ದೆಹಲಿ: ಭಾರತ-ಅಮೆರಿಕ ನಡುವಿನ ಸುಂಕ ಸಮರ ತಾರಕಕ್ಕೇರಿದೆ (Trump Tariff Row). ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಸರಕುಗಳ ಮೇಲಿನ ಟಾರಿಫ್ ಶೇ. 50ಕ್ಕೆ ಏರಿಸಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಕಿಡಿಕಾರಿದ್ದಾರೆ. ಈ ಮಧ್ಯೆ ಭಾರತವು ರಷ್ಯಾದೊಂದಿಗೆ ತನ್ನ ಸಂಬಂಧ ವೃದ್ಧಿಸುವತ್ತ ಗಮನಾರ್ಹ ಹೆಜ್ಜೆ ಇಟ್ಟಿದೆ. ಮೋದಿ ಅವರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಇಬ್ಬರು ನಾಯಕರು ಉಕ್ರೇನ್‌ನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಮತ್ತು ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಪ್ರಗತಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಘೋಷಣೆಗಳಿಂದ ಉಂಟಾದ ಜಾಗತಿಕ ವ್ಯಾಪಾರ ಅನಿಶ್ಚಿತತೆಯ ನಡುವೆಯೇ ಇಬ್ಬರು ನಾಯಕರು ಸಂಭಾಷಣೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.
Had a very good and detailed conversation with my friend President Putin. I thanked him for sharing the latest developments on Ukraine. We also reviewed the progress in our bilateral agenda, and reaffirmed our commitment to further deepen the India-Russia Special and Privileged…
— Narendra Modi (@narendramodi) August 8, 2025
ಈ ಸುದ್ದಿಯನ್ನೂ ಓದಿ: Trump's Tariff Threat: ಟ್ರಂಪ್ ಸುಂಕ ಬೆದರಿಕೆ: ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ
ಮೋದಿ ಹೇಳಿದ್ದೇನು?
ಪುಟಿನ್ ಜತೆ ನಡೆಸಿದ ಸಂಭಾಷಣೆ ಬಗ್ಗೆ ಮೋದಿ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ʼʼಸ್ನೇಹಿತ ಪುಟಿನ್ ಜತೆ ಉತ್ತಮ ಮತ್ತು ಸುದೀರ್ಘ ಮಾತುಕತೆ ನಡೆಸಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ಜತೆಗೆ ನಾವು ದ್ವಿಪಕ್ಷೀಯ ಸಂಬಂಧಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ನಮ್ಮ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದ್ದೇವೆ ಮತ್ತು ಭಾರತ-ರಷ್ಯಾ ನಡುವಿನ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ. ಈ ವರ್ಷದ ಕೊನೆಯಲ್ಲಿ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದು, ಇದಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಮೋದಿ, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಿಸುವ ಭಾರತದ ನಿಲುವನ್ನು ಪುನರುಚ್ಚರಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗುರುವಾರ ಕ್ರೆಮ್ಲಿನ್‌ನಲ್ಲಿ ಪುಟಿನ್ ಅವರನ್ನು ಭೇಟಿ ಮಾಡಿದ 24 ಗಂಟೆಗಳ ಒಳಗೆ ಈ ಮಾತುಕತೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.
ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ ಎನ್ನುವ ನೆಪ ಮಾಡಿಕೊಂಡು ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಸುಂಕ ಸಮರ ಸಾರಿದ್ದಾರೆ. ಇದನ್ನು ಭಾರತ "ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ ಕ್ರಮ" ಎಂದು ಕರೆದಿದೆ. ಕೊನೆಯ ಬಾರಿಗೆ ಪುಟಿನ್ 2021ರ ಡಿಸೆಂಬರ್‌ನಲ್ಲಿ ಪುಟಿನ್ ಭಾತಕ್ಕೆ ಭೇಟಿ ನೀಡಿದ್ದರು. ಮೋದಿ ಕಳೆದ ವರ್ಷ ರಷ್ಯಾಕ್ಕೆ ಭೇಟಿ ನೀಡಿದ್ದರು.
ವರ್ಷಾಂತ್ಯದಲ್ಲಿ ಪುಟಿನ್ ಭಾರತಕ್ಕೆ ಭೇಟಿ?
ʼʼಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರ ಭೇಟಿಗೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೂ ಪುಟಿನ್ ಈ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆʼʼ ಎಂದು ಆಗಸ್ಟ್ 7ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದರು. ʼʼರಷ್ಯಾ ಮತ್ತು ಭಾರತದ ನಡುವೆ ದೀರ್ಘ ಸಂಬಂಧವಿದೆ. ನಾವು ಈ ಸಂಬಂಧವನ್ನು ಗೌರವಿಸುತ್ತೇವೆ. ಉನ್ನತ ಮಟ್ಟದ ನಾಯಕರ ಈ ಭೇಟಿಯು ಈ ಹಿಂದೆ ಗಣನೀಯ ಕೊಡುಗೆಗಳನ್ನು ನೀಡಿವೆ. ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಬಗ್ಗೆ ತಿಳಿದು ನಾವು ತುಂಬಾ ಉತ್ಸುಕರಾಗಿದ್ದೇವೆʼʼ ಎಂದು ಅಜಿತ್ ದೋವಲ್ ಹೇಳಿದ್ದರು.