ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ಮೋದಿ ಹೋಗ್ತಾರಾ?

ಶೇಖ್ ಹಸೀನಾ ಅವರ ಪದಚ್ಯುತಿಯ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಮೊದಲ ರಾಷ್ಟ್ರೀಯ ಚುನಾವಣೆಯಲ್ಲಿ ಬಿಎನ್‌ಪಿ ಭರ್ಜರಿ ಗೆಲುವು ದಾಖಲಿಸಿದೆ. ತಾರಿಕ್ ರೆಹಮಾನ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಇವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಹ್ವಾನ ನೀಡಲಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (Bangladesh Nationalist Party) ನಾಯಕಿ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ (Tarique Rahman) ಅವರು ಫೆಬ್ರವರಿ 17 ರಂದು ದೇಶದ ಪ್ರಧಾನಿಯಾಗಿ ಪ್ರಮಾಣವಚನ (swearing-in ceremony) ಸ್ವೀಕರಿಸಲಿದ್ದು, ಈ ಸಮಾರಂಭಕ್ಕೆ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ಆಹ್ವಾನಿಸಲಾಗಿದೆ. 2024ರಲ್ಲಿ ಶೇಖ್ ಹಸೀನಾ ಅವರ ಪದಚ್ಯುತಿಗೊಂಡ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಮೊದಲ ರಾಷ್ಟ್ರೀಯ ಚುನಾವಣೆಯಲ್ಲಿ ಬಿಎನ್‌ಪಿ ಭರ್ಜರಿ ಗೆಲುವು ದಾಖಲಿಸಿದ್ದು, ತಾರಿಕ್ ರೆಹಮಾನ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ತಾರಿಕ್ ರೆಹಮಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಸಿಕ್ಕಿರುವುದನ್ನು ಈವರೆಗೆ ಭಾರತ ಅಧಿಕೃತವಾಗಿ ದೃಢಪಡಿಸಿಲ್ಲ. ಹೀಗಾಗಿ ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ದೃಢಪಟ್ಟಿಲ್ಲ. ಭಾರತ ಮತ್ತು ಬಾಂಗ್ಲಾದೇಶವು ದ್ವಿಪಕ್ಷೀಯ ಸಂಬಂಧಗಳನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿವೆ. ಢಾಕಾದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಭಾಗವಹಿಸುವ ನಿರೀಕ್ಷೆಯಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಐತಿಹಾಸಿಕ ತೀರ್ಪು; ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಾಡಿ ಗೆದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ!

ಫೆಬ್ರವರಿ 17 ರಂದು ಢಾಕಾದಲ್ಲಿ ನಡೆಯಲಿರುವ ತಾರಿಕ್ ರೆಹಮಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿರುವ ಗಣ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಸೇರಿದೆ ಎಂದು ತಾತ್ಕಾಲಿಕ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ತಿಳಿಸಿದ್ದಾರೆ. ಒಟ್ಟು 13 ದೇಶಗಳಿಗೆ ಅಹ್ವಾನ ನೀಡಲಾಗಿದ್ದು, ಇದರಲ್ಲಿ ಭಾರತ, ಚೀನಾ, ಸೌದಿ ಅರೇಬಿಯಾ, ಪಾಕಿಸ್ತಾನ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಮಲೇಷ್ಯಾ, ಬ್ರೂನಿ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್ ಮತ್ತು ಭೂತಾನ್ ಸೇರಿವೆ ಎನ್ನಲಾಗಿದೆ.



ಕಳೆದ 17 ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದ ತಾರಿಕ್ ರೆಹಮಾನ್ ಅವರು ಈಗ ಬಾಂಗ್ಲಾದೇಶದ ಹೊಸ ನಾಯಕರಾಗಿ ಹೊರಹೊಮ್ಮಿದ್ದಾರೆ. ರೆಹಮಾನ್ ಅವರ ತಂದೆ ಜಿಯಾವುರ್ ರೆಹಮಾನ್ ಅವರು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಸ್ಥಾಪಿಸಿದ್ದರು. ಸುಮಾರು ಎರಡು ದಶಕಗಳ ಬಳಿಕ ಈ ಪಕ್ಷ ಮತ್ತೆ ಇದೀಗ ಅಧಿಕಾರಕ್ಕೆ ಬಂದಿದೆ.

ರಾಷ್ಟ್ರೀಯ ಚುನಾವಣೆಯಲ್ಲಿ ಬಿಎನ್‌ಪಿ 297 ಸ್ಥಾನಗಳಲ್ಲಿ 209 ಸ್ಥಾನಗಳನ್ನು, ಪಾಕಿಸ್ತಾನ ಬೆಂಬಲಿತ ಬಲಪಂಥೀಯ ಜಮಾತ್-ಇ-ಇಸ್ಲಾಮಿ 68 ಸ್ಥಾನಗಳನ್ನು ಗೆದ್ದಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ದೇಶಾದ್ಯಂತ ಶೇಕಡಾ 59.44 ರಷ್ಟು ಮತದಾನವಾಗಿದೆ.

ಬಾಂಗ್ಲಾದೇಶದ ಚುನಾವಣೆ ಫಲಿತಾಂಶ ಶುಕ್ರವಾರ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಾರಿಕ್ ರೆಹಮಾನ್ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿ ಶುಭ ಹಾರೈಸಿದರು. ಎರಡೂ ದೇಶಗಳ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ತೋರುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಬರೆದಿರುವ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸುವ ತಾರಿಕ್ ರೆಹಮಾನ್ ಅವರ ಪ್ರಯತ್ನಕ್ಕೆ ನಾನು ನನ್ನ ಶುಭಾಶಯ ಮತ್ತು ಬೆಂಬಲವನ್ನು ತಿಳಿಸಿದ್ದೇನೆ. ನೆರೆಹೊರೆಯ ಎರಡು ರಾಷ್ಟ್ರಗಳಾಗಿ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ತೋರುವುದಾಗಿ ನಾನು ಪುನರುಚ್ಚರಿಸಿದ್ದೇನೆ. ಸಾಮಾನ್ಯ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಚೀನಾ ಗಡಿ ಬಳಿಯೇ ಭಾರತದ ಶಕ್ತಿ ಪ್ರದರ್ಶನ; ತುರ್ತು ಲ್ಯಾಂಡಿಂಗ್‌ ಹೆದ್ದಾರಿಯಲ್ಲಿ ಮೋದಿ ಐತಿಹಾಸಿಕ ಭೂ ಸ್ಪರ್ಶ

ತಾರಿಕ್ ರೆಹಮಾನ್ ಅವರು ಗೆಲುವಿನ ಬಳಿಕ ಮೊದಲ ಬಾರಿಗೆ ಭಾರತದ ಕುರಿತು ಮಾತನಾಡಿ, ನವದೆಹಲಿಯ ಕಡೆಗೆ ಬಾಂಗ್ಲಾದೇಶದ ಹಿತಾಸಕ್ತಿಗಳು ತಮ್ಮ ವಿದೇಶಾಂಗ ನೀತಿಯ ಮೂಲಾಧಾರವಾಗಿದೆ. ಭಾರತ, ಚೀನಾ ಮತ್ತು ಪಾಕಿಸ್ತಾನದಂತಹ ಪ್ರಾದೇಶಿಕ ಶಕ್ತಿಗಳೊಂದಿಗೆ ಸಮತೋಲಿತ ಸಂಬಂಧಗಳನ್ನು ಕಾಪಾಡಿಕೊಳ್ಳಲು ಬಯಸುವುದಾಗಿ ಹೇಳಿರುವ ಅವರು, ಯಾವುದೇ ದೇಶವನ್ನು ಯಜಮಾನ ಎಂದು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಬಿಎನ್‌ಪಿ, ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಬದ್ಧತೆಯನ್ನು ತೋರುವುದಾಗಿ ಹೇಳಿದ್ದು, ಇದಕ್ಕಾಗಿ ಭಾರತದೊಂದಿಗೆ ಉತ್ತಮ ಸಂಬಂಧ ಕಾಪಾಡಲು ಎದುರು ನೋಡುವುದಾಗಿ ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author