ನವದೆಹಲಿ, ಆ. 15: ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ ಮತ್ತು ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಆಧುನಿಕ ಸಿವಿಲ್ ಡಿಫೆನ್ಸ್ ಸ್ವಯಂಸೇವಕರ ಬೃಹತ್ ಪಡೆಯನ್ನು ರಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ.
80ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಶನಿವಾರ ಕೆಂಪುಕೋಟೆಯ ಆವರಣದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂಬರುವ ದಿನಗಳಲ್ಲಿ ಬಲಿಷ್ಠ ಹಾಗೂ ಆಧುನಿಕ ಸಿವಿಲ್ ಡಿಫೆನ್ಸ್ ನೆಟ್‌ವರ್ಕ್ ನಿರ್ಮಿಸಲಾಗುವುದು ಎಂದು ಹೇಳಿದರು. ಈ ಪಡೆಗೆ ಆಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆಗಳ ಕುರಿತು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಆಧುನಿಕ ಕಾಲದ ಬಿಕ್ಕಟ್ಟುಗಳು ಹಾಗೂ ಹೊಸ ರೀತಿಯ ಭದ್ರತಾ ಸವಾಲುಗಳನ್ನು ಎದುರಿಸಲು ನಾಗರಿಕರನ್ನು ಸಜ್ಜುಗೊಳಿಸುವುದು ಇದರ ಪ್ರಮುಖ ಉದ್ದೇಶ. ತುರ್ತು ಸಂದರ್ಭದಲ್ಲಿ ಜನರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ, ತುರ್ತು ಸಂವಹನ, ಸ್ಥಳಾಂತರ, ಸುರಕ್ಷಿತ ಆಶ್ರಯ ಹಾಗೂ ರಕ್ಷಣಾ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಈ ವ್ಯವಸ್ಥೆ ನೆರವಾಗಲಿದೆ.
ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳ ಪಾತ್ರವನ್ನು ಸ್ಪಷ್ಟಪಡಿಸಲು ಅಣಕು ಕಾರ್ಯಾಚರಣೆಗಳು (Mock Drills) ನಡೆಸುವುದರಿಂದ ಗೊಂದಲ ಮತ್ತು ಆತಂಕ ಕಡಿಮೆ ಮಾಡಿ, ಸಮನ್ವಯ ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.
80ನೇ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಮಾಡಿದ ಪ್ರಮುಖ ಘೋಷಣೆ ಏನು?
‘ಸುದರ್ಶನ ಚಕ್ರ’ ಯೋಜನೆಗೆ ವೇಗ
ಭಾರತದ ಸ್ವದೇಶಿ ವಾಯು ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಪ್ರಯತ್ನಗಳ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು. ‘ಸುದರ್ಶನ ಚಕ್ರ’ ವ್ಯವಸ್ಥೆಯ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಕಳೆದ ವರ್ಷ ಆಗಸ್ಟ್ 15ರಂದು ಘೋಷಿಸಲಾಗಿದ್ದ ಈ ಯೋಜನೆಯು ಪ್ರಮುಖ ಸೇನಾ ಹಾಗೂ ನಾಗರಿಕ ಸ್ಥಾಪನೆಗಳನ್ನು ವೈಮಾನಿಕ ದಾಳಿಗಳಿಂದ ರಕ್ಷಿಸುವುದು ಮತ್ತು ಶತ್ರು ದಾಳಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ.
ಜಾಗತಿಕ ರಕ್ಷಣಾ ಉತ್ಪಾದನಾ ಕೇಂದ್ರವಾಗಲಿ ಭಾರತ
ರಕ್ಷಣಾ ಉತ್ಪಾದನೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಭಾರತ ಕೇವಲ ಸ್ವಾವಲಂಬನೆಯತ್ತ ಸಾಗುವುದಷ್ಟೇ ಅಲ್ಲದೆ ರಕ್ಷಣಾ ತಂತ್ರಜ್ಞಾನ ಮತ್ತು ಉಪಕರಣಗಳ ಜಾಗತಿಕ ಪೂರೈಕೆದಾರನಾಗಬೇಕು ಎಂದು ಕರೆ ನೀಡಿದರು. ಡ್ರೋನ್‌ಗಳು, ಕೌಂಟರ್-ಡ್ರೋನ್ ವ್ಯವಸ್ಥೆಗಳು ಹಾಗೂ ಹೈಪರ್‌ಸಾನಿಕ್ ತಂತ್ರಜ್ಞಾನದಂತಹ ಆಧುನಿಕ ಕ್ಷೇತ್ರಗಳಲ್ಲಿ ದೇಶೀಯ ಪರಿಣತಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
2025-26ನೇ ಹಣಕಾಸು ವರ್ಷದಲ್ಲಿ ಭಾರತದ ದೇಶೀಯ ರಕ್ಷಣಾ ಉತ್ಪಾದನೆ ₹1.78 ಲಕ್ಷ ಕೋಟಿಗೆ ಏರಿಕೆಯಾಗಿದೆ. 2014ರಲ್ಲಿ ಇದು ₹46,000 ಕೋಟಿಯಷ್ಟಿತ್ತು. ಇದೇ ಅವಧಿಯಲ್ಲಿ ರಕ್ಷಣಾ ರಫ್ತು ₹38,424 ಕೋಟಿಗೆ ಏರಿಕೆಯಾಗಿದ್ದು, ಭಾರತೀಯ ರಕ್ಷಣಾ ಉತ್ಪನ್ನಗಳು ಸುಮಾರು 100 ದೇಶಗಳಿಗೆ ಪೂರೈಕೆಯಾಗುತ್ತಿವೆ ಎಂದು ಸರ್ಕಾರ ತಿಳಿಸಿದೆ.
ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆಗೆ ಶ್ಲಾಘನೆ
ರಾಷ್ಟ್ರ ನಿರ್ಮಾಣ ಮತ್ತು ಭದ್ರತಾ ಕ್ಷೇತ್ರದಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರವನ್ನೂ ಪ್ರಧಾನಿ ಮೋದಿ ಶ್ಲಾಘಿಸಿದರು. ಯುದ್ಧ ವಿಮಾನ ಚಾಲನೆ, ನಾಗರಿಕ ವಿಮಾನಯಾನ, ಕ್ರೀಡೆ, STEM ಶಿಕ್ಷಣ ಮತ್ತು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು. ಸಿವಿಲ್ ಡಿಫೆನ್ಸ್ ವ್ಯವಸ್ಥೆಯ ಆಧುನೀಕರಣ, ಸ್ವದೇಶಿ ರಕ್ಷಣಾ ಸಾಮರ್ಥ್ಯ ವೃದ್ಧಿ, ರಕ್ಷಣಾ ಉತ್ಪಾದನೆ ಮತ್ತು ರಫ್ತು ಹೆಚ್ಚಳದ ಮೂಲಕ ದೇಶದ ಒಟ್ಟಾರೆ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಸರ್ಕಾರದ ಮುಂದಿನ ಪ್ರಮುಖ ಆದ್ಯತೆಗಳಾಗಿವೆ ಎಂದರು.