ಲಖನೌ, ಸೆ. 24: ಒಂಭತ್ತು ಜನರ ಸಾವಿಗೆ ಕಾರಣವಾಗ ಗ್ರೇಟರ್ ನೋಯ್ಡಾ ಬಸ್ ಬೆಂಕಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ಪ್ರಧಾನಮಂತ್ರಿ ಕಚೇರಿ ಪ್ರಕಟಿಸಿದೆ. “ಉತ್ತರ ಪ್ರದೇಶದ (Uttar Pradesh) ಗ್ರೇಟರ್ ನೋಯ್ಡಾದಲ್ಲಿ ಬಸ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಜೀವಹಾನಿಯಾದ ಸುದ್ದಿ ಕೇಳಿ ದುಃಖವಾಯಿತು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂಬುದಾಗಿ ಪ್ರಧಾನಿ ಕಚೇರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಘಟನೆಗೆ ಸಂತಾಪ ಸೂಚಿಸಿ, ಸಂತ್ರಸ್ತರ ಕುಟುಂಬಗಳೊಂದಿಗೆ ಮಾತನಾಡಿದರು. ತಕ್ಷಣದ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಆದಿತ್ಯನಾಥ್ ಘೋಷಿಸಿದ್ದಾರೆ.
ನೋಯ್ಡಾದಲ್ಲಿ ಹೊತ್ತಿ ಉರಿದ ಬಸ್:
ಸುಡುತ್ತಿರುವ ವಾಸನೆ ಬಂದರೂ ಬಸ್ ನಿಲ್ಲಿಸದ ಚಾಲಕ
ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೇಸ್‌ವೇಯಲ್ಲಿ ಅಪಘಾತಕ್ಕೀಡಾಗಿ ಒಂಬತ್ತು ಪ್ರಯಾಣಿಕರ ಸಾವಿಗೆ ಕಾರಣವಾದ ಬಸ್‌ನ ಚಾಲಕ, ಸುಡುವ ವಾಸನೆ ಬಂದ ನಂತರವೂ ಬಸ್ ನಿಲ್ಲಿಸಲು ನಿರಾಕರಿಸಿದ್ದಾನೆ ಎನ್ನಲಾಗಿದೆ. ಸಾಯಲು ಬಯಸಿದರೆ, ಸಾಯಿರಿ ಎಂದು ಪ್ರಯಾಣಿಕರಿಗೆ ಹೇಳಿದ್ದಾನೆ ಎನ್ನಲಾಗಿದೆ.
ರೈಲು ಹಳಿ ದಾಟುವ ವೇಳೆ ದುರಂತ: ನಾಲ್ವರು ವಿದ್ಯಾರ್ಥಿಗಳು ಮೃತ್ಯು
ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಸೆ. 23) ತಡರಾತ್ರಿ ದೆಹಲಿಯಿಂದ ಉತ್ತರ ಪ್ರದೇಶದ ಮಹೋಬಾಗೆ ಪ್ರಯಾಣಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂಬತ್ತು ಪ್ರಯಾಣಿಕರು ಮೃತಪಟ್ಟರು. ಬಿಹಾರ ನೋಂದಣಿ ಹೊಂದಿರುವ ಬಸ್‌ನಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತು.
ಪ್ರಯಾಣಿಕರು ಪದೇ ಪದೆ ಎಚ್ಚರಿಕೆ ನೀಡಿದ್ದರೂ ಬಸ್ ಚಾಲಕ ಮತ್ತು ನಿರ್ವಾಹಕ ಸುಡುವ ವಾಸನೆಯನ್ನು ನಿರ್ಲಕ್ಷಿಸಿ ವಾಹನ ನಿಲ್ಲಿಸಲು ನಿರಾಕರಿಸಿದ್ದಾರೆ ಎಂದು ಪ್ರಯಾಣಿಕರೊಬ್ಬರ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಯಾಣಿಕರು ಚಾಲಕನಿಗೆ ಎಚ್ಚರಿಕೆ ನೀಡಿ ಬಸ್ ನಿಲ್ಲಿಸುವಂತೆ ಕೇಳಿಕೊಂಡರು. ಆದರೆ ಚಾಲಕ ಮತ್ತು ನಿರ್ವಾಹಕರು ನಿರಾಕರಿಸಿದರು ಎನ್ನಲಾಗಿದೆ. “ನೀವು ಸಾಯಲು ಬಯಸಿದರೆ ಸಾಯಿರಿ; ನಾವು ಬಸ್ ನಿಲ್ಲಿಸುವುದಿಲ್ಲ” ಎಂದು ಅವರು ಹೇಳಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಬಸ್‌ನ ಎಸಿಯಲ್ಲಿ ಸ್ಫೋಟ ಸಂಭವಿಸಿದ ನಂತರ ಬೆಂಕಿಯುಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ವಾಹನವನ್ನು ನಿಲ್ಲಿಸುವ ಹೊತ್ತಿಗೆ, ಬೆಂಕಿ ಹೊತ್ತಿಕೊಂಡು ವಾಹನವನ್ನು ಆವರಿಸಿತು. ಬಸ್‌ನಲ್ಲಿ 35 ಪ್ರಯಾಣಿಕರಿದ್ದರು. ಓರ್ವ ಮಹಿಳೆ ಸೇರಿ ಒಂಬತ್ತು ಜನರು ಪಾರಾಗಲು ಸಾಧ್ಯವಾಗಲಿಲ್ಲ. ಘಟನಾ ಸ್ಥಳಕ್ಕೆ ತಲುಪುವ ವೇಳೆಗೆ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.