ಮುಂಬೈ, ಜ. 3: ಇಂದು ಮಕ್ಕಳಿಗೆ ಸಾಮಾಜಿಕ ಮೌಲ್ಯ, ಸರಿಯಾದ ಶಿಕ್ಷಣ ಹಾಗೂ ಒಳ್ಳೆಯ ಮಾರ್ಗದರ್ಶನ ನೀಡುವುದು ಪಾಲಕರಿಗೆ ಸವಾಲಿನ ಕೆಲಸ. ಶ್ರೀಮಂತರೇ ಆಗಿರಲಿ ಬಡವರೇ ಆಗಿರಲಿ ತಮ್ಮ ಮಕ್ಕಳಿಗೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬುವುದನ್ನು ತಿಳಿಸಿ, ಸರಿಯಾದ ಮರ್ಗದರ್ಶನ ಮಾಡಿದ್ದಲ್ಲಿ ಅವರು ಗುಣವಂತರಾಗಿ ಸಮಾಜಕ್ಕೆ ಮಾದರಿಯಾಗುತ್ತಾರೆ. ಅದೇ ಸರಿಯಾದ ಮಾರ್ಗದರ್ಶನ ಸಿಗದೇ ಇದ್ದಲ್ಲಿ, ದುಷ್ಟರ ಜತೆಗೂಡಿ ಕೆಟ್ಟ ಕೆಟ್ಟ ಕೆಲಸಗಳನ್ನು ಮಾಡುತ್ತ ಸಮಾಜಕ್ಕೆ ಘಾತುಕರಾಗುತ್ತಾರೆ. ಹೀಗೆ ಕೆಟ್ಟ ಅಭ್ಯಾಸಗಳನ್ನು ಕಲಿತ ಮಕ್ಕಳನ್ನು ಮತ್ತೆ ಸರಿಯಾದ ದಾರಿಗೆ ತರಲು ಪೋಷಕರು ಹೆಣಗಾಡುತ್ತಿರುವುದು ನೋಡಿದ್ದೇವೆ. ಇಂತಹದ್ದೇ ಒಂದು ಪ್ರಕರಣ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.
ಮಗನ ಕಳ್ಳತನ ಚಟದಿಂದ ಬೇಸತ್ತ ಪಾಲಕರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ. 12 ವರ್ಷದ ಮಗನನ್ನು ಸರಪಳಿಯಿಂದ ಕಟ್ಟಿ ಹಾಕಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ (District Child Protection Cell) ರಕ್ಷಿಸಿದೆ. ದಿನಗೂಲಿ ಕಾರ್ಮಿಕರಾಗಿರುವ ಪೋಷಕರು ಕೆಲಸಕ್ಕೆ ಹೋಗುವ ಮುನ್ನ ಬಾಲಕನನ್ನು ಸರಪಳಿಯಿಂದ ಕಟ್ಟಿ ಹಾಕುತ್ತಿದ್ದರು ಎಂಬ ಮಾಹಿತಿಯು ಮಕ್ಕಳ ಸಹಾಯವಾಣಿಗೆ ಬಂದ ಬಳಿಕೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, “ಈ ಘಟನೆ ನಾಗ್ಪುರದ ಅಂಜ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಳೆದ 3–4 ತಿಂಗಳಿಂದ ಬಾಲಕನನ್ನು ಪ್ರತಿದಿನ ಕಟ್ಟಿ ಹಾಕಲಾಗುತ್ತಿತ್ತು. ಇದರಿಂದ ಬಾಲಕನ ಕಾಲುಗಳಿಗೆ ಗಾಯಗಳಾಗಿವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ಕನಸು ಕಾಣುತ್ತ ಹೆರಿಗೆಗೆ ಹೋದವಳು ಶವವಾಗಿ ಬಂದಳು
ಈ ಬಗ್ಗೆ ಪಾಲಕರನ್ನು ಪ್ರಶ್ನಿಸಿದಾಗ, "ನಾವು ಕೆಲಸಕ್ಕೆ ಹೋದಾಗ ಬಾಲಕ ಸಣ್ಣ ಪುಟ್ಟ ಕಳ್ಳತನಗಳಲ್ಲಿ ತೊಡಗಿಕೊಳ್ಳುತ್ತಿದ್ದ. ಎಷ್ಟೇ ಬುದ್ಧಿವಾದ ಹೇಳಿದರೂ ಅವನು ಸುಧಾರಿಸಿರಲಿಲ್ಲ. ಆದ್ದರಿಂದ ನಿತ್ಯ ಕೆಲಸಕ್ಕೆ ಹೋಗುವಾಗ ಮಗನನ್ನು ಸರಪಳಿಯಿಂದ ಕಟ್ಟಿ, ಮರಳಿ ಬಂದ ಬಳಿಕ ಬಿಡಿಸುತ್ತಿದ್ದೆವು” ಎಂದರು ಎಂದು ಪೊಲೀಸರು ತಿಳಿಸಿದ್ದಾರೆ.
“ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡ ಶುಕ್ರವಾರ (ಜನವರಿ 3) ಅವರ ಮನೆಗೆ ತಲುಪಿದಾಗ ಬಾಲಕ ಗಾಯಗೊಂಡು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಬಾಲಕ ಸರಪಳಿಯಿಂದ ಬಂಧಿತನಾಗಿದ್ದು, ಚಲಿಸಲು ಸಹ ಜಾಗವಿರಲಿಲ್ಲ. ಆಹಾರವೂ ನೀರೂ ಇಲ್ಲದೆ ಬಳಲಿದ್ದ. ಇಷ್ಟು ಚಿಕ್ಕ ವಯಸ್ಸಿನ ಬಾಲಕನಿಗೆ ಇಂತಹ ಅಮಾನುಷ ಶಿಕ್ಷೆ ನೀಡಿರುವುದು ಬೆಚ್ಚಿಬೀಳಿಸುವಂತೆ ಮಾಡಿದೆ” ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುಷ್ಟಾಕ್ ಪಠಾಣ್ ಅವರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸದ್ಯ ಅಂಜ್ನಿ ಠಾಣೆಯಲ್ಲಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಬಾಲಕನನ್ನು ಬಾಲ ಮಂದಿರಕ್ಕೆ ಕಳುಹಿಸಿ ಕೌನ್ಸೆಲಿಂಗ್ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.