ಲಖನೌ, ಅ. 6: ವಯಸ್ಕ ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಪೋಷಕರೊಂದಿಗೆ ವಾಸಿಸುವಂತೆ ಒತ್ತಾಯಿಸಲು ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ಬಳಸುವಂತಿಲ್ಲ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ (High Court) ತೀರ್ಪು ನೀಡಿದೆ. ಈ ಸಂಬಂಧ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಸೆಪ್ಟೆಂಬರ್ 28ರಂದು ನೀಡಿದ ಆದೇಶದಲ್ಲಿ ನ್ಯಾಯಮೂರ್ತಿ ಸಂದೀಪ್ ಜೈನ್, “ಒಬ್ಬ ಯುವತಿ ವಯಸ್ಕಳಾಗಿದ್ದರೆ, ಆಕೆಗೆ ತನ್ನ ಇಚ್ಛೆಗೆ ವಿರುದ್ಧವಾಗಿ ನಿರ್ದಿಷ್ಟ ವ್ಯಕ್ತಿಯೊಂದಿಗೆ ವಾಸಿಸುವಂತೆ ಒತ್ತಾಯಿಸುವಂತಿಲ್ಲ. ಆ ವ್ಯಕ್ತಿ ಆಕೆಯ ಪೋಷಕರಾಗಿದ್ದರೂ ಇದೇ ನಿಯಮ ಅನ್ವಯಿಸುತ್ತದೆ” ಎಂದು ತೀರ್ಪು ನೀಡಿದ್ದಾರೆ.
ತನ್ನ 25 ವರ್ಷದ ಪುತ್ರಿ ಪೂಜಾಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಕಲಾವತಿ ದೇವಿ ಎಂಬವವರು ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ನ್ಯಾಯಮೂರ್ತಿ ವಜಾಗೊಳಿಸಿದರು. ಮಗಳು ವಯಸ್ಕಳಾಗಿದ್ದಾಳೆ ಮತ್ತು ಸಮರ್ಥ ವ್ಯಕ್ತಿಯಾಗಿರುವುದರಿಂದ ಅವಳು ಆಯ್ಕೆ ಮಾಡಿದ ವ್ಯಕ್ತಿಯೊಂದಿಗೆ ವಾಸಿಸಲು ಸ್ವಾತಂತ್ರ್ಯ ಹೊಂದಿರುತ್ತಾಳೆ ಎಂದು ತೀರ್ಪು ನೀಡಿದರು.
ಸ್ನಾತಕೋತ್ತರ ಪದವೀಧರೆ ಎಂದು ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್
2026ರ ಆಗಸ್ಟ್ 17ರಂದು ನ್ಯಾಯಾಲಯವು ಆಕೆಯನ್ನು ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಪುತ್ರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯದೊಂದಿಗೆ ಮಾತನಾಡುವ ಸಂದರ್ಭದಲ್ಲಿ ಪೂಜಾ, ತಾನು ಸ್ವಂತ ಇಚ್ಛೆಯಿಂದ ದೆಹಲಿಯಲ್ಲಿ ಸ್ವತಂತ್ರವಾಗಿ ವಾಸಿಸುತ್ತಿದ್ದು, ತನ್ನನ್ನು ಯಾವುದೇ ಅಕ್ರಮ ಬಂಧನದಲ್ಲಿ ಇರಿಸಿಲ್ಲ ಎಂದು ತಿಳಿಸಿದ್ದರು.
ಅಲ್ಲದೆ, ತಾನು ತಾಯಿಯೊಂದಿಗೆ ವಾಸಿಸಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಾಯಿಯ ನಡವಳಿಕೆ ಮತ್ತು ವರ್ತನೆ ತನ್ನೊಂದಿಗೆ ಸೌಹಾರ್ದಯುತವಾಗಿಲ್ಲ. ತಾಯಿ ಮನೆಯಲ್ಲಿ ತಾನು ಹಲ್ಲೆ ಮತ್ತು ನಿಂದನೆಗೆ ಒಳಗಾಗುತ್ತಿದ್ದೆ ಎಂದು ಅವರು ಆರೋಪಿಸಿದ್ದರು.
ಮತ್ತೊಂದೆಡೆ, ತಾಯಿ ಈ ಆರೋಪಗಳನ್ನು ನಿರಾಕರಿಸಿದ್ದರು. ಮಗಳು ತಮ್ಮೊಂದಿಗೆ ವಾಸಿಸಬೇಕೆಂದು ಹೇಳಿದ್ದರು. ಮಗಳ ಜತೆ ಮಾತನಾಡಿ ಆಕೆಯ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯ, ಆಕೆ ವಯಸ್ಕಳಾಗಿದ್ದು, ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಯಂಪ್ರೇರಣೆಯಿಂದ ತನ್ನ ತಾಯಿಯೊಂದಿಗೆ ವಾಸಿಸಲು ಇಷ್ಟವಿಲ್ಲದಿರುವುದನ್ನು ವ್ಯಕ್ತಪಡಿಸಿದ್ದಾಳೆ ಎಂದು ತೀರ್ಪು ನೀಡಿ ಅರ್ಜಿಯನ್ನು ವಜಾಗೊಳಿಸಿತು.