ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪರೀಕ್ಷಾ ಗುಣಮಟ್ಟ ಸುಧಾರಣೆಗೆ ಟಾಸ್ಕ್‌ಫೋರ್ಸ್‌ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ; ನಂದನ್‌ ನಿಲೇಕಣಿ ನೇತೃತ್ವ

Nandan Nilekani: ಇನ್ಫೋಸಿಸ್ ಸಹ-ಸಂಸ್ಥಾಪಕ, ಕರ್ನಾಟದ ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆಯನ್ನು ರಚಿಸಿ ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ವಿಡಿಯೊ ಸಂದೇಶದಲ್ಲಿ ಅವರು ಈ ಮಹತ್ವದ ನಿರ್ಧಾರ ಪ್ರಕಟಿಸಿದರು. ಆ ಮೂಲಕ ಪ್ರಲ್ಹಾದ್‌ ಜೋಸಿ ಬಳಿಕ ಮತ್ತೋರ್ವ ಕನ್ನಡಿಗರಿಗೆ ಉನ್ನತ ಹುದ್ದೆ ಸಿಕ್ಕಂತಾಗಿದೆ.

ನರೇಂದ್ರ ಮೋದಿ ಮತ್ತು ನಂದನ್‌ ನಿಲೇಕಣಿ (ಸಂಗ್ರಹ ಚಿತ್ರ)

ದೆಹಲಿ, ಜು. 26: ನೀಟ್‌ ಪರೀಕ್ಷೆಯಲ್ಲಿನ ಅಕ್ರಮ, ಭಾರಿ ಪ್ರತಿಭಟನೆ ಬಳಿಕ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಇದೀಗ ಇನ್ನಷ್ಟು ಪರೀಕ್ಷಾ ಸುಧಾರಣಾ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ. ವಿಡಿಯೊ ಸಂದೇಶ ಮೂಲಕ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ಫೋಸಿಸ್ ಸಹ-ಸಂಸ್ಥಾಪಕ, ಕರ್ನಾಟದ ನಂದನ್ ನಿಲೇಕಣಿ (Nandan Nilekani) ನೇತೃತ್ವದ ಕಾರ್ಯಪಡೆಯನ್ನು ರಚಿಸಿ ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ. ಈ ಕಾರ್ಯಪಡೆಯ ವರದಿಯ ಆಧಾರದ ಮೇಲೆ "ಮುಂಬರುವ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಕಾಕ್ರೋಚ್‌ ಜನತಾ ಪಾರ್ಟಿ ಮತ್ತು ಯುವಜನತೆಯ 36 ದಿನಗಳ ಪ್ರತಿಭಟನೆಯ ಬಳಿಕ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಮೋದಿ ಈ ಘೋಷಣೆ ಹೊರಡಿಸಿದ್ದಾರೆ.

ನರೇಂದ್ರ ಮೋದಿ ಅವರ ವಿಡಿಯೊ ಸಂದೇಶ:



ಮೋದಿ ಹೇಳಿದ್ದೇನು?

"ಸ್ನೇಹಿತರೇ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಭಾರತ ಸರ್ಕಾರ ನಿರಂತರವಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟವಾಡಿದವರು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ನಾವು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇವೆ. ಸೋಮವಾರ (ಜುಲೈ 27) ಸಂಸತ್ತಿನಲ್ಲಿಯೂ ಕಠಿಣ ನಿಬಂಧನೆಗಳೊಂದಿಗೆ ಹೊಸ ಕಾನೂನನ್ನು ರೂಪಿಸುವ ದಿಕ್ಕಿನಲ್ಲಿ ನಾವು ಕಾರ್ಯನಿರ್ವಹಿಸುತ್ತೇವೆ" ಎಂದು ಪ್ರಧಾನಿ ಹೇಳಿದರು.

ನೂತನ ಶಿಕ್ಷಣ ಸಚಿವರಾಗಿ ಪ್ರಲ್ಹಾದ್‌ ಜೋಶಿ ನೇಮಕ; ಕನ್ನಡಿಗನ ಹೆಗಲಿಗೆ ಬಿತ್ತು ಪ್ರಮುಖ ಜವಾಬ್ದಾರಿ

"ನಾವು ಭವಿಷ್ಯಕ್ಕಾಗಿ ಯೋಚಿಸಬೇಕು. ನಮ್ಮ ಪರೀಕ್ಷಾ ವ್ಯವಸ್ಥೆಯು ವಿಶ್ವಾಸಾರ್ಹವಾಗಿರಬೇಕು, ನಮ್ಮ ಪರೀಕ್ಷಾ ವ್ಯವಸ್ಥೆಯು ಪಾರದರ್ಶಕವಾಗಿರಬೇಕು ಮತ್ತು ಪರೀಕ್ಷಾ ವ್ಯವಸ್ಥೆಯು ತಂತ್ರಜ್ಞಾನದ ಗರಿಷ್ಠ ಬಳಕೆ ಹೊಂದಿರಬೇಕುʼʼ ಎಂದು ತಿಳಿಸಿದರು.

"ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲು ನಿರ್ಧರಿಸಲಾಗಿದೆ. ಇದು ಪರೀಕ್ಷಾ ಸುಧಾರಣೆ ಕ್ರಮಗಳನ್ನು ಸೂಚಿಸಲಿದೆ. ಸಾಧ್ಯವಾದಷ್ಟು ಬೇಗ ಈ ಕಾರ್ಯಪಡೆಯ ವರದಿಯನ್ನು ಜಾರಿಗೊಳಿಸಲಾಗುವುದುʼʼಎಂದು ಪ್ರಧಾನಿ ಮೋದಿ ವಿವರಿಸಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿಲೇಕಣಿಯ ನಂದನ್‌ ಉದ್ಯಮಿ, ಇನ್ಫೋಸಿಸ್ ಸಹಸ್ಥಾಪಕರಾಗಿ ಜನಪ್ರಿಯ. ಅಲ್ಲದೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಆಧಾರ್ ಗುರುತಿನ ಚೀಟಿ ವ್ಯವಸ್ಥೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ನಿಲೇಕಣಿ ಐಐಟಿ ಬಾಂಬೆಯಿಂದ ಪದವಿ ಪಡೆದಿದ್ದು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರೂ ಹೌದು.

ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ವಿಡಿಯೊ ಎಫೆಕ್ಟ್‌; ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಸಂಖ್ಯೆ ಒಮ್ಮೆಲೇ 11 ಲಕ್ಷ ಏರಿಕೆ

ರಾಜಕೀಯ ಪ್ರವೇಶ

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಅ‍ಧ್ಯಕ್ಷರಾಗಿದ್ದ ಅವರು ರಾಜಕೀಯಕ್ಕೂ ಪ್ರವೇಶಿಸಿದ್ದರು. 2009ರಿಂದ ಕಾಂಗ್ರೆಸ್ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದ ನಂದನ್ ಅವರಿಗೆ 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಟಿಕೆಟ್‌ ಲಭಿಸಿತ್ತು. ಆದರೆ ಬಿಜೆಪಿಯ ಅನಂತ್‌ ಕುಮಾರ್‌ ವಿರುದ್ಧ ಸೋಲೋಪ್ಪಿಕೊಂಡಿದ್ದರು. ಆಗ ನಿಲೇಕಣಿ ಅವರ ಆಸ್ತಿ ಬರೋಬ್ಬರಿ 7,710 ಕೋಟಿ ರುಪಾಯಿ ಇತ್ತು. ಆ ಮೂಲಕ 2014ರ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದರು. 2019ರಿಂದ ರಾಜಕೀಯದಿಂದ ದೂರ ಇದ್ದಾರೆ.

2 ದಿನಗಳಲ್ಲಿ ಇಬ್ಬರು ಕನ್ನಡಿಗರಿಗೆ ಪ್ರಮುಖ ಹುದ್ದೆ

ವಿಶೇಷ ಎಂದರೆ 2 ದಿನಗಳಲ್ಲಿ ಇಬ್ಬರು ಕನ್ನಡಿಗರಿಗೆ ಕೇಂದ್ರ ಉನ್ನತ ಹುದ್ದೆ ಲಭಿಸಿದೆ. ಶನಿವಾರವಷ್ಟೆ ಪ್ರಲ್ಹಾದ್‌ ಜೋಶಿ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಟಾಸ್ಕ್‌ಫೋರ್ಸ್‌ನ ನೇತೃತ್ವ ಮತ್ತೋರ್ವ ಕನ್ನಡಿಗರಿಗೆ ಸಿಕ್ಕಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author