ನವದೆಹಲಿ: ಪ್ರತಿಭಟನಾ (CJP March) ನಿರಂತರ ವಿದ್ಯಾರ್ಥಿಗಳ ಮೇಲೆ ಸೋಮವಾರ ಪೊಲೀಸರು ನಡೆಸಿರುವ ದೌರ್ಜನ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ಏಕೆ ಮೌನವಾಗಿದ್ದಾರೆ. ಅವರು ಇದಕ್ಕೆ ಕ್ಷಮೆ ಕೇಳಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Leader of Opposition Rahul Gandhi) ಒತ್ತಾಯಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಕಾಕ್ರೋಚ್ ಜನತಾ ಪಕ್ಷದ (Cockroach Janata Party) ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಂಸತ್ತಿಗೆ ಮುತ್ತಿಗೆ ಹಾಕಲು ಬಂದಿದ್ದು ಈ ವೇಳೆ ಪೊಲೀಸರು ಅಶ್ರುವಾಯು ಸುರಿಸಿ, ಲಾಠಿ ಚಾರ್ಜ್ ಮಾಡಿದ್ದರು. ಈ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ರಾಹುಲ್ ಗಾಂಧಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಸಿಜೆಪಿ ಮೆರವಣಿಗೆ ವೇಳೆ ನಡೆದ ಪೋಲೀಸರ ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿಗಳನ್ನುದೆಹಲಿಯ ಆರ್ ಎಂಎಲ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಅವರು, ದೆಹಲಿಯಲ್ಲಿ ಸೋಮವಾರ ನಡೆದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
“ಇನ್ಮುಂದೆ ಸಂಸತ್‌ಗೆ ಮೆರವಣಿಗೆ ಇಲ್ಲ”: ಹಿಂಸಾಚಾರದ ನಂತರ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಯಿಂದ ಮಹತ್ವದ ನಿರ್ಧಾರ
ಇದಕ್ಕೂ ಮೊದಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಮೇಲೆ ನಡೆಸಿರುವ ಪೊಲೀಸ್ ಕ್ರಮದ ವಿರುದ್ಧ ಚರ್ಚೆ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದಿರುವ ಅವರು, ವಿಪಕ್ಷ ಸಂಸದರು ಮಂಗಳವಾರ ಬೆಳಗ್ಗೆ ಲೋಕಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದೇವೆ. ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ ಮತ್ತು ಪರೀಕ್ಷಾ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ಸಂಪೂರ್ಣ ಹೊಣೆಯಾಗಿದೆ. ಈ ಬಗ್ಗೆ ಸಂಸತ್ತಿನಲ್ಲಿ ವಿವರವಾದ ಚರ್ಚೆ ನಡೆಯಬೇಕು. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನ್ಯಾಯಯುತ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಅವರನ್ನು ಥಳಿಸಲಾಗಿದೆ. ಭಾರತದ ಯುವಕರ ಭವಿಷ್ಯದ ಬಗ್ಗೆ ಸಂಸತ್ತು ಚರ್ಚಿಸಲು ಸಾಧ್ಯವಾಗದಿದ್ದರೆ ಅದು ಯಾಕೆ? ಈ ವಿಷಯದ ಕುರಿತು ಮೌನವಾಗುವುದಿಲ್ಲ. ವಿರೋಧ ಪಕ್ಷವು ವಿದ್ಯಾರ್ಥಿಗಳಿಗಾಗಿ ಹೋರಾಡುವುದನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು.
ಸುಮಾರು ಒಂದು ತಿಂಗಳಿನಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ ನಾಯಕರು ಸೋಮವಾರ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸಂಸತ್ತಿಗೆ ಮುತ್ತಿಗೆ ಹಾಕಲು ತೆರಳಿದ್ದರು. ಇದನ್ನು ತಡೆಯಲು ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಶೆಲ್ ಗಳನ್ನು ಬಳಸಿದ್ದು, ಇದರಿಂದ 100ಕ್ಕೂ ಹೆಚ್ಚು ಪೊಲೀಸರು ಮತ್ತು 60 ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.
ಈ ಕುರಿತು ಸದನದಲ್ಲಿ ಚರ್ಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಒತ್ತಾಯಿಸಿದ್ದು, ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ವಿದ್ಯಾರ್ಥಿಗಳ ಮೇಲೆ ಏಕೆ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮಾಡಲಾಯಿತು ಎಂದು ಪ್ರಶ್ನಿಸಿದರು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆನೀಡಬೇಕು ಮತ್ತು ಈ ಕುರಿತು ಸರ್ಕಾರ ತಕ್ಷಣ ಸಂಸತ್ತಿನಲ್ಲಿ ಪೂರ್ಣ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.