ಚಂಡೀಗಢ: ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ‘ಡೇರಾ ಸಚಾ ಸೌದ್’ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಸಿಂಗ್‌ಗೆ ( Gurmeet Ram Rahim Singh) ಹರಿಯಾಣ ಸರ್ಕಾರ ಮತ್ತೆ 17 ದಿನಗಳ ಫರ್ಲೋ ಮಂಜೂರು ಮಾಡಿದೆ. ಇದರೊಂದಿಗೆ, 2017ರಲ್ಲಿ ಶಿಕ್ಷೆಗೆ ಗುರಿಯಾದ ನಂತರ ಆತ ಜೈಲಿನಿಂದ ಹೊರಬರುತ್ತಿರುವುದು ಇದು 17ನೇ ಬಾರಿಯಾಗಿದೆ. ಹರಿಯಾಣದ ರೋಹ್ಟಕ್‌ನಲ್ಲಿರುವ ಸುನಾರಿಯಾ ಜೈಲಿನಿಂದ ಬಿಗಿ ಪೊಲೀಸ್ ಭದ್ರತೆಯೊಮದಿಗೆ ಹೊರಬಂದ ರಾಮ್ ರಹೀಮ್, ಸಿರ್ಸಾದಲ್ಲಿರುವ ತನ್ನ ಡೇರಾ ಸಚಾ ಪ್ರಧಾನ ಕಚೇರಿಗೆ ತೆರಳಿದ್ದಾನೆ.
2017ರ ಆಗಸ್ಟ್ನಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ಗುರುಮೀತ್ ರಾಮ್ ರಹೀಮ್‌ಗೆ ತನ್ನ ಇಬ್ಬರು ಆಶ್ರಮವಾಸಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ಬಂದಾಗ ಹರಿಯಾಣ ಮತ್ತು ಪಂಜಾಬ್‌ಗಳಲ್ಲಿ ಭಾರೀ ಹಿಂಸಾಚಾರ ನಡೆದು ಹಲವರು ಪ್ರಾಣ ಕಳೆದುಕೊಂಡಿದ್ದರು. ಅತ್ಯಾಚಾರ ಪ್ರಕರಣದ ಹೊರತಾಗಿ, ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲೂ ಈತನಿಗೆ ಶಿಕ್ಷೆಯಾಗಿತ್ತು. ಇತ್ತೀಚಿಗೆ ಹೈಕೋರ್ಟ್ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಖುಲಾಸೆಗೊಳಿಸಿತ್ತು.
2020 ರಿಂದ 17 ನೇ ಭಾರಿ ಬಿಡುಗಡೆ
ಆಗಸ್ಟ್ 2017 ರಲ್ಲಿ ಶಿಕ್ಷೆಯಾದ ನಂತರ, ಅವರಿಗೆ ಅಕ್ಟೋಬರ್ 2020ರಲ್ಲಿ ಒಂದು ದಿನದ ಪರೋಲ್ ನಿಡಲಾಯಿತು. ಮತ್ತೆ ಮೇ 2021ರಲ್ಲಿ ತಮ್ಮ ತಾಯಿಯನ್ನು ಭೇಟಿಯಾಗಲು 12 ಗಂಟೆಗಳ ಬಿಡುಗಡೆ ನೀಡಲಾಯಿತು. ಫೆಬ್ರುವರಿ 2022 ರಲ್ಲಿ ರಹೀಮ್‌ಗೆ 21 ದಿನಗಳ ಪರೋಲ್ ಮಂಜೂರಾಯಿತು, ನಂತರ ಜೂನ್ 2022 ರಲ್ಲಿ 30 ದಿನಗಳ ಬಿಡುಗಡೆ ಸಿಕ್ಕಿತು. ಅದೇ ವರ್ಷದ ಅಕ್ಟೋಬರ್‌ನಲ್ಲಿ ಅವರಿಗೆ ೪೦ ದಿನಗಳ ಫರ್ಲೋ ನೀಡಲಾಯಿತು, ಇದು ಅವರ ಐದನೇ ಬಿಡುಗಡೆಯಾಗಿತ್ತು. ಇದೀಗ ಮತ್ತೆ ಫರ್ಲೋ ಮಂಜೂರು ಮಾಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಪ್ರತಿ ಬಾರಿ ಜೈಲಿನಿಂದ ಹೊರಬರುತ್ತಿರುವುದೇಕೆ?
ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ದೆಹಲಿ ಭಾಗಗಳಲ್ಲಿ ಡೇರಾ ಸಚಾ ಸೌದ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದೆ. ಈ ಹಿಂದೆ ಹರಿಯಾಣ ಅಸೆಂಬ್ಲಿ ಚುನಾವಣೆ, ದೆಹಲಿ ಚುನಾವಣೆ ಅಥವಾ ಲೋಕಸಭಾ ಚುನಾವಣೆಗಳು ಬಂದಾಗ ಈತನಿಗೆ ಸರ್ಕಾರ ಪರೋಲ್ ಮಂಜೂರು ಮಾಡುತ್ತಾ ಬಂದಿದೆ ಎಂಬ ಗಂಭೀರ ಆರೋಪಗಳಿವೆ. ಹತ್ಯೆಗೊಳಗಾದ ಪತ್ರಕರ್ತನ ಕುಟುಂಬದವರು, ವಿವಿಧ ಸಿಖ್ ಸಂಘಟನೆಗಳು ಹಾಗೂ ಸಾರ್ವಜನಿಕರು ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅತ್ಯಾಚಾರದಂತಹ ಗಂಭೀರ ಅಪರಾಧ ಎಸಗಿದ ವ್ಯಕ್ತಿಗೆ ಕಾನೂನಿನ ನಿಯಮಗಳನ್ನು ಸಡಿಲಗೊಳಿಸಿ ಹೀಗೆ ಪದೇ ಪದೇ ಹೊರಬರಲು ಅವಕಾಶ ನೀಡುತ್ತಿರುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುತ್ತಿರುವ ಅಪಹಾಸ್ಯ ಎಂದು ಹಲವು ಜನಪ್ರತಿನಿಧಿಗಳು ಹಾಗೂ ಸಂತ್ರಸ್ತರ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.