ಕೊಲ್ಕತ್ತಾ: ಒಂದು ತಿಂಗಳ ಕಾಲ ನಡೆದ ವಿಶೇಷ ತೀವ್ರ ಪರಿಷ್ಕರಣಾ ಕಾರ್ಯವನ್ನು ಪೂರ್ಣಗೊಳಿಸಿದ ನಂತರ, ಭಾರತೀಯ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. 2026 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಮತದಾರರ ಪಟ್ಟಿಗಳನ್ನು ಸರಿಪಡಿಸುವ ಸಲುವಾಗಿ ಇದುವರೆಗೆ ಆಯೋಗವು ಕರಡು ಮತದಾರರ ಪಟ್ಟಿಯಿಂದ ಸುಮಾರು 58 ಲಕ್ಷ ಹೆಸರುಗಳನ್ನು ತೆಗೆದುಹಾಕಿದೆ. ಈ ಕುರಿತು ಈಗಾಗಲೇ ರಾಜಕೀಯ ಬಿರುಗಾಳಿ ಎದ್ದಿದ್ದು, ಚುನಾವಣಾ ಆಯೋಗದ ಕುರಿತು ಆಕ್ರೋಶ ವ್ಯಕ್ತಪಡಿಸಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಸುಮಾರು 24 ಲಕ್ಷ ಮತದಾರರನ್ನು ಮೃತರೆಂದು ಗುರುತಿಸಲಾಗಿದೆ, ಆದರೆ 19 ಲಕ್ಷ ಜನರನ್ನು ಇತರ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತೋರಿಸಲಾಗಿದೆ. ಇನ್ನೂ 12 ಲಕ್ಷ ಹೆಸರುಗಳನ್ನು ಕಾಣೆಯಾಗಿದ್ದು, 1.3 ಲಕ್ಷ ಜನರ ಹೆಸರು ನಕಲಿ ಎಂದು ಆಯೋಗ ಗುರುತಿಸಿದೆ. ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪಟ್ಟಿಯಿಂದ ನಕಲಿ ಅಥವಾ ಅನರ್ಹ ನಮೂದುಗಳನ್ನು ತೆಗೆದುಹಾಕಲು ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ ಎಂದು ಆಯೋಗ ಹೇಳಿದೆ.
ಈ ಎಸ್‌ಐಆರ್ ವ್ಯಾಯಾಮವು ಫೆಬ್ರವರಿ 2026 ರವರೆಗೆ ಮುಂದುವರಿಯಲಿದ್ದು, ಫೆಬ್ರವರಿ 14, 2026 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಹೆಸರು ತೆಗೆದುಹಾಕಲ್ಪಟ್ಟವರು ಫಾರ್ಮ್ 6 ಮತ್ತು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹಕ್ಕುಗಳನ್ನು ಸಲ್ಲಿಸಬಹುದು.
ಮೆಸ್ಸಿ ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ಪಶ್ಚಿಮ ಬಂಗಾಳ ಕ್ರೀಡಾ ಸಚಿವ ರಾಜೀನಾಮೆ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಎಸ್‌ಐಆರ್ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯನ್ನು ತಿರುಚಲು ಬಿಜೆಪಿ ಮತ್ತು ಚುನಾವಣಾ ಆಯೋಗ ಸಂಚು ರೂಪಿಸಿವೆ ಎಂದು ಅವರು ಆರೋಪಿಸಿದರು. ತಮ್ಮ ಸರ್ಕಾರ ಯಾರನ್ನೂ ಬಂಗಾಳದಿಂದ ಹೊರಹಾಕಲು ಬಿಡುವುದಿಲ್ಲ ಎಂದ ಅವರು, ಮತದಾರರ ಪಟ್ಟಿಯಿಂದ ತಮ್ಮ ಹೆಸರು ತೆಗೆದುಹಾಕಿದರೆ ಜನರು ಬೀದಿಗಿಳಿಯಬೇಕು ಎಂದು ಕರೆ ನೀಡಿದರು. "ನಿಮ್ಮ ಹೆಸರು ತೆಗೆದುಹಾಕಿದರೆ, ಕೇಂದ್ರ ಸರ್ಕಾರವನ್ನೂ ತೆಗೆದುಹಾಕಬೇಕು" ಎಂದು ಅವರು ಚುನಾವಣಾ ರ್ಯಾಲಿಯಲ್ಲಿ ಹೇಳಿದರು. ಮತ್ತೊಂದೆಡೆ, ಬಿಜೆಪಿ, ಮಮತಾ ಬ್ಯಾನರ್ಜಿ ಅವರ SIR ಮೇಲಿನ ಆಕ್ರೋಶವು ಅಕ್ರಮ ವಲಸಿಗರನ್ನು ಒಳಗೊಂಡಿರುವ ತಮ್ಮ ಮತ ಬ್ಯಾಂಕ್ ಅನ್ನು ರಕ್ಷಿಸುವ ಉದ್ದೇಶದಿಂದ ಕೂಡಿದೆ ಎಂದು ಆರೋಪಿಸಿದೆ.