ನವದೆಹಲಿ, ಏ. 22: ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಸುಂದರ ಪ್ರವಾಸಿ ತಾಣ ಬೈಸರನ್ ಮೈದಾನವು ರಕ್ತಸಿಕ್ತವಾಗಿ ಇಂದಿಗೆ (ಏಪ್ರಿಲ್ 22) ಸರಿಯಾಗಿ ಒಂದು ವರ್ಷ ಸಂದಿದೆ. ಕಳೆದ ವರ್ಷ ನಡೆದ ಈ ಭೀಕರ ಭಯೋತ್ಪಾದನಾ ದಾಳಿಯಲ್ಲಿ 26 ಅಮಾಯಕ ಹಿಂದೂ ಪುರುಷರು ಬಲಿಯಾಗಿದ್ದರು. ಈ ಘಟನೆಯು ಕೇವಲ ಒಂದು ದಾಳಿಯಾಗಿ ಉಳಿಯದೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧವನ್ನೇ ಬದಲಿಸಿದ ಮಹತ್ವದ ತಿರುವಾಯಿತು.
ಈ ದಾಳಿಯ ಅತ್ಯಂತ ನೋವಿನ ಸಂಗತಿಯೆಂದರೆ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಸಾವು. ಮದುವೆಯಾದ ಕೇವಲ ಒಂದು ವಾರದಲ್ಲೇ ಪಹಲ್ಗಾಮ್‌ಗೆ ಹನಿಮೂನ್‌ಗೆ ಬಂದಿದ್ದ ಈ ದಂಪತಿಯನ್ನು ಉಗ್ರರು ಗುರಿಯಾಗಿಸಿದ್ದರು. ವಿನಯ್ ಅವರ ಶವದ ಪಕ್ಕದಲ್ಲೇ ಕಂಗಾಲಾಗಿ ಕುಳಿತಿದ್ದ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರ ಭಾವಚಿತ್ರವು ಇಡೀ ದೇಶದ ಆಕ್ರೋಶ ಮತ್ತು ದುಃಖದ ಸಂಕೇತವಾಗಿತ್ತು. "ನನ್ನ ಪತಿ ಮುಸ್ಲಿಂ ಅಲ್ಲ ಎಂದು ತಿಳಿದ ತಕ್ಷಣ ಉಗ್ರರು ಅವರನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಶೂಟ್ ಮಾಡಿದರು" ಎಂದು ಹಿಮಾಂಶಿ ಅಂದು ಕಣ್ಣೀರಿಟ್ಟಿದ್ದರು.
ಧರ್ಮ ಆಧಾರಿತ ಹತ್ಯಾಕಾಂಡ
ಲಷ್ಕರ್-ಎ-ತೈಬಾದ ಅಂಗಸಂಸ್ಥೆಯಾದ 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಉಗ್ರರು ಪ್ರವಾಸಿಗರನ್ನು ಸಾಲಾಗಿ ನಿಲ್ಲಿಸಿ, ಅವರ ಧರ್ಮವನ್ನು ಕೇಳಿ ನಂತರ ಗುಂಡು ಹಾರಿಸಿದ್ದರು. ಕಲಿಮಾ ಪಠಿಸಲು ಸಾಧ್ಯವಾಗದ ಪುಣೆಯ ಉದ್ಯಮಿ ಸಂತೋಷ್ ಜಗದಾಳೆ ಅವರನ್ನು ಹತ್ಯೆ ಮಾಡಲಾಗಿತ್ತು. ಮೃತದೇಹಗಳ ಪರೀಕ್ಷೆಯ ವೇಳೆ ಉಗ್ರರು ಬಲಿಪಶುಗಳ ಧರ್ಮವನ್ನು ಖಚಿತಪಡಿಸಿಕೊಳ್ಳಲು ನಡೆಸಿದ ಕ್ರೂರ ಕೃತ್ಯಗಳು ಬೆಳಕಿಗೆ ಬಂದಿದ್ದವು.
ಅಮೆರಿಕ-ಇರಾನ್ ಕದನ ವಿರಾಮ ನಾಳೆಗೆ ಅಂತ್ಯ: ಡೊನಾಲ್ಡ್ ಟ್ರಂಪ್ ಗಡುವು ವಿಸ್ತರಿಸುವರೇ ಅಥವಾ ಬಾಂಬ್ ಮಳೆ ಸುರಿಸುವರೇ?
ಭಾರತದ ಪ್ರತ್ಯುತ್ತರ ಮತ್ತು ಆಪರೇಷನ್ ಮಹದೇವ್
ಈ ದಾಳಿಗೆ ಪ್ರತಿಕಾರವಾಗಿ ಭಾರತವು ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಿತು. ಅಲ್ಲದೆ, ದಾಳಿ ನಡೆಸಿ ತಪ್ಪಿಸಿಕೊಂಡಿದ್ದ ಮೂವರು ಉಗ್ರರನ್ನು ಪತ್ತೆಹಚ್ಚಲು ಆಪರೇಷನ್ ಮಹದೇವ್ ಎಂಬ ಬೃಹತ್ ಕಾರ್ಯಾಚರಣೆ ಹಮ್ಮಿಕೊಂಡಿತು. ಸುಮಾರು 93 ದಿನಗಳ ಕಾಲ 250 ಕಿಲೋ ಮೀಟರ್‌ಗಳಷ್ಟು ದೂರದ ದಟ್ಟ ಅರಣ್ಯದಲ್ಲಿ ಉಗ್ರರನ್ನು ಬೆನ್ನಟ್ಟಿದ ಪ್ಯಾರಾ ವಿಶೇಷ ಪಡೆಗಳು, 2025ರ ಜುಲೈ 28ರಂದು ಮೂವರು ಉಗ್ರರನ್ನು ಹೊಡೆದುರುಳಿಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಿದವು.
ಈ ಘಟನೆಯ ನಂತರ ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸಿತು ಮತ್ತು ಪಾಕಿಸ್ತಾನದೊಂದಿಗಿನ ಗಡಿಯನ್ನು ಮುಚ್ಚುವ ಮೂಲಕ ಕಠಿಣ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿತು. ಇಂದು ಆ ಕರಾಳ ಘಟನೆಗೆ ಒಂದು ವರ್ಷ ತುಂಬಿದ್ದು, ದೇಶವು ಸಂತ್ರಸ್ತರನ್ನು ಸ್ಮರಿಸುತ್ತಿದೆ.