ನವದೆಹಲಿ, ಸೆ. 17: ಗುಜರಾತ್‌ನ ವಡ್ನಗರದಲ್ಲಿ 1950ರ ಸೆಪ್ಟೆಂಬರ್ 17ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಗುವೊಂದು ಮುಂದೆ ದೇಶದ ಪ್ರಧಾನ ಮಂತ್ರಿಯಾಗುವ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಆದರೆ ಜೀವನದಲ್ಲಿ ಎದುರಾದ ಸವಾಲುಗಳನ್ನು ಸ್ವೀಕರಿಸುತ್ತಾ ಸಾಗಿ 1985ರಲ್ಲಿ ರಾಜಕೀಯಕ್ಕೆ ಪ್ರವೇಶ ಪಡೆದು, 2001ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಮತ್ತು 2014ರಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ನರೇಂದ್ರ ಮೋದಿ. ಈ ದಿನ 76ನೇ ವಸಂತಕ್ಕೆ ಕಾಲಿಡಲಿರುವ ಪ್ರಧಾನಿ ಮೋದಿ, ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಜನಿಸಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಕ್ರಿಯಾಶೀಲ, ಸಮರ್ಪಣಾಭಾವ, ದೃಢ ನಿಶ್ಚಯದ ವ್ಯಕ್ತಿತ್ವವನ್ನು ಹೊಂದಿದ ನರೇಂದ್ರ ಮೋದಿ ನೂರಾರು ಕೋಟಿ ಭಾರತೀಯರ ಭರವಸೆಯಾಗಿದ್ದಾರೆ. 2014ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಅವರು ಎಲ್ಲರನ್ನೂ ಒಳಗೊಂಡಂತೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಹೊಸ ಆಲೋಚನೆ, ಹಲವು ಉಪಕ್ರಮಗಳ ಮೂಲಕ ದೇಶವನ್ನು ಪ್ರಗತಿ ಪಥದಲ್ಲಿ ವೇಗವಾಗಿ ಮುನ್ನಡೆಸಲು ಪಣ ತೊಟ್ಟಿದ್ದಾರೆ.
ಶೌರ್ಯ ಪ್ರಶಸ್ತಿ ಪುರಸ್ಕೃತ ಯೋಧರಿಗೆ ಜೀವಮಾನದ ಉಚಿತ ರೈಲು ಪ್ರಯಾಣ
ದಾಮೋದರದಾಸ್ ಮೋದಿ ಮತ್ತು ಹೀರಾಬಾ ಮೋದಿ ದಂಪತಿಯ ಮೂರನೇ ಮಗುವಾಗಿ ಜನಿಸಿದ ಪ್ರಧಾನಿ ನರೇಂದ್ರ ಮೋದಿ ಬಾಲ್ಯವನ್ನು ವಡ್ನಗರದಲ್ಲಿ ಕಳೆದರು. ಶಿಕ್ಷಣದೊಂದಿಗೆ ಕುಟುಂಬದ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ರಾಜಕೀಯಕ್ಕೆ ಬರುವ ಮೊದಲು ಎಂಟನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ತಮ್ಮ ವೃತ್ತಿ ಬದುಕಿನ ಪ್ರಯಾಣ ಆರಂಭಿಸಿದರು.
ರಾಜಕೀಯಕ್ಕೆ ಎಂಟ್ರಿ
ಅಹಮದಾಬಾದ್‌ನಲ್ಲಿ ಆರ್‌ಎಸ್‌ಎಸ್ ಸೇರಿದ ಅವರು 1972ರಲ್ಲಿ ಅದರ ಪ್ರಚಾರಕರಾಗಿ, 1980ರ ದಶಕದಲ್ಲಿ ಸಾಂಸ್ಥಿಕ ಜವಾಬ್ದಾರಿಗಳನ್ನು ವಹಿಸಿಕೊಂಡು 1987ರಲ್ಲಿ ಭಾರತೀಯ ಜನತಾ ಪಕ್ಷದ ಗುಜರಾತ್ ಘಟಕಕ್ಕೆ ಸೇರಿಕೊಂಡರು.
2001ರ ಅಕ್ಟೋಬರ್‌ನಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು 2014ರ ಜೂನ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸುವವರೆಗೂ ಆ ಹುದ್ದೆಯಲ್ಲಿದ್ದರು. ಗುಜರಾತ್‌ನ ಮುಖ್ಯಮಂತ್ರಿಯಾಗಿ ಅವರ ನೀತಿಗಳು ಆರ್ಥಿಕ ಬೆಳವಣಿಗೆ, ವ್ಯವಹಾರ ಮತ್ತು ಹೂಡಿಕೆಯನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಅಪಾರ ಮನ್ನಣೆ ಪಡೆದಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ದೇಶದ ಪ್ರಧಾನಿಯಾದರು. ಇದರ ಬಳಿಕ ಮತ್ತೊಮ್ಮೆ 2019ರಿಂದ 2024ರವರೆಗೆ ಎರಡನೇ ಅವಧಿಗೆ ಅಧಿಕಾರಕ್ಕೇರಿದರು. 2024ರಲ್ಲಿ ಮಗದೊಮ್ಮೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
ಸುದೀರ್ಘ ರಾಜಕೀಯ ಜೀವನ
ಪಕ್ಷದ ತಳಮಟ್ಟದಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಅತ್ಯುನ್ನತ ಚುನಾಯಿತ ಕಾರ್ಯನಿರ್ವಾಹಕ ಹುದ್ದೆಯನ್ನು ಅಲಂಕರಿಸುವವರೆಗಿನ ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಈ ಬಾರಿಯ ಅವರ ಜನ್ಮ ದಿನವು ಒಂದು ಮಹತ್ವದ ಮೈಲಿಗಲ್ಲಾಗಿ ಗುರುತಿಸಿಕೊಂಡಿದೆ.
ದೇಶದ ಪ್ರಧಾನಿಯಾಗಿ 2014ರಿಂದ 2019ರವರೆಗಿನ ಅವರ ಅಧಿಕಾರಾವಧಿಯಲ್ಲಿ ನೇರ ವಿದೇಶಿ ಹೂಡಿಕೆ ಹೆಚ್ಚಿ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಖರ್ಚು ಕಡಿಮೆ ಮಾಡಿತು. ಉನ್ನತ ಮಟ್ಟದ ನೈರ್ಮಲ್ಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸಿ ಮೆಚ್ಚುಗೆ ಪಡೆದರೂ ನೋಟ್ ಬ್ಯಾನ್ ಮೂಲಕ ವಿವಾದಕ್ಕೆ ಕಾರಣವಾಯಿತು. ಪಾಕಿಸ್ತಾನದ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ನಡೆಸಿ ವಿಶ್ವದ ಗಮನ ಸೆಳೆಯಿತು.
ಕೋವಿಡ್ ವಿರುದ್ಧ ಸಮರ್ಥ ಹೋರಾಟ
2019ರಿಂದ 2024ರ ಅಧಿಕಾರಾವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು. ಇದರೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪರಿಚಯಿಸಲಾಯಿತು. ಪೌರತ್ವ ತಿದ್ದುಪಡಿ ಕಾಯ್ದೆ 2020ರ ದೆಹಲಿ ಗಲಭೆಗೆ ಕಾರಣವಾಯಿತು. ಇದರೊಂದಿಗೆ ಮೂರು ವಿವಾದಾತ್ಮಕ ಕೃಷಿ ಕಾನೂನುಗಳು ದೇಶಾದ್ಯಂತ ರೈತರ ಪ್ರತಿಭಟನೆಗಳಿಗೆ ಕಾರಣವಾಯಿತು. ಬಳಿಕ ಇವುಗಳನ್ನು ರದ್ದುಗೊಳಿಸಲಾಯಿತು. ಇದರೊಂದಿಗೆ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಿ ವಿಶ್ವದ ಮನ್ನಣೆಗೆ ಪ್ರಧಾನಿ ಮೋದಿ ಪಾತ್ರರಾದರು.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿ ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯನ್ನು ವಿಶ್ವಕ್ಕೆ ಸಾರಿದರು.
ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾಲಂಬನೆ ಸಾಧಿಸಬೇಕು ಎಂದು ಹೋರಾಡುತ್ತಿರುವ ಪ್ರಧಾನಿ ನರೇಂದ್ರ ಅವರ ಆಡಳಿತವು ಇದಕ್ಕಾಗಿ ಜಾಗತಿಕ ಮಟ್ಟದಲ್ಲೂ ಸಹಕಾರ ಪಡೆಯಲು ಹಲವು ರಾಷ್ಟ್ರಗಳೊಂದಿಗೆ ವಿವಿಧ ರೀತಿಯ ಒಪ್ಪಂದವನ್ನು ಮಾಡಿಕೊಂಡಿದೆ.
ಉಜ್ಬೇಕಿಸ್ತಾನದಿಂದ 'ಒಲಿಯು ದಾರಾಜಲಿ ದೋಸ್ತ್ಲಿಕ್', ಟ್ರಿನಿಡಾಡ್ ಮತ್ತು ಟೊಬಾಗೋದಿಂದ 'ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಆಂಡ್ ಟೊಬಾಗೋ' - ಅತ್ಯುನ್ನತ ನಾಗರಿಕ ಪ್ರಶಸ್ತಿ, ಮಾರಿಷಸ್‌ನಿಂದ 'ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆ್ಯಂಡ್ ಕೀ ಆಫ್ ದಿ ಇಂಡಿಯನ್ ಓಷನ್', ವಿಶ್ವಸಂಸ್ಥೆಯಿಂದ 'ಚಾಂಪಿಯನ್ಸ್ ಆಫ್ ದಿ ಅರ್ಥ್' ಪ್ರಶಸ್ತಿ, ರಷ್ಯಾದಿಂದ 'ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ' ಪ್ರಶಸ್ತಿ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹಲವು ಪ್ರಮುಖ ಹಾಗೂ ಅತ್ಯುನ್ನತ ನಾಗರಿಕ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ.
ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಡಿಕ್ಕಿ: ರಾಯಭಾರಿಗೆ ಭಾರತದಿಂದ ಸಮನ್ಸ್
ಸೇವಾ ಪಖ್ವಾಡ ಆಚರಣೆಗೆ ಸಿದ್ಧತೆ
ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಭವ್ಯವಾಗಿ ಆಚರಿಸಲು ದೇಶಾದ್ಯಂತ ಸಾರ್ವಜನಿಕ ಸೇವೆ ಮತ್ತು ಸ್ವಚ್ಛತಾ ಅಭಿಯಾನಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ ಸೆಪ್ಟೆಂಬರ್ 17ರಿಂದ 'ಸೇವಾ ಪಖ್ವಾಡ' ಎಂಬ ಎರಡು ವಾರಗಳ ಸೇವಾ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಇದರಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ 'ಸ್ವಚ್ಛತಾ ಹೀ ಸೇವಾ 2026' ಎಂಬ ದೇಶವ್ಯಾಪಿ ಸ್ವಚ್ಛತಾ ಅಭಿಯಾನವು ಸೇರಿದೆ. ಇದರೊಂದಿಗೆ ಸೆಪ್ಟೆಂಬರ್ 17ರಂದು ಎಲ್ಲರೂ ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕ ದೀಪವನ್ನು ಬೆಳಗಿಸುವಂತೆ ಅವರಿಗೆ ಆಶೀರ್ವಾದ ನೀಡುವಂತೆ ಕೋರಿದೆ.