ನವದೆಹಲಿ: ತನ್ನ ಇಬ್ಬರು ಮಕ್ಕಳ ಜೀವ ರಕ್ಷಣೆಗಾಗಿ ಭಾರತಕ್ಕೆ ಬಂದಿರುವ ಪಾಕಿಸ್ತಾನದ (Pakistan) ವ್ಯಕ್ತಿಯೊಬ್ಬರು, ತಮ್ಮ ಮಕ್ಕಳ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ದೇಶಕ್ಕೆ ವಾಪಸ್ ಕಳುಹಿಸದಂತೆ ಭಾರತ (India) ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಪಾಕಿಸ್ತಾನದ ಸಿಂಧ್‌ನ ಹೈದರಾಬಾದ್‌ನಿಂದ ಭಾರತಕ್ಕೆ ಬಂದಿರುವ ಈ ಕುಟುಂಬ, ಇತ್ತೀಚೆಗೆ ಪಾಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಯಿಂದಾಗಿ (Pahalgam Terrorist Attack) ಭಾರತ-ಪಾಕಿಸ್ತಾನ ನಡುವಿನ SAARC ವೀಸಾ ಸೌಲಭ್ಯ ರದ್ದತಿಯಿಂದ ಸಂಕಷ್ಟಕ್ಕೆ ಸಿಲುಕಿದೆ.
ತಮ್ಮ 9 ಮತ್ತು 7 ವರ್ಷದ ಮಕ್ಕಳು ಹುಟ್ಟಿನಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಪಾಕ್ ಮೂಲದ ವ್ಯಕ್ತಿಯೊಬ್ಬ ಹೇಳಿಕೊಂಡಿದ್ದಾರೆ. "ನನ್ನ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು, ಇಲ್ಲಿನ ಸುಧಾರಿತ ವೈದ್ಯಕೀಯ ಚಿಕಿತ್ಸೆಯಿಂದಾಗಿ ನವದೆಹಲಿಯಲ್ಲಿ ಚಿಕಿತ್ಸೆ ಸಾಧ್ಯವಾಗಿತ್ತು. ಆದರೆ, ಪಾಹಲ್ಗಾಮ್ ಘಟನೆಯ ನಂತರ, ನಾವು ತಕ್ಷಣವೇ ಪಾಕಿಸ್ತಾನಕ್ಕೆ ವಾಪಸಾಗಬೇಕೆಂದು ಸೂಚಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಮಕ್ಕಳ ಶಸ್ತ್ರಚಿಕಿತ್ಸೆ ಮುಂದಿನ ವಾರಕ್ಕೆ ನಿಗದಿಯಾಗಿದೆ. ಆಸ್ಪತ್ರೆ ಮತ್ತು ವೈದ್ಯರು ಕುಟುಂಬಕ್ಕೆ ಸಹಕಾರ ನೀಡುತ್ತಿದ್ದಾರೆ. ಆದರೆ, ಪೊಲೀಸ್ ಮತ್ತು ವಿದೇಶಾಂಗ ಇಲಾಖೆ ತಕ್ಷಣವೇ ದೆಹಲಿಯನ್ನು ತೊರೆಯುವಂತೆ ಸೂಚಿಸಲಾಗಿದೆ. "ನಾನು ಎರಡೂ ಸರ್ಕಾರಗಳಿಗೆ ಮನವಿ ಮಾಡುತ್ತೇನೆ, ನನ್ನ ಮಕ್ಕಳ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಅವಕಾಶ ನೀಡಿ. ನಾವು ಪ್ರಯಾಣ, ವಾಸ, ಮತ್ತು ಚಿಕಿತ್ಸೆಗಾಗಿ ಸುಮಾರು 10 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ," ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ.
ಇದೇ ವೇಳೆ, ಗುರುವಾರದಂದು ಪಾಕಿಸ್ತಾನದಲ್ಲಿದ್ದ 105 ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ಲಾಹೋರ್‌ನ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ. ಶುಕ್ರವಾರ, ಲಾಹೋರ್‌ನ ವಾಘಾ ಗಡಿಯ ಮೂಲಕ ಇನ್ನಷ್ಟು ಭಾರತೀಯರು ವಾಪಸಾಗಿದ್ದು, ಹಲವಾರು ಪಾಕಿಸ್ತಾನಿಗಳು ಭಾರತದಿಂದ ತಮ್ಮ ದೇಶಕ್ಕೆ ಮರಳಿದ್ದಾರೆ. ಅಟ್ಟಾರಿ-ವಾಘಾ ಗಡಿಯು ಭಾರತದ ಅಮೃತಸರವನ್ನು ಪಾಕಿಸ್ತಾನದ ಲಾಹೋರ್‌ನೊಂದಿಗೆ ಸಂಪರ್ಕಿಸುತ್ತದೆ.
ಈ ಸುದ್ದಿಯನ್ನು ಓದಿ: Pahalgam Attack: ಪ್ರವಾಸಿಗರ ನರಮೇಧಕ್ಕೆ ದಿಟ್ಟ ಪ್ರತೀಕಾರ; ಮತ್ತೆ ಐವರು ಉಗ್ರರ ಮನೆಗಳು ಧ್ವಂಸ
ಗಡಿಯಲ್ಲಿ ಇದ್ದವರಲ್ಲಿ ಬಲೂಚಿಸ್ತಾನದಿಂದ ಭಾರತಕ್ಕೆ ಮದುವೆಗಾಗಿ ಬಂದಿದ್ದ ಏಳು ಜನರ ಪಾಕಿಸ್ತಾನಿ ಹಿಂದೂ ಕುಟುಂಬವೂ ಇತ್ತು. ವಾಘಾಕ್ಕೆ ತಲುಪಿದ ಬಳಿಕ, ಭಾರತ ಸರ್ಕಾರ ತಮ್ಮ ವೀಸಾವನ್ನು ರದ್ದುಗೊಳಿಸಿದೆ ಎಂದು ಅಕ್ಷಯ್ ಕುಮಾರ್ ಎಂಬಾತ ತಿಳಿಸಿದ್ದಾರೆ. ಬಲೂಚಿಸ್ತಾನದಿಂದ ಲಾಹೋರ್‌ಗೆ ಪ್ರಯಾಣದಿಂದಾಗಿ ಈ ಬೆಳವಣಿಗೆಯ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಮಧ್ಯಾಹ್ನ ಪಾಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, 26 ಜನರು ಮೃತಪಟ್ಟಿದ್ದಾರೆ. 2019ರ ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಈ ಘೋರ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ. ಈ ಘಟನೆಯನ್ನು ಖಂಡಿಸಿ, ಬುಧವಾರ ನವದೆಹಲಿಯಲ್ಲಿ ಕೇಂದ್ರೀಯ ಭದ್ರತಾ ಸಮಿತಿ (CCS) ಸಭೆ ಸೇರಿ, ಅಟ್ಟಾರಿಯ ಸಂಯೋಜಿತ ಚೆಕ್‌ಪೋಸ್ಟ್‌ನ್ನು ತಕ್ಷಣವೇ ಮುಚ್ಚುವಂತೆ ಆದೇಶಿಸಿತು.