ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅತ್ಯಾಚಾರ ಪ್ರಕರಣ: ತೆಹಲ್ಕಾ ಪತ್ರಿಕೆಯ ಮಾಜಿ ಮುಖ್ಯ ಸಂಪಾದಕ ತರುಣ್ ತೇಜಪಾಲ್ ನ್ಯಾಯಾಲಯಕ್ಕೆ ಶರಣು

Tarun Tejpal Surrenders: ತೆಹಲ್ಕಾ ಪತ್ರಿಕೆಯ ಮಾಜಿ ಮುಖ್ಯ ಸಂಪಾದಕ ತರುಣ್ ತೇಜಪಾಲ್ 2013ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಮಾಪುಸಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಸದ್ಯ ನ್ಯಾಯಾಲಯಕ್ಕೆ ಶರಣಾಗಿರುವ ಅವರನ್ನು ಉತ್ತರ ಗೋವಾದ ಕೋಲ್ವಾಲೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಗೋವಾ ನ್ಯಾಯಾಲಯದ ಮುಂದೆ ಶರಣಾದ ತರುಣ್ ತೇಜಪಾಲ್

ಪಣಜಿ, ಸೆ. 14: ತೆಹಲ್ಕಾ ಪತ್ರಿಕೆಯ ಮಾಜಿ ಮುಖ್ಯ ಸಂಪಾದಕ ತರುಣ್ ತೇಜಪಾಲ್ 2013ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (ಸೆಪ್ಟೆಂಬರ್‌ 14) ಗೋವಾದ ಮಾಪುಸಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ (Tarun Tejpal Surrenders). ಸುಪ್ರೀಂ ಕೋರ್ಟ್‌ನ (Supreme Court) ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಅವರು ಶರಣಾರಾಗಿದ್ದಾರೆ. 63 ವರ್ಷದ ಮಾಜಿ ಸಂಪಾದಕ ತರುಣ್ ತೇಜಪಾಲ್ ಅವರಿಗೆ ಶಿಕ್ಷೆಯ ವಿರುದ್ಧದ ಮೇಲ್ಮನವಿಯ ವಿಚಾರಣೆ ಆರಂಭವಾಗುವ ಮುನ್ನ ನ್ಯಾಯಾಲಯಕ್ಕೆ ಶರಣಾಗಲು ಸುಪ್ರೀಂ ಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡಿತ್ತು. ಆ ಗಡುವು ನಾಳೆಗೆ (ಮಂಗಳವಾರ, ಸೆಪ್ಟೆಂಬರ್‌ 15) ಕೊನೆಗೊಳ್ಳಲಿದ್ದ ಹಿನ್ನೆಲೆಯಲ್ಲಿ ಶರಣಾಗಿದ್ದಾರೆ.

ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಆಗಸ್ಟ್ 6ರಂದು ತೇಜಪಾಲ್ ಅವರನ್ನು ಅಪರಾಧಿ ಎಂದು ಘೋಷಿಸಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಸದ್ಯ ನ್ಯಾಯಾಲಯಕ್ಕೆ ಶರಣಾಗಿರುವ ಅವರನ್ನು ಉತ್ತರ ಗೋವಾದ ಕೋಲ್ವಾಲೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಬಾಂಬೆ ಹೈಕೋರ್ಟ್ ತಮಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ನಡೆಯುವವರೆಗೆ, ತಾವು ಜೈಲಿಗೆ ಶರಣಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಕೋರಿ ತೇಜಪಾಲ್ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ತಿಂಗಳು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ವೈದ್ಯರ ಮೇಲೆ ಹಲ್ಲೆ ನಡೆಸುವ ರಾಜಕಾರಣಿಗಳನ್ನು ತಕ್ಷಣ ವಶಕ್ಕೆ ಪಡೆಯಿರಿ: ಸುಪ್ರೀಂ ಕೋರ್ಟ್

ತೇಜ್‌ಪಾಲ್ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಶರಣಾಗುವ ಅಗತ್ಯವನ್ನು ರದ್ದುಗೊಳಿಸುವ ಮತ್ತು ಆರೋಪಿ ಶರಣಾಗದಿದ್ದರೂ ಕ್ರಿಮಿನಲ್ ಮೇಲ್ಮನವಿಯನ್ನು ಪಟ್ಟಿ ಮಾಡುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ ಎಂದು ವಾದಿಸಿದರು.

ತಮ್ಮ ಮೇಲ್ಮನವಿಯನ್ನು ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿ, ಅದರ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕು ಎಂಬ ಕಾರಣವನ್ನು ನೀಡಿ ತೇಜಪಾಲ್ ಶರಣಾಗತಿಯಿಂದ ವಿನಾಯಿತಿ ಕೋರಿದ್ದರು.

ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಅಪರಾಧ ಸಾಬೀತಾದ ಆದೇಶವನ್ನು ಪ್ರಶ್ನಿಸುವ ಮೊದಲು ಶರಣಾಗುವುದು ಕಡ್ಡಾಯ. ನಿಯಮಗಳು ಹೇಳುವಂತೆ ಶರಣಾಗತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಗೋವಾ ಸರ್ಕಾರದ ಪರವಾಗಿ ಹಾಜರಾದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಅರ್ಜಿಯನ್ನು ಬಲವಾಗಿ ವಿರೋಧಿಸಿದರು. ಶರಣಾಗತಿಯಿಂದ ವಿನಾಯಿತಿ ನೀಡುವ ಅರ್ಜಿಯನ್ನು ಈ ಪ್ರಕರಣದ ಗಂಭೀರತೆಯ ಆಧಾರದ ಮೇಲೆಯೇ ಪರಿಶೀಲಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಸಲ್ಲಿಸಿದರು. ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ ಅವರು, ಈ ಪ್ರಕರಣವು ಅತ್ಯಂತ ಕ್ರೂರ ಸ್ವರೂಪದ ಅತ್ಯಾಚಾರದ ಅಪರಾಧವನ್ನು ಒಳಗೊಂಡಿದೆ. ಇದಕ್ಕಾಗಿ ತೇಜಪಾಲ್ ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವಾದಿಸಿದರು.