ಪಾಟ್ನಾ, ಜೂ. 6: ಬಿಹಾರದ ಗಯಾ ಜಿಲ್ಲೆಯ ಬೋಧಗಯಾ ಸಮೀಪದ ಮಸ್ತಪುರ ಗ್ರಾಮದ ಪ್ಲಂಬರ್ ವಿಕಾಶ್ ಕುಮಾರ್ ಅವರ ಬ್ಯಾಂಕ್ ಖಾತೆಗೆ ಏಕಾಏಕಿ 294 ಕೋಟಿ ರುಪಾಯಿ ಜಮೆಯಾಗಿರುವ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ (Viral News). ಸಾಮಾನ್ಯವಾಗಿ ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುವ ವಿಕಾಶ್ ಕುಮಾರ್ ಅವರ ಖಾತೆಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಕೋಟ್ಯಂತರ ರೂಪಾಯಿ ಕಾಣಿಸಿಕೊಂಡಿದ್ದು ಅಧಿಕಾರಿಗಳನ್ನು ಕೂಡ ಅಚ್ಚರಿಗೆ ದೂಡಿದೆ.
ಮಾಹಿತಿ ಪ್ರಕಾರ, ವಿಕಾಶ್ ಕುಮಾರ್ ಅವರ ಖಾತೆಯಲ್ಲಿ ಕೇವಲ 113 ರುಪಾಯಿ ಉಳಿದಿತ್ತು. ಇತ್ತೀಚೆಗೆ ಗ್ರಾಹಕರೊಬ್ಬರು ಕಳುಹಿಸಿದ್ದ ಸುಮಾರು 1,300 ರುಪಾಯಿಯನ್ನು ಅವರು ವಾಪಸ್ ಪಡೆದಿದ್ದರು. ಆದರೆ ಗುರುವಾರ (ಜೂನ್ 4) ಬೆಳಗ್ಗೆ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಿದಾಗ 94 ಕೋಟಿ ರುಪಾಯಿ ಜಮೆಯಾಗಿರುವುದನ್ನು ಕಂಡು ಅವರು ಬೆಚ್ಚಿ ಬಿದ್ದಿದ್ದಾರೆ. ಇದನ್ನು ತಾಂತ್ರಿಕ ದೋಷ ಎಂದು ಭಾವಿಸಿದ್ದ ಅವರು ಮತ್ತೆ ಸಂಜೆ ವೇಳೆ ಖಾತೆ ಪರಿಶೀಲಿಸಿದಾಗ ಬ್ಯಾಲೆನ್ಸ್ 294 ಕೋಟಿ ರುಪಾಯಿಗೆಗೆ ಏರಿರುವುದು ಪತ್ತೆಯಾಗಿದೆ.
ಇಷ್ಟು ದೊಡ್ಡ ಮೊತ್ತ ತನ್ನ ಖಾತೆಯಲ್ಲಿ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡ ವಿಕಾಶ್, ಗ್ರಾಮ ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ವಿಷಯ ತಿಳಿಸಿದ್ದು, ಅವರ ಸಲಹೆಯಂತೆ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದಾರೆ. ವಿಶೇಷವೆಂದರೆ, ಖಾತೆಗೆ ಬಂದ ಹಣವನ್ನು ಬಳಸಲು ಅಥವಾ ವರ್ಗಾಯಿಸಲು ಅವರು ಯಾವುದೇ ಪ್ರಯತ್ನ ಮಾಡಿಲ್ಲ.
ಜಿಲೇಬಿಗೆ ‘ಸ್ಟ್ರಾಬೆರಿ ಲಸ್ಸಿ ಕಾಂಬಿನೇಷನ್; ಅಯ್ಯೋ ಇದೆಂಥಾ ವಿಚಿತ್ರ ಕಾಂಬಿನೇಷನ್!
ಪ್ರಕರಣದ ಬಗ್ಗೆ ಮಾಹಿತಿ ಪಡೆದ ಬೋಧಗಯಾ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ದಾಖಲೆಗಳು, ಸರ್ವರ್ ಲಾಗ್‌ಗಳು, ವಹಿವಾಟುಗಳ ವಿವರಗಳು ಹಾಗೂ ಖಾತೆಗೆ ಸಂಬಂಧಿಸಿದ ಇತರೆ ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಈ ಹಣ ಬ್ಯಾಂಕಿನ ತಾಂತ್ರಿಕ ದೋಷದಿಂದ ಜಮೆಯಾಯಿತೇ, ಸಾಫ್ಟ್‌ವೇರ್ ಸಮಸ್ಯೆಯಿಂದ ಉಂಟಾಯಿತೇ ಅಥವಾ ವಂಚನೆಗೆ ಸಂಬಂಧಿಸಿದ ಪ್ರಕರಣವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಕಾಶ್ ಕುಮಾರ್, “ನಾನು ಸಾಮಾನ್ಯ ಪ್ಲಂಬರ್. ನನ್ನ ಖಾತೆಯಲ್ಲಿ ಇಷ್ಟು ದೊಡ್ಡ ಮೊತ್ತ ಇರುವುದು ಅಸಾಧ್ಯ. ಈ ಹಣ ಎಲ್ಲಿಂದ ಬಂದಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ಯಾವುದೇ ವಹಿವಾಟು ನಡೆಸಿಲ್ಲ” ಎಂದು ತಿಳಿಸಿದ್ದಾರೆ. ಪ್ರಸ್ತುತ ಈ ವಿಚಿತ್ರ ಪ್ರಕರಣ ಸ್ಥಳೀಯರಲ್ಲಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಚರ್ಚೆಗೆ ಕಾರಣವಾಗಿದ್ದು, ತನಿಖೆಯ ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ.