ಕೋಲ್ಕತಾ, ನ. 12: ಪಶ್ಚಿಮ ಬಂಗಾಳದ ಕೋಲ್ಕತಾ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 11ರಂದು ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೈಜಾಕ್ ಬೆದರಿಕೆ ಸಂದೇಶ ಪತ್ತೆಯಾಗಿ ಕ್ಷಣಕಾಲ ದೇಶಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಯಿತು (Air India Hijack Hoax). ಬಳಿಕ ಇದು ಹುಸಿ ಬೆದರಿಕೆ ಎನ್ನುವುದು ಗೊತ್ತಾಗಿ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ. ಈ ಹುಸಿ ಬೆದರಿಕೆ ಹಾಕಿದ 56 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರ ಮುಂದೆ ಕೃತ್ಯದ ಅಸಲಿ ಕಾರಣ ಬಯಲಾಗಿದೆ. ಅನಾರೋಗ್ಯ ಪೀಡಿತ ಪತ್ನಿಯನ್ನು ಅಗಲಿ ವಿದೇಶಕ್ಕೆ ಹೋಗಲು ತಯಾರಿಲ್ಲದ ಭೂಪ ಬೆದರಿಕೆ ಹಾಕಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಹುಸಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದವನು ಎಂದು ಗುರುತಿಸಲಾಗಿದೆ. ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಬೇಕಾಗಿ ಬಂದಿದ್ದರಿಂದ, ಅನಾರೋಗ್ಯ ಪೀಡಿತ ಪತ್ನಿಯನ್ನು ಬಿಟ್ಟು ಹೋಗಲು ಮನಸ್ಸಿಲ್ಲದೆ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ.
ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿ:
ಕೋಲ್ಕತಾದಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾದ ಎಐ 2772 ವಿಮಾನದಲ್ಲಿ ಬುಧವಾರ ಬೆಳಗ್ಗೆ ಕೈಬರಹದ ಹೈಜಾಕ್ ಬೆದರಿಕೆ ಸಂದೇಶ ಪತ್ತೆಯಾಗಿತ್ತು. ಬೆಳಗ್ಗೆ 11.10ಕ್ಕೆ ವಿಮಾನವನ್ನು ಅಪಹರಿಸುವುದಾಗಿ ಬರೆಯಲಾಗಿತ್ತು. ಕೂಡಲೇ ವಿಮಾನದಲ್ಲಿ 109 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ ಕೂಲಂಕುಷವಾಗಿ ಪರಿಶೀಲನೆಗೆ ಒಳಪಡಿಸಿದಾಗ ಇದೊಂದು ಹುಸಿ ಬೆದರಿಕೆ ಎನ್ನುವುದು ಗೊತ್ತಾಯಿತು. ಅದಾದ ಬಳಿಕ ಬೆದರಿಕೆ ಹಾಕಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ. ಆತಂಕ ಎಲ್ಲ ನಿವಾರಣೆಯಾಗಿ, ಇದೊಂದು ಹುಸಿ ಬೆದರಿಕೆ ಎನ್ನುವುದು ಸಾಬೀತಾದ ಬಳಿಕ ಸಂಜೆ 5.38ಕ್ಕೆ ವಿಮಾನ ಮುಂಬೈಗೆ ತೆರಳಿತು.
ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಲಖನೌನಲ್ಲಿ ತುರ್ತು ಭೂಸ್ಪರ್ಶ
ತಪ್ಪೊಪ್ಪಿಕೊಂಡ ಪ್ರಯಾಣಿಕ
ಸದ್ಯ ಪೊಲೀಸರ ವಶದಲ್ಲಿರುವ ಪ್ರಯಾಣಿಕ ಈ ಬೆದರಿಕೆ ಸಂದೇಶ ತಾನೇ ಬರೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ʼʼಖಾಸಗಿ ಕಂಪನಿ ಉದ್ಯೋಗಿಯಾಗಿರುವ ಆತನಿಗೆ ಕೆಲಸ ನಿಮಿತ್ತ ವಿದೇಶಕ್ಕೆ ತೆರಳಲು ಸೂಚಿಸಲಾಗಿತ್ತು. ಆದರೆ ಅನಾರೋಗ್ಯಪೀಡಿತ ಪತ್ನಿಯನ್ನು ಅಗಲಿ ವಿದೇಶಕ್ಕೆ ತೆರಳಲು ಇಷ್ಟವಿಲ್ಲದೆ ಆತ ಈ ಬೆದರಿಕೆ ಹಾಕಿದ್ದʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಾಯ್ತು ಬೆದರಿಕೆ ಸಂದೇಶ
ಇತ್ತೀಚಿನ ದಿನಗಳಲ್ಲಿ ವಿಮಾನಕ್ಕೆ ಬೆದರಿಕೆ ಸಂದೇಶ ಬರುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ನವೆಂಬರ್ 7ರಂದು ಬೆಂಗಳೂರಿನಲ್ಲೂ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. ಅಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಅಪಹರಣದ ಬೆದರಿಕೆ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತಾಗಿ ಬೆಂಗಳೂರಿಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿತ್ತು. ತನಿಖೆಯ ನಂತರ ಇದೊಂದು ಹುಸಿ ಬೆದರಿಕೆ ಎನ್ನುವುದು ತಿಳಿದು ಬಂತು.
ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಇಂಧನ ಪೂರೈಕೆ ಸ್ಥಗಿತ
ಅದಕ್ಕೂ ಮೊದಲು ಅಕ್ಟೋಬರ್ 14ರಂದು ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಮರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಅಪಹರಣ ಬೆದರಿಕೆ ಸಂದೇಶ ಕಂಡು ಬಂದಿತ್ತು. ಬಳಿಕ ವಿಮಾನವನ್ನು ರಾಜಸ್ಥಾನದ ಜೈಪುರದಲ್ಲಿ ತುರ್ತು ಲ್ಯಾಂಡ್ ಮಾಡಲಾಯಿತು. ಅದಾದ ಬಳಿಕ ಇದು ಹುಸಿ ಬೆದರಿಕೆ ಎನ್ನುವುದು ಗೊತ್ತಾಯಿತು.