ನೂತನ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ನೇಮಕ; ಕನ್ನಡಿಗನ ಹೆಗಲಿಗೆ ಬಿತ್ತು ಪ್ರಮುಖ ಜವಾಬ್ದಾರಿ
Pralhad Joshi: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಈ ಹೊಣೆಯನ್ನು ಕನ್ನಡಿಗರಾದ ಪ್ರಲ್ಹಾದ್ ಜೋಶಿ ಅವರಿಗೆ ನೀಡಿದೆ.
-
ದೆಹಲಿ, ಜು. 25: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಈ ಹೊಣೆಯನ್ನು ಕನ್ನಡಿಗರಾದ ಪ್ರಲ್ಹಾದ್ ಜೋಶಿ (Pralhad Joshi) ಅವರಿಗೆ ನೀಡಿದೆ. ಜೋಶಿ ಈಗಾಗಲೇ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಶಿಕ್ಷಣ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ಬಂದಂತಾಗಿದೆ. ಪ್ರಧಾನ್ ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕ್ಯಾಬಿನೆಟ್ ಸಚಿವರಾಗಿರುವ ಜೋಶಿ ಅವರಿಗೆ ಅಸ್ತಿತ್ವದಲ್ಲಿರುವ ಖಾತೆಯ ಜತೆಗೆ ಶಿಕ್ಷಣ ಸಚಿವಾಲಯದ ಜವಾಬ್ದಾರಿಯನ್ನು ವಹಿಸುವಂತೆ ರಾಷ್ಟ್ರಪತಿ ನಿರ್ದೇಶಿಸಿದರು ಎಂದು ಮೂಲಗಳು ತಿಳಿಸಿವೆ. ಧಾರವಾಡ ಕ್ಷೇತ್ರದ ಸಂಸದರಾಗಿರುವ ಪ್ರಲ್ಹಾದ್ ಜೋಶಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ನೇಮಕ:
President Droupadi Murmu, as advised by the Prime Minister, has accepted the resignation of Dharmendra Pradhan.
— ANI (@ANI) July 25, 2026
Further, as advised by the Prime Minister, the President has directed that Pralhad Joshi, Cabinet Minister, be assigned the charge of the Ministry of Education, in… pic.twitter.com/rMmTK99zdR
ಪ್ರಲ್ಹಾದ್ ಜೋಶಿ ಹಿನ್ನೆಲೆ
1962ರಲ್ಲಿ ವಿಜಯಪುರದಲ್ಲಿ ಜನಿಸಿದ ಪ್ರಲ್ಹಾದ್ ಜೋಶಿ 1992-94ರ ಅವಧಿಯಲ್ಲಿ ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಮೈದಾನ (ಈದ್ಗಾ ಮೈದಾನ) ರಾಷ್ಟ್ರಧ್ವಜ ಹಾರಿಸುವ ಚಳವಳಿಯ ಮುಂಚೂಣಿ ವಹಿಸುವ ಮೂಲಕ ರಾಜಕೀಯವಾಗಿ ಗಮನ ಸೆಳೆದರು. 9 ವರ್ಷದ ಬಾಲಕನಾಗಿದ್ದಾಗಲೇ ಅವರು ರಾಷ್ಟ್ರೀಯ ಸ್ವಯಂ ಸೇವಕರಾಗಿ (RSS) ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಬವ ಹೊಂದಿದ್ದಾರೆ.
ಇವರು ಧಾರವಾಡ ಲೋಕಸಭಾ ಕ್ಷೇತ್ರದಿಂದ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 2004ರಿಂದ ಸತತವಾಗಿ ಸಂಸದರಾಗಿ ಆಯ್ಕೆಯಾಗಿರುವ ಜೋಶಿ, 2019ರಿಂದ ಕೇಂದ್ರ ಸಚಿವರಾಗಿಯೂ ಕೂಡ ಕಾರ್ಯನಿರ್ವಹಿಸಿದ್ದಾರೆ. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಉತ್ತಮ ಹಿಡಿತ ಹೊಂದಿರುವ ಇವರು ನರೇಂದ್ರ ಮೋದಿ ಅವರ ಟೀಮ್‌ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ರಾಜಕೀಯ ಹಾದಿ
1992ರಲ್ಲಿ . ಹುಬ್ಬಳ್ಳಿ ಈದ್ಗಾ ಮೈದಾನ ಉಳಿಸಿ ಹೋರಾಟದಲ್ಲಿ ಭಾಗಿಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು ಅವರು 1995ರಲ್ಲಿ ಧಾರವಾಡ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. 1998ರಲ್ಲಿ ಧಾರವಾಡ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾದರು. 2004ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಅಲ್ಲಿಂದ ಸತತವಾಗಿ 2009, 2014, 2019 ಮತ್ತು 2024 ಹೀಗೆ 5 ಬಾರಿ ಗೆಲುವು ಸಾಧಿಸಿದರು.
ಬಿಡದಿ ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
2019ರಲ್ಲಿ ಕೇಂದ್ರ ಸಚಿವ
2019ರಲ್ಲಿ ಎನ್‌ಡಿಎ ಸರ್ಕಾರದಲ್ಲಿ ಪ್ರಲ್ಹಾದ್ ಜೋಶಿ ಕೇಂದ್ರ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು. ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿಗಳ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದರು. ಆ ಮೂಲಕ ಮೋದಿ ಟೀಮ್ ಕಣ್ಣಿಗೆ ಬಿದ್ದ ಅವರು 2024ರಲ್ಲಿಯೂ ಸಚಿವರಾಗಿ ಮುಂದುವರಿದರು. ಯಾವ ಖಾತೆಯನ್ನು ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಕಲೆ ಅವರಿಗಿದೆ. ಜತೆಗೆ ವಿವಾದ ಇಲ್ಲದಿರುವುದು ಅವರ ಮತ್ತೊಂದು ಪ್ಲಸ್ ಪಾಯಿಂಟ್.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.