ನವದೆಹಲಿ, ನ. 26: ಸಂವಿಧಾನ ದಿನಾಚರಣೆಯ ಅಂಗವಾಗಿ ಗುರುವಾರ ವಿಶೇಷ ಸಂದೇಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಸಂವಿಧಾನ ರಚನೆಯಲ್ಲಿ ಮಹಿಳೆಯರ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಅಡ್ಡಿಪಡಿಸಿದ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಮಸೂದೆಯನ್ನು ಈ ವರ್ಷದ ಆರಂಭದಲ್ಲಿ ವಿಫಲಗೊಳಿಸಿರುವುದು ಪ್ರತಿಯೊಬ್ಬರ ಹೃದಯವನ್ನೂ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುವ ಘಟನೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ವಿರೋಧ ಪಕ್ಷಗಳು ಮಸೂದೆಗೆ ಅಡ್ಡಿಪಡಿಸುವ ಮೂಲಕ ಮತ್ತೊಮ್ಮೆ ಸಂವಿಧಾನಿಕ ಮೌಲ್ಯಗಳ ಬಗೆಗಿನ ತಮ್ಮ ತಿರಸ್ಕಾರವನ್ನು ಪ್ರದರ್ಶಿಸಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
"ನಮ್ಮ ಸಂವಿಧಾನವನ್ನು ರೂಪಿಸಲು ಶ್ರಮಿಸಿದ ಮಹನೀಯ ಮಹಿಳೆಯರನ್ನು ಗುರುತಿಸದೆ ಸಂವಿಧಾನದ ಪಯಣ ಪೂರ್ಣಗೊಳ್ಳುವುದಿಲ್ಲ. ದೇಶದ ನಾರಿ ಶಕ್ತಿಗೆ ನ್ಯಾಯ ಒದಗಿಸುವುದನ್ನು ಯಾವುದೇ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ನಾನು ಭರವಸೆ ನೀಡುತ್ತೇನೆ" ಎಂದು ಅವರು ತಿಳಿಸಿದ್ದಾರೆ.
ಇರಾನ್ ಮೇಲೆ ಅಮೆರಿಕ ಸುಂಕ; ಭಾರತದ ಮೇಲೆ ಪರಿಣಾಮವೇನು? ಯಾವುದರ ಬೆಲೆ ಹೆಚ್ಚಾಗುತ್ತದೆ?
ತಮ್ಮ ಸಂವಿಧಾನ ದಿನದ ಸಂದೇಶದಲ್ಲಿ ವಿರೋಧ ಪಕ್ಷಗಳ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿರುವ ಪ್ರಧಾನಿ ಮೋದಿ, ಸಂಸದೀಯ ಕಲಾಪಗಳಿಗೆ ಅಡ್ಡಿಪಡಿಸುವ ಪ್ರವೃತ್ತಿಯನ್ನು ಖಂಡಿಸಿದ್ದಾರೆ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪ್ರಶ್ನಿಸುವುದು ವಿರೋಧ ಪಕ್ಷಗಳ ಕರ್ತವ್ಯವೇ ಹೊರತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವುದಲ್ಲ ಎಂದು ಅವರು ಹೇಳಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆಗೆ ವಿಪಕ್ಷಗಳ ಆಕ್ಷೇಪ
2023ರ ನಾರಿ ಶಕ್ತಿ ವಂದನ್ ಅಧಿನಿಯಮ 106ನೇ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಬಳಿಕ ಮಹಿಳಾ ಮೀಸಲಾತಿ ಜಾರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದ್ದ 2026ರ ಮಸೂದೆಯು ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು 543ರಿಂದ ಗರಿಷ್ಠ 850ಕ್ಕೆ ಹೆಚ್ಚಿಸುವ ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯೊಂದಿಗೆ ತಳುಕು ಹಾಕಿಕೊಂಡಿತ್ತು.
ಮಹಿಳಾ ಮೀಸಲಾತಿ ಜಾರಿಗೆ ಈ ಬದಲಾವಣೆಗಳು ಅಗತ್ಯ ಎಂದು ಸರ್ಕಾರ ಪ್ರತಿಪಾದಿಸಿತ್ತು. ಆದರೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತಾವು ಶೇ. 33ರಷ್ಟು ಮಹಿಳಾ ಮೀಸಲಾತಿಗೆ ಬದ್ಧರಾಗಿದ್ದರೂ, ಇದನ್ನು ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಜೋಡಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆಯು ರಾಜ್ಯಗಳ ನಡುವಿನ ರಾಜಕೀಯ ಸಮತೋಲನವನ್ನು ಬದಲಾಯಿಸುತ್ತದೆ ಮತ್ತು ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯಕ್ಕೆ ತೀವ್ರ ಧಕ್ಕೆ ತರುತ್ತದೆ ಎಂದು ವಿಪಕ್ಷಗಳು ಆಕ್ಷೇಪಿಸಿದ್ದವು. ಸರ್ಕಾರವು ಈ ಆತಂಕಗಳನ್ನು ತಳ್ಳಿಹಾಕಿದ್ದರೂ, ತಿದ್ದುಪಡಿ ಮಸೂದೆ ವಿಫಲವಾದ ಕಾರಣ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ಬದಲಾವಣೆಗೆ ಸಂಬಂಧಿಸಿದ ಇನ್ನೆರಡು ಮಸೂದೆಗಳನ್ನು ಮುಂದುವರಿಸಿರಲಿಲ್ಲ.
ʼʼಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಸಿಎಂ ಅಭ್ಯರ್ಥಿಯಲ್ಲʼʼ: ಸಂಚಲನ ಮೂಡಿಸಿದ ಡಿಸಿಎಂ ಕೇಶವ ಮೌರ್ಯ ಹೇಳಿಕೆ
ಲೋಕಸಭೆಯಲ್ಲಿ ಹಿನ್ನಡೆ
2029ರ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ತ್ವರಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ಸರ್ಕಾರವು ಏಪ್ರಿಲ್ 17ರಂದು ಲೋಕಸಭೆಯಲ್ಲಿ 'ಸಂವಿಧಾನ 131ನೇ ತಿದ್ದುಪಡಿ ಮಸೂದೆ, 2026' ಮಂಡಿಸಿತ್ತು. ಈ ಮಸೂದೆಯ ಪರವಾಗಿ 298 ಮತಗಳು ಮತ್ತು ವಿರುದ್ಧವಾಗಿ 230 ಮತಗಳು ಚಲಾವಣೆಯಾಗಿದ್ದವು.
ಆದರೆ, ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಸಿಗದ ಕಾರಣ ಮಸೂದೆಗೆ ಹಿನ್ನಡೆಯಾಗಿತ್ತು. 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಸರ್ಕಾರ ಮಂಡಿಸಿದ ಸಂವಿಧಾನ ತಿದ್ದುಪಡಿ ಮಸೂದೆಯೊಂದು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾಗಿದ್ದು ಇದೇ ಮೊದಲ ಬಾರಿಯಾಗಿತ್ತು.