ನವದೆಹಲಿ: ದೆಹಲಿ ಪೊಲೀಸ್ ವಿಶೇಷ ದಳ ಬಂಧಿಸಿದ ಆರೋಪಿಗಳ ವಿಚಾರಣೆಯ ಸಮಯದಲ್ಲಿ ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಐಎಸ್‌ಐ (ISI) ಮತ್ತು ಶಹಜಾದ್ ಭಟ್ಟಿ ಮಾಡ್ಯೂಲ್‌ಗೆ ಸಂಬಂಧಿಸಿದ ಪ್ರಮುಖ ಭಯೋತ್ಪಾದಕ ಪಿತೂರಿ ಬಯಲಾಗಿದೆ ಬಯಲಾಗಿದೆ. ಪಾಕಿಸ್ತಾನ ಬೆಂಬಲಿತ ಮಾಡ್ಯೂಲ್‌ಗಳು ಭಾರತದಲ್ಲಿನ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲು ತಯಾರಿ ನಡೆಸಿದ್ದವು ಎಂದು ತಿಳಿದು ಬಂದಿದೆ.
ಆರೋಪಿಗಳು ದೆಹಲಿಯ ಕೆಲ ಪ್ರಸಿದ್ಧ ದೇವಾಯಲ ಹಾಗೂ ಐತಿಹಾಸಿಕ ತಾಣಗಳ ಫೋಟೋವನ್ನು ಪಾಕಿಸ್ತಾನಿ ಮೂಲದ ವ್ಯಕ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಕಳುಹಿಸಿದ್ದರು. ದೇವಾಲಯದಲ್ಲಿ ನಿಯೋಜಿಸಲಾದ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿಯ ಮೇಲೆ ಗುಂಡು ಹಾರಿಸುವ ಮತ್ತು ನಂತರ ಧಾರ್ಮಿಕ ಸ್ಥಳವನ್ನೇ ಗುರಿಯಾಗಿಸುವ ಯೋಜನೆಗಳು ಈ ಭಯೋತ್ಪಾದಕ ಸಂಚಿನಲ್ಲಿ ಒಳಗೊಂಡಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ.
ದೆಹಲಿ-ಸೋನಿಪತ್ ಹೆದ್ದಾರಿಯಲ್ಲಿರುವ ಜನಪ್ರಿಯ ಧಾಬಾ ಕೂಡ ಗುರಿ ಪಟ್ಟಿಯಲ್ಲಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಈ ಉಪಾಹಾರ ಗೃಹದ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು. ದೆಹಲಿ ಪೊಲೀಸ್ ವಿಶೇಷ ಘಟಕವು ಕೇಂದ್ರ ಸಂಸ್ಥೆಗಳೊಂದಿಗೆ ಗುರುವಾರ ದೆಹಲಿ ಮತ್ತು ಇತರ ಹಲವಾರು ರಾಜ್ಯಗಳಿಂದ ಶಹಜಾದ್ ಭಟ್ಟಿ ಮಾಡ್ಯೂಲ್‌ಗೆ ಸಂಬಂಧಿಸಿದ 9 ಕಾರ್ಯಕರ್ತರನ್ನು ಬಂಧಿಸಿದೆ. ಸದ್ಯ ಆರೋಪಿಗಳ ಕುರಿತು ತನಿಖೆ ನಡೆಸಲಾಗುತ್ತಿದೆ.
ಆರೋಪಿಗಳಾದ ಹೈದರಾಬಾದ್ ಮೂಲದ ಡಾ. ಸೈಯದ್ ಅಹ್ಮದ್ ಮೊಹಿಯುದ್ದೀನ್ ಮತ್ತು ಉತ್ತರ ಪ್ರದೇಶದ ನಿವಾಸಿಗಳಾದ ಆಜಾದ್ ಮತ್ತು ಮೊಹಮ್ಮದ್ ಸುಹೇಲ್ ವಿರುದ್ಧ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಎನ್ಐಎ ಪ್ರಕಾರ, ಈ ಮೂವರು ವಿದೇಶಿ ಮೂಲದ ಐಸಿಸ್ ನಿರ್ವಾಹಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಜಿಹಾದ್ ಅನ್ನು ಬೆಂಬಲಿಸಲು ಮತ್ತು ನಿಷೇಧಿತ ಶಸ್ತ್ರಾಸ್ತ್ರಗಳು ಮತ್ತು ಜೈವಿಕ ಭಯೋತ್ಪಾದನೆಯನ್ನು ಬಳಸಿಕೊಂಡು ಭಯೋತ್ಪಾದನೆಯನ್ನು ಹರಡಲು ಯುವಕರನ್ನು ನೇಮಿಸಿಕೊಳ್ಳಲು ಸಂಘಟಿತ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು.