ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಾಗತಿಕ ಉದ್ವಿಗ್ನತೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ CCS ಸಭೆ; ಇಂಧನ ಭದ್ರತೆ ಬಗ್ಗೆ ಸಮಾಲೋಚನೆ

West Asia Crisis: ಪಶ್ಚಿಮ ಏಷ್ಯಾದ ಉದ್ವಿಗ್ನತೆ ಮತ್ತು ಪ್ರಮುಖ ಸಮುದ್ರ ಮಾರ್ಗಗಳಲ್ಲಿನ ಅಡಚಣೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ CCS ಸಭೆಯಲ್ಲಿ ಭಾರತದ ಇಂಧನ ಭದ್ರತೆ, ರಸಗೊಬ್ಬರ ಪೂರೈಕೆ, ಹಡಗು ಸಾಗಣೆ ಹಾಗೂ ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ, ಜು. 30: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಸಚಿವ ಸಂಪುಟದ ಭದ್ರತಾ ಸಮಿತಿ (CCS) ಸಭೆಯ ಅಧ್ಯಕ್ಷತೆ ವಹಿಸಿ ಜಾಗತಿಕ ಭದ್ರತಾ ಪರಿಸ್ಥಿತಿ, ಇಂಧನ ಭದ್ರತೆ ಹಾಗೂ ಸರಕು ಪೂರೈಕೆ ಸರಪಳಿಯನ್ನು ಅಡೆತಡೆ ಇಲ್ಲದೆ ಮುಂದುವರಿಸುವ ಕುರಿತು ಮಹತ್ವದ ಚರ್ಚೆ ನಡೆಸಿದರು.

ಸುಮಾರು ಎರಡು ಗಂಟೆಗಳ ಕಾಲ ಸಂಸತ್ ಭವನದಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಪೆಟ್ರೋಲಿಯಂ, ವಾಣಿಜ್ಯ, ಹಡಗು ಸಾಗಣೆ ಮತ್ತು ರಸಗೊಬ್ಬರ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದರು. ಪಶ್ಚಿಮ ಏಷ್ಯಾ ಪರಿಸ್ಥಿತಿಗೆ ಸಂಬಂಧಿಸಿದಂತೆ ನಡೆದ ವಿಶೇಷ CCS ಸಭೆಗಳಲ್ಲಿ ಇದು ನಾಲ್ಕನೆಯದಾಗಿದೆ.

ಮಹತ್ವದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ:



ಹೋರ್ಮುಜ್ ಜಲಸಂಧಿ, ಕೆಂಪು ಸಮುದ್ರ, ಗಲ್ಫ್ ಆಫ್ ಏಡನ್ ಹಾಗೂ ಕಪ್ಪು ಸಮುದ್ರ ಮಾರ್ಗಗಳಲ್ಲಿ ಉಂಟಾಗಿರುವ ಸಂಘರ್ಷಗಳಿಂದ ಭಾರತಕ್ಕೆ ಇಂಧನ, ರಸಗೊಬ್ಬರ ಹಾಗೂ ಸರಕು ಸಾಗಣೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.

ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ

ಸಚಿವ ಸಂಪುಟ ಕಾರ್ಯದರ್ಶಿಗಳು ಭಾರತದಲ್ಲಿ ಕಚ್ಚಾ ತೈಲ, ಎಲ್‌ಎನ್‌ಜಿ ಹಾಗೂ ಎಲ್‌ಪಿಜಿ ಪೂರೈಕೆ ಸ್ಥಿತಿ ಕುರಿತು ಮಾಹಿತಿ ನೀಡಿದರು. ಎಲ್‌ಪಿಜಿ ಆಮದು ಮೂಲಗಳನ್ನು ವೈವಿಧ್ಯಗೊಳಿಸಿರುವುದರಿಂದ ದೇಶದಲ್ಲಿ ಅಗತ್ಯ ಪ್ರಮಾಣದ ಇಂಧನ ಸಂಗ್ರಹವಿದೆ ಎಂದು ತಿಳಿಸಿದರು. ಸಾರ್ವಜನಿಕ ವಲಯದ ತೈಲ ಶುದ್ಧೀಕರಣ ಘಟಕಗಳು ಶೇ. 100ಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಸಭೆಗೆ ತಿಳಿಸಲಾಯಿತು.

ಬರುವ ರಬಿ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು. ಅಗತ್ಯವಿರುವಷ್ಟು ರಸಗೊಬ್ಬರ ಸಂಗ್ರಹವಿದ್ದು, ಪರ್ಯಾಯ ಆಮದು ಮೂಲಗಳನ್ನೂ ಗುರುತಿಸಲಾಗಿದೆ. ರೈತರಿಗೆ ಯಾವುದೇ ಕೊರತೆ ಉಂಟಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದರು.

ಕಾವೇರಿ ಜಲ ವಿವಾದ; ರೈತರ ಹೋರಾಟಕ್ಕೆ ಸಾಥ್ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ

ಯುದ್ಧ ಪೀಡಿತ ಸಮುದ್ರ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನಾವಿಕರ ಸುರಕ್ಷತೆಗೂ ಸಭೆಯಲ್ಲಿ ವಿಶೇಷ ಆದ್ಯತೆ ನೀಡಲಾಯಿತು. ವಿದೇಶಗಳಲ್ಲಿ ಇರುವ ಭಾರತೀಯರು ಹಾಗೂ ಭಾರತೀಯ ಸಮುದಾಯದ ಸುರಕ್ಷತೆಯನ್ನು ಖಚಿತಪಡಿಸಲು ತುರ್ತು ನೆರವು, ಮಾಹಿತಿ ಮತ್ತು ಸಲಹಾ ವ್ಯವಸ್ಥೆ ರೂಪಿಸುವಂತೆ ಪ್ರಧಾನಿ ತಿಳಿಸಿದರು.

ಅಮೆರಿಕ–ಇಸ್ರೇಲ್–ಇರಾನ್ ಸಂಘರ್ಷ, ಯೆಮೆನ್‌ನ ಹೌತಿ ಬಂಡುಕೋರರಿಂದ ಹಡಗುಗಳ ಮೇಲಿನ ದಾಳಿಯ ಬೆದರಿಕೆ ಹಾಗೂ ರಷ್ಯಾ–ಉಕ್ರೇನ್ ಯುದ್ಧದಿಂದ ಜಾಗತಿಕ ಸಾಗಾಣಿಕೆ ಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಭಾರತ ತನ್ನ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಸೌರಶಕ್ತಿ ಸೇರಿ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ವೇಗಗೊಳಿಸಬೇಕು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಜತೆಗೆ ಜಾಗತಿಕ ಬೆಳವಣಿಗೆಗಳ ಮೇಲೆ ನಿರಂತರ ನಿಗಾ ಇಟ್ಟು ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.