ರಾಯ್ಪುರ್: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರು ಈ ಬಾರಿಯ ದೀಪಾವಳಿಯನ್ನು ಛತ್ತೀಸ್‌ಗಢದ ಬಸ್ತಾರ್ ವಲಯದಲ್ಲಿ ನಕ್ಸಲ್ (Diwali With Security Forces) ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಯೊಂದಿಗೆ ಆಚರಿಸಲು ತೆರಳುತ್ತಿದ್ದಾರೆ. ಒಂದು ಕಾಲದಲ್ಲಿ ನಕ್ಸಲೈಟ್ ಪೀಡಿತ ಪ್ರದೇಶವಾಗಿದ್ದ ಬಸ್ತಾರ್, ಇಂದು ಶಾಂತಿ ಮತ್ತು ಅಭಿವೃದ್ಧಿಯತ್ತ ಮುಖ ಮಾಡಿರುವುದನ್ನು ಈ ಭೇಟಿ ಬಿಂಬಿಸುತ್ತದೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, "ನಮ್ಮ ವೀರ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಲು ಬಸ್ತಾರ್‌ಗೆ ತೆರಳುತ್ತಿದ್ದೇನೆ. ಇದು ಒಂದು ಕಾಲದಲ್ಲಿ ನಕ್ಸಲಿಸಂನ ಪ್ರಭಾವಕ್ಕೆ ಒಳಗಾಗಿದ್ದ ಪ್ರದೇಶವಾಗಿದ್ದು, ಈಗ ಇಲ್ಲಿ ಅಭಿವೃದ್ಧಿ ನಡೆಯುತ್ತಿದೆ. ದೇಶಕ್ಕಾಗಿ ಪ್ರಾಣತ್ಯಾಗ, ನಿಸ್ವಾರ್ಥ ಸೇವೆ ಮತ್ತು ಅಚಲ ಭಕ್ತಿಯನ್ನು ತೋರುತ್ತಿರುವ ನಮ್ಮ ವೀರ ಭದ್ರತಾ ಸಿಬ್ಬಂದಿಗೆ ಸಲಾಂ ಮಾಡಲು ನಾನು ಅಲ್ಲಿಗೆ ಹೋಗುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಕಳೆದ 12 ತಿಂಗಳುಗಳಿಂದ ಯಾವುದೇ ಕಾರ್ಯಾಚರಣೆಯ ಸಾವು-ನೋವುಗಳನ್ನು ಹೊಂದಿರದ ಕೇಂದ್ರ ಮೀಸಲು ಪೊಲೀಸ್ ಪಡೆ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಇದಕ್ಕೆ ದೊಡ್ಡ ಸಂದೇಶ ಸಾರುವ ಶೂನ್ಯ ಎಂದು ಅವರು ಬಣ್ಣಿಸಿದ್ದಾರೆ. ಅತ್ಯಾಧುನಿಕ ಉಪಕರಣಗಳು, ಉತ್ತಮ ತರಬೇತಿ, ಕಾರ್ಯತಂತ್ರದ ಯೋಜನೆ ಮತ್ತು ಗಾಯಗೊಂಡ ಸಿಬ್ಬಂದಿಯನ್ನು ಶೀಘ್ರವಾಗಿ ಆಸ್ಪತ್ರೆಗೆ ರವಾನಿಸುವ ವೈದ್ಯಕೀಯ ವ್ಯವಸ್ಥೆಗಳು ಈ ಸಾಧನೆಗೆ ಕಾರಣ ಎಂದು ಸಿಆರ್‌ಪಿಎಫ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ತಿಳಿಸಿದ್ದಾರೆ.
Deepavali 2026: ಬೆಳಕಿನ ಹಬ್ಬ ದೀಪಾವಳಿ ತರದಿರಲಿ ನಿಮ್ಮ ಬಾಳಿಗೆ ಅಂಧಕಾರ!
ಒಂದು ಕಾಲದಲ್ಲಿ ನಕ್ಸಲಿಸಂನ ಭದ್ರಕೋಟೆಯಾಗಿದ್ದ ಬಸ್ತಾರ್ ವಲಯವು ಇಂದು ಶಾಂತಿ ಮತ್ತು ಅಭಿವೃದ್ಧಿಯತ್ತ ವೇಗವಾಗಿ ಹೆಜ್ಜೆ ಇಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಯತ್ನಗಳು, ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆ ಹಾಗೂ ಅಭಿವೃದ್ಧಿ ಯೋಜನೆಗಳು ಈ ಬದಲಾವಣೆಗೆ ಮುಖ್ಯ ಕಾರಣವಾಗಿವೆ. ಸರ್ಕಾರದ ನಕ್ಸಲ್ ವಿರೋಧಿ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಶರಣಾದವರಿಗೆ ಮುಖ್ಯವಾಹಿನಿಗೆ ಬರಲು ನೀಡುತ್ತಿರುವ ಪುನರ್ವಸತಿ ಯೋಜನೆಗಳಿಂದಾಗಿ ಬಸ್ತಾರ್‌ನಲ್ಲಿ ನಕ್ಸಲಿಸಂ ಹಿಮ್ಮೆಟ್ಟುತ್ತಿದೆ. ಪರಿಣಾಮವಾಗಿ ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ ಸಂಪರ್ಕ, ವಿದ್ಯುತ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ.