲ್ಗಾಮ್ ದಾಳಿಯ ಉಗ್ರ ಪಾಕ್ ಸೇನೆಯ ಮಾಜಿ ಪ್ಯಾರಾ ಕಮಾಂಡೋ! ತನಿಖೆಯಲ್ಲಿ ಶಾಕಿಂಗ್ ಸಂಗತಿ ಬಯಲು
ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೂ ಭಾರತ ಬಿಸಿ ಮುಟ್ಟಿಸಿದೆ. ಈಗಾಗಲೇ ರಾಜತಾಂತ್ರಿಕ ಯುದ್ಧ ಶುರುವಾಗಿದ್ದು, ಭಾರತದಲ್ಲಿರುವ ಪಾಕ್ ಪ್ರಜೆಗಳನ್ನು ಹೊರ ಹಾಕಲಾಗುತ್ತಿದೆ. ಈಗಾಗಲೇ ತಾತ್ಕಾಲಿಕವಾಗಿ ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ವಾಘಾ ಅಟ್ಟಾರಿ ಗಡಿಯನ್ನು ಮುಚ್ಚಲಾಗಿದೆ.