ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೂದಲು ಉದುರುವಿಕೆ ಸಮಸ್ಯೆಯಿಂದ ಕೀಳರಿಮೆ ಹೊಂದಿದ್ದ ಪಾಕ್ ಲಷ್ಕರ್ ಉಗ್ರ ಹೇರ್ ಲೈನ್‌ ಚಿಕಿತ್ಸೆ ಮಾಡಿಸಿ ಸಿಕ್ಕಿಬಿದ್ದ!

ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ನುಸುಳಿದ್ದ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಮೊಹಮ್ಮದ್ ಉಸ್ಮಾನ್ ಜಟ್, ಕೂದಲು ಉದುರುವಿಕೆ ಸಮಸ್ಯೆಯಿಂದ ಕೀಳರಿಮೆಗೆ ಒಳಗಾಗಿ ಶ್ರೀನಗರದಲ್ಲಿ ಹೇರ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಪಡೆದಿದ್ದನು. ಬಳಿಕ ಭಾರತೀಯ ಗುರುತಿನ ಚೀಟಿ ಪಡೆದು ಬೇರೆ ದೇಶಕ್ಕೆ ಪರಾರಿಯಾಗಲು ಯೋಜಿಸಿದ್ದ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದೆ.

ಎಐ ರಚಿತ ಚಿತ್ರ

ಶ್ರೀನಗರ, ಮೇ 18: ಭೀಕರ ಭಯೋತ್ಪಾದನಾ ದಾಳಿ ನಡೆಸುವ ಮತ್ತು ಕಣಿವೆಯಲ್ಲಿ ಸ್ಲೀಪರ್ ಸೆಲ್‌ಗಳನ್ನು ನಿರ್ಮಿಸುವ ದುರುದ್ದೇಶದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (Lashkar-e-Taiba) ಉಗ್ರನೊಬ್ಬ, ಜಿಹಾದ್‌ಗಿಂತ ತನ್ನ ಕೂದಲು ಉದುರುವಿಕೆ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಿ ಸಿಕ್ಕಿಬಿದ್ದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ ಎಂದು ಪಿಟಿಐ (PTI) ಸುದ್ದಿ ಸಂಸ್ಥೆ ವರದಿ ಮಾಡಿದೆ.

'ಚೈನೀಸ್' ಎಂಬ ಉಪನಾಮ ಹೊಂದಿರುವ ಪಾಕಿಸ್ತಾನದ ಲಾಹೋರ್ ನಿವಾಸಿ ಮೊಹಮ್ಮದ್ ಉಸ್ಮಾನ್ ಜಟ್ ಎಂಬಾತನೇ ಸದ್ಯ ಬಂಧನಕ್ಕೊಳಗಾಗಿರುವ ಲಷ್ಕರ್ ಉಗ್ರ. ಕಾಶ್ಮೀರಕ್ಕೆ ನುಸುಳಿದ ನಂತರ ಅಲ್ಲಿನ ಸಾಮಾನ್ಯ ಜನಜೀವನವನ್ನು ಕಣ್ಣಾರೆ ಕಂಡು, ತನಗೆ ಪಾಕಿಸ್ತಾನದ ಭಯೋತ್ಪಾದನಾ ತರಬೇತಿ ಶಿಬಿರಗಳಲ್ಲಿ ಭಾರತದ ವಿರುದ್ಧ ತಲೆಯಲ್ಲಿ ತುಂಬಿಸಲಾಗಿದ್ದ ಸುಳ್ಳುಗಳ ಅರಿವಾಗಿತ್ತು ಎಂದು ಆತ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. ಇದೇ ವೇಳೆ ಶ್ರೀನಗರದ ಅಂಗಡಿ ಮಾಲಕನೊಬ್ಬನ ಮೂಲಕ ಹೇರ್ ಟ್ರಾನ್ಸ್‌ಪ್ಲಾಂಟ್ (ಕೂದಲು ಕಸಿ) ಚಿಕಿತ್ಸೆಯ ಬಗ್ಗೆ ತಿಳಿದುಕೊಂಡ ಆತ, ಶ್ರೀನಗರದ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದಿದ್ದಲ್ಲದೆ ಕೆಲವು ದಿನ ಅಲ್ಲಿಯೇ ತಂಗಿದ್ದ. ಕಳೆದ ತಿಂಗಳು ಶ್ರೀನಗರ ಪೊಲೀಸರು ಈತನನ್ನು ಕಣಿವೆಯ ದೀರ್ಘಾವಧಿ ಉಗ್ರ ಅಬ್ದುಲ್ಲಾ ಅಲಿಯಾಸ್ "ಅಬು ಹುರೈರಾ" ಎಂಬಾತನೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದರು.

ಕೀಳರಿಮೆಯಿಂದ ಬಳಲುತ್ತಿದ್ದ ಉಗ್ರ

ವರ್ಷಗಳಿಂದ ತೀವ್ರ ಕೂದಲು ಉದುರುವಿಕೆ ಮತ್ತು ಬೋಳು ತಲೆಯ ಸಮಸ್ಯೆಯಿಂದ ಬಳಲುತ್ತಿದ್ದ ಉಸ್ಮಾನ್ ಜಟ್, ಇದರಿಂದಾಗಿ ತೀವ್ರ ಕೀಳರಿಮೆಗೆ ಒಳಗಾಗಿದ್ದನು. ಹೇರ್ ಟ್ರಾನ್ಸ್‌ಪ್ಲಾಂಟ್ ಕೇವಲ ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಲಭ್ಯವಿರುವ ಅತ್ಯಂತ ದುಬಾರಿ ಚಿಕಿತ್ಸೆ ಎಂದು ಆತ ಈ ಮೊದಲು ತಪ್ಪಾಗಿ ಭಾವಿಸಿದ್ದ. ಆದರೆ ಶ್ರೀನಗರದಲ್ಲಿ ಉಗ್ರರ ನೆರವು ಜಾಲದ ಸಂಪರ್ಕಕ್ಕೆ ಬಂದಾಗ, ಕಣಿವೆಯಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿರುವುದನ್ನು ತಿಳಿದು ತಡಮಾಡದೆ ಕೂದಲು ಕಸಿ ಮಾಡಿಸಿಕೊಂಡಿದ್ದ.

ಭಾರತೀಯ ಗುರುತಿನ ಚೀಟಿ ಪಡೆದು ಪರಾರಿಯಾಗುವ ಯೋಜನೆ

ಚಿಕಿತ್ಸೆಯ ನಂತರ ಸಾರ್ವಜನಿಕ ವಾಹನಗಳ ಮೂಲಕ ಜಮ್ಮು ಮತ್ತು ಪಂಜಾಬ್‌ಗೆ ಪ್ರಯಾಣ ಬೆಳೆಸಿದ್ದ ಈತ, ಅಲ್ಲಿ ಇಂಗ್ಲಿಷ್ ಕಲಿಯುತ್ತಾ ಕಾಲ ಕಳೆದಿದ್ದ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊರೆದು ನಾಗರಿಕ ಜೀವನ ನಡೆಸಲು ಬಯಸಿದ್ದ ಜಟ್, ನಕಲಿ ದಾಖಲೆಗಳ ಮೂಲಕ ಭಾರತದ ಅಧಿಕೃತ ಗುರುತಿನ ಚೀಟಿಗಳನ್ನು ಹಾಗೂ ಪಾಸ್‌ಪೋರ್ಟ್ ಪಡೆದು ಭಾರತದಿಂದ ಶಾಶ್ವತವಾಗಿ ಬೇರೆ ದೇಶಕ್ಕೆ ಪರಾರಿಯಾಗಲು ಯೋಜಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಈ ಹಗರಣದ ಸಂಪೂರ್ಣ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ವಹಿಸಿಕೊಂಡಿದೆ.