ನವದೆಹಲಿ: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನದ ಅನೇಕ ಸೆಲೆಬ್ರಿಟಿಗಳು ಖಂಡಿಸಿದ್ದಾರೆ. ನಟ ಫವಾದ್ ಖಾನ್ (Fawad Khan), ನಟಿಯರಾದ ಹನಿಯಾ ಆಮಿರ್ (Hania Aamir)ಮತ್ತು ಮೌರಾ ಹೊಕೇನ್ (Mawra Hocane) ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಎಲ್ಲಿಯಾದರೂ ದುರಂತ ಸಂಭವಿಸಿದರೆ ಅದು ನಮಗೆಲ್ಲರಿಗೂ ದುರಂತವೇ ಆಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಭಯೋತ್ಪಾದಕ ದಾಳಿಯ ವಿರುದ್ಧ ಧ್ವನಿಗೂಡಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟ ಫವಾದ್ ಖಾನ್, ನಟಿಯರಾದ ಹನಿಯಾ ಆಮಿರ್ ಮತ್ತು ಮೌರಾ ಹೊಕೇನ್ ಮೃತರ ಕುಟುಂಬಗಳಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಈ ಭಯಾನಕ ದಾಳಿಯು ನಮಗೂ ದುಃಖ ತಂದಿದೆ ಎಂದು ಹೇಳಿದ್ದಾರೆ.
ನಟ ಫವಾದ್ ಖಾನ್ ಅವರು ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಘೋರ ದಾಳಿಯ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬಗಳಿಗೆ ಶಕ್ತಿ ತುಂಬಲು ಮತ್ತು ಅಪಾರ ದುಃಖದಿಂದ ಅವರು ಹೊರ ಬರಲು ನಾವು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆ ಹಾಗೂ ಅವರ ಮುಂಬರುವ ಚಿತ್ರ ಅಬಿರ್ ಗುಲಾಲ್ ಬಗ್ಗೆ ಟೀಕೆಗಳು ಹೆಚ್ಚಾಗುತ್ತಿರುವ ಮಧ್ಯೆಯೇ ಅವರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿದ್ದು, ಎಲ್ಲಿಯಾದರೂ ದುರಂತ ಸಂಭವಿಸಿದರೆ ಅದು ನಮಗೆಲ್ಲರಿಗೂ ದುರಂತ. ಮುಗ್ಧರಿಗಾಗಿ ಹೃದಯ ಮಿಡಿಯುತ್ತಿದೆ. ಅವರ ದುಃಖದಲ್ಲಿ ನಾವು ಒಂದಾಗಿದ್ದೇವೆ. ನಾವು ಎಲ್ಲಿಂದ ಬಂದರೂ ದುಃಖವು ಒಂದೇ ಭಾಷೆಯನ್ನು ಮಾತನಾಡುತ್ತದೆ. ನಾವು ಯಾವಾಗಲೂ ಮಾನವೀಯತೆಯನ್ನು ಆರಿಸಿಕೊಳ್ಳೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: Pahalgam Terror Attack: ಮೋದಿ ಎಚ್ಚರಿಕೆ ಬೆನ್ನಲ್ಲೇ ಪಾಕ್‌ಗೆ ಹುಟ್ಟಿದ ನಡುಕ; ಕ್ಷಿಪಣಿಗಳ ಪರೀಕ್ಷೆ, ಹೈ ಅಲರ್ಟ್ ಘೋಷಣೆ
ಸನಮ್ ತೇರಿ ಕಸಮ್ ನಟಿ ಮೌರಾ ಹೊಕೇನ್ ಅವರು ಪ್ರತಿಕ್ರಿಯಿಸಿ ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಒಬ್ಬರ ವಿರುದ್ಧ ಭಯೋತ್ಪಾದನಾ ಕೃತ್ಯವು ಎಲ್ಲರ ವಿರುದ್ಧ ಭಯೋತ್ಪಾದನೆಯಾಗಿದೆ. ಈ ಜಗತ್ತಿಗೆ ಏನಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಫರ್ಹಾನ್ ಸಯೀದ್ ಅವರು ಪಹಲ್ಗಾಮ್ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪಗಳು" ಎಂದು ಪೋಸ್ಟ್ ಮಾಡಿದ್ದಾರೆ.
ನಟ ಉಸಾಮಾ ಖಾನ್ ಅವರು ಪಹಲ್ಗಮ್ ದಾಳಿಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಿದ್ದು, ಈ ಕಷ್ಟದ ಸಮಯದಲ್ಲಿ ಅವರು ಶಕ್ತಿಯನ್ನು ಪಡೆಯಲಿ. ಭಯೋತ್ಪಾದನೆ ಎಲ್ಲಿ ಸಂಭವಿಸಿದರೂ ಖಂಡನೀಯ. ನಾವು ಅರ್ಥಹೀನ ಹಿಂಸಾಚಾರದ ವಿರುದ್ಧ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.