ನವದೆಹಲಿ: ಪಶ್ಚಿಮ ಏಷ್ಯಾ ಪ್ರದೇಶದಲ್ಲಿ (West Asia conflict) ಇಂಧನ ಮೂಲಸೌಕರ್ಯಗಳ (energy infrastructure) ಮೇಲೆ ನಡೆಸುತ್ತಿರುವ ದಾಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಖಂಡಿಸಿದರು. ಅವರು ಶನಿವಾರ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (Saudi Arabia Prince Mohammed bin Salman) ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಒಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧದ ಬಗ್ಗೆ ಚರ್ಚೆ ನಡೆಸಿದರು. ತಮ್ಮ ಹಾಗೂ ಯುವರಾಜ ನಡುವೆ ನಡೆದ ಮಾತುಕತೆಯ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡರು.
ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಸೌದಿ ಅರೇಬಿಯಾದ ಯುವರಾಜ ಗೌರವಾನ್ವಿತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಚರ್ಚಿಸಿದೆ. ಪ್ರಾದೇಶಿಕ ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ಭಾರತ ಖಂಡಿಸುತ್ತದೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
‘ʼನಿಮಗೆ ಭದ್ರತೆ ಬೇಕಾದರೆ...’ʼ; ಗಲ್ಫ್ ರಾಷ್ಟ್ರಗಳಿಗೆ ಖಡಕ್ ಸಂದೇಶ ರವಾನಿಸಿದ ಇರಾನ್
ಈ ಸಂದರ್ಭದಲ್ಲಿ ಅವರು ಕೂಡ ಹಡಗು ಮಾರ್ಗಗಳನ್ನು ಮುಕ್ತವಾಗಿಡುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಹಡಗುಗಳ ಸಂಚಾರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವ ಮತ್ತು ಹಡಗು ಮಾರ್ಗಗಳನ್ನು ಸುರಕ್ಷಿತವಾಗಿಡುವ ಅಗತ್ಯವನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದ ಮೋದಿ, ಸೌದಿ ಅರೇಬಿಯಾದಲ್ಲಿ ಭಾರತೀಯ ಸಮುದಾಯದ ಕಲ್ಯಾಣಕ್ಕಾಗಿ ಅವರ ನಿರಂತರ ಬೆಂಬಲಕ್ಕಾಗಿ ಧನ್ಯವಾದ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ದಾಳಿ ನಡೆಸಿದ ಬಳಿಕ ಆರಂಭವಾದ ಸಂಘರ್ಷದ ಬಳಿಕ ಪ್ರಧಾನಿ ಮೋದಿ ಅವರು ಹಲವಾರು ವಿಶ್ವ ನಾಯಕರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸುತ್ತಿದ್ದಾರೆ. ಇದೀಗ ಅವರು ಸೌದಿ ಅರೇಬಿಯಾದ ಯುವರಾಜನೊಂದಿಗೆ ಮಾತುಕತೆ ನಡೆಸಿದರು.
ಇತ್ತೀಚೆಗೆ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಚರ್ಚಿಸಿರುವುದಾಗಿ ಹೇಳಿದ್ದರು.
ಟ್ರಂಪ್ ಅವರೊಂದಿಗಿನ ಮಾತುಕತೆ ಬಗ್ಗೆಯು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದ ಮೋದಿ, ಆದಷ್ಟು ಶೀಘ್ರದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು, ಶಾಂತಿಯನ್ನು ಸ್ಥಾಪಿಸಬೇಕು, ಹೊರ್ಮುಜ್ ಜಲಸಂಧಿಯನ್ನು ಮುಕ್ತ, ಸುರಕ್ಷಿತವಾಗಿರಿಸುವುದನ್ನು ಖಚಿತ ಪಡಿಸುವ ಅಗತ್ಯದ ಬಗ್ಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದರು.