ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಥಾಮಸ್ ಮೆಕಾಲೆ ಯಾರು? 200 ವರ್ಷಗಳ ಹಿಂದೆ ಈ ವ್ಯಕ್ತಿ ಭಾರತಕ್ಕೆ ಹಾನಿ ಮಾಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ಯಾಕೆ?

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮೆಕಾಲೆ ಚಿಂತನೆಗಳ ವಿರುದ್ಧ ವಿಷಾದವನ್ನು ವ್ಯಕ್ತಪಡಿಸಿದ್ದು, ಭಾರತದ ಮೇಲೆ 200 ವರ್ಷಗಳ ಹಿಂದೆಯೇ ಥಾಮಸ್ ಮೆಕಾಲೆ ಎಂಬ ವ್ಯಕ್ತಿಯಿಂದಾದ ‘ಹಾನಿ’ಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವರ ಶಿಕ್ಷಣ ನೀತಿಯ ಪ್ರಭಾವದಿಂದಾಗಿ ನಮ್ಮ ಸಂಸ್ಕೃತಿ ಕಡೆಗಣನೆಯಾಗಿದ್ದು, ಮುಂದಿನ 10 ವರ್ಷಗಳಲ್ಲಿ ಈ ಪರಂಪರೆಯನ್ನು ಬದಲಾಯಿಸುವುದಾಗಿ ತಿಳಿಸಿದರು. ಭಾರತೀಯ ಭಾಷೆಗಳಿಗೆ ಬೆಂಬಲ ನೀಡುವುದಾಗಿ ಹೇಳಿದ ಅವರು, ರಾಜಕೀಯ ಮತ್ತು ಸಾಮಾಜಿಕ ನ್ಯಾಯದ ಬಗ್ಗೆಯೂ ಮಾತನಾಡಿದರು.

ಥಾಮಸ್ ಮೆಕಾಲೆ- ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭಾರತೀಯರ ಮನಃಸ್ಥಿತಿ ಮತ್ತು ಇಲ್ಲಿನ ಶಿಕ್ಷಣ ವ್ಯವಸ್ಥೆಯ(Indian Education System) ಮೇಲೆ 200 ವರ್ಷಗಳ ಹಿಂದೆಯೇ ಥಾಮಸ್ ಮೆಕಾಲೆ(Thomas Macaulay) ಎಂಬ ವ್ಯಕ್ತಿಯಿಂದಾದ ‘ಹಾನಿ’ಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಮತ್ತೊಮ್ಮೆ ಪ್ರಸ್ತಾಪಿಸುವ ಮೂಲಕ ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಚರ್ಚೆಯನ್ನು ಮತ್ತೆ ಮುನ್ನಲೆಗೆ ತಂದಿದ್ದಾರೆ. ಮಾತ್ರವಲ್ಲದೇ, ದೇಶವು ‘ಗುಲಾಮಿ ಮನಃಸ್ಥಿತಿ’ ಮತ್ತು ‘ವಸಾಹತುಶಾಹಿ ಮನಃಸ್ಥಿತಿ’ಯಿಂದ ಮುಂದಿನ 10 ವರ್ಷಗಳಲ್ಲಿ ಮುಕ್ತವಾಗಲಿದೆ ಎಂದು ಘೋಷಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರದ (Ayodhya Rama Mandira) ಮೇಲೆ ಕೇಸರಿ ಧ್ವಜವನ್ನು ಹಾರಿಸುವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ರಾಮ ಮಂದಿರ ಸಂಪೂರ್ಣವಾಗಿ ಪೂರ್ಣಗೊಳ್ಳುವುದರೊಂದಿಗೆ 500 ವರ್ಷಗಳ ಹಿಂದಿನ ‘ಗಾಯ ಮತ್ತು ನೋವು’ಗಳಿಗೆ ಈಗ ಮುಕ್ತಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

‘ಮೆಕಾಲೆ ಹಾನಿಗೆ 2035ರಲ್ಲಿ 200 ವರ್ಷ ಪೂರ್ಣಗೊಳ್ಳಲಿದೆ. ಮುಂದಿನ 10 ವರ್ಷಗಳಲ್ಲಿ ಈ ಗುಲಾಮಿ ಮನಃಸ್ಥಿತಿಗೆ ಒಂದು ಮುಕ್ತಿ ಸಿಗಲಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಬ್ರಿಟಿಷ್ ಇತಿಹಾಸಕಾರ ಮತ್ತು ರಾಜಕಾರಣಿಯನ್ನು ಚರ್ಚೆಯ ಮುನ್ನಲೆಗೆ ತಂದಿದ್ದಾರೆ.

ಇದಕ್ಕೂ ಮುನ್ನ ನವಂಬರ್ 17ರಂದು ರಾಮನಾಥ ಗೊಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಅವರು ‘ಥಾಮಸ್ ಮೆಕಾಲೆ ಉಂಟುಮಾಡಿದ್ದ ಗುಲಾಮಿ ಮನಃಸ್ಥಿತಿಯಿಂದ’ ಹೊರಬರಬೇಕಾದ ಸಂಕಲ್ಪವನ್ನು ದೇಶವಾಸಿಗಳು ಮಾಡಬೇಕಿದೆ ಎಂದು ಆಗ್ರಹಿಸಿದ್ದರು. ಮೆಕಾಲೆ ವ್ಯವಸ್ಥೆಯ ಮೇಲೆ ತನ್ನ ಮಾತಿನ ಪ್ರಹಾರವನ್ನು ಮುಂದುವರೆಸಿದ್ದ ಪ್ರಧಾನಿ ಮೋದಿ ಅವರು, ಮೆಕಾಲೆ ಭಾರತೀಯರ ಆತ್ಮವಿಶ್ವಾಸವನ್ನು ಮುರಿದು ನಮ್ಮ ಮೇಲೆ ಕೀಳರಿಮೆಯ ಭೂತವನ್ನು ಹೇರಿದ್ದ ವ್ಯಕ್ತಿಯಾಗಿದ್ದ ಎಂದು ಟೀಕಾಪ್ರಹಾರವನ್ನು ಮಾಡಿದ್ದರು.

Ayodhya Ram Mandir: ಬಾಲ ರಾಮನ ವಸ್ತ್ರ ವಿನ್ಯಾಸ ಪ್ರಧಾನಿ ಕನಸು!

ಯಾರೀ ಥಾಮಸ್ ಮೆಕಾಲೆ?

ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆ (1800-1859) ಭಾರತದ ವಸಾಹತುಶಾಹಿ ಇತಿಹಾಸದಲ್ಲಿ ಆಳವಾಗಿ ಅಚ್ಚೊತ್ತಿರುವ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದು, ಈತ 1834 ರಿಂದ 1838ರವರೆಗೆ ಗವರ್ನರ್ ಜನರಲ್ ಅವರ ಕೌನ್ಸಿಲ್ ಸದಸ್ಯನಾಗಿದ್ದ. ಈ ಸಂದರ್ಭದಲ್ಲಿ ಮೆಕಾಲೆ ಬ್ರಿಟಿಷ್ ಸಾಮ್ರಾಜ್ಯದ ಸ್ಪೆಷಲ್ ಪ್ರಾಜೆಕ್ಟ್ ನಲ್ಲಿ ಶೈಕ್ಷಣಿಕ ಮುಖವಾಣಿಯಾಗಿ ಗುರುತಿಸಲ್ಪಟ್ಟಿದ್ದ. ಭಾರತದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ನ್ಯಾಯ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಿ ಅದಕ್ಕೊಂದು ವಸಾಹತುಶಾಹಿ ಟಚ್ ನೀಡುವಲ್ಲಿ ಈತನ ಪಾತ್ರ ಬಹಳ ಪ್ರಮುಖವಾಗಿತ್ತು.

ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲೆ ಮೆಕಾಲೆ ಪ್ರಭಾವ

ಈತನ ನೀತಿ ರೂಪಕವಾಗಿರುವ ‘ಮೆಕಾಲೆ ಮಿನಿಟ್’ನಲ್ಲಿ ಆತ ಭಾರತೀಯ ಶಾಲೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಆಂಗ್ಲ ಮಾಧ್ಯಮವೇ ಪ್ರಧಾನವಾಗಿರಬೇಕೆಂದು ಆಗ್ರಹಿಸಿದ್ದ. ಆ ಕಾಲದ ಸಾಂಪ್ರದಾಯಿಕ ಭಾರತೀಯ ಜ್ಞಾನಕ್ಕಿಂತ ಪಾಶ್ಚಿಮಾತ್ಯ ಸಾಹಿತ್ಯ ಮತ್ತು ವಿಜ್ಞಾನವೇ ಶ್ರೇಷ್ಠವಾದುದು ಎಂಬುದು ಮೆಕಾಲೆಯ ಪ್ರತಿಪಾದನೆಯಾಗಿತ್ತು. ಹೊಸದಾದ ಭಾರತೀಯ ಪಂಗಡವೊಂದನ್ನು ಸೃಷ್ಟಿಸುವ ಉದ್ದೇಶವನ್ನು ಮೆಕಾಲೆ ಹೊಂದಿದ್ದ ಮತ್ತು ಈ ಮೂಲಕ ಭಾರತೀಯ ರಕ್ತ ಮತ್ತು ಬಣ್ಣವನ್ನು ಹೊಂದಿರುವ ಆದರೆ ರುಚಿಯಲ್ಲಿ ಇಂಗ್ಲಿಷ್ ಇರುವ ಹೊಸ ವರ್ಗವನ್ನು ರೂಪಿಸುವುದು ಮೆಕಾಲೆಯ ಮಹದುದ್ದೆಶವಾಗಿತ್ತು.

ಇದರಿಂದಾಗಿ ಆ ಕಾಲದಲ್ಲಿ ಭಾರತದಲ್ಲಿ ಪ್ರಚಲಿತದಲ್ಲಿದ್ದ ಸಂಸ್ಕೃತ ಮತ್ತು ಇತರೇ ಪ್ರಾದೇಶಿಕ ಭಾಷೆಗಳ ಜಾಗವನ್ನು ಇಂಗ್ಲಿಷ್ ನಿಧಾನವಾಗಿ ಆಕ್ರಮಿಸಿಕೊಳ್ಳತೊಡಗಿತು. ಇದು ಪಾಶ್ಚಿಮಾತ್ಯ ಕೇಂದ್ರೀಕೃತವಾಗಿತ್ತು. ಇದೇ ಇಂದಿನ ಆದುನಿಕ ಶಿಕ್ಷಣದ ಬುನಾದಿಯಾಗಿದೆ. ಮತ್ತಿದು ಆಂಗ್ಲ ಮಾಧ್ಯಮ ಶಾಲೆಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ ಎಂದರೆ ತಪ್ಪಾಗಲಾರದು.

Ayodhya Ram Temple: ಕಳೆಗಟ್ಟಿದ ಅಯೋಧ್ಯೆ; ರಾಮ ಮಂದಿರದಲ್ಲಿ ನಾಳೆ ಧ್ವಜಾರೋಹಣ: ಪ್ರಧಾನಿ ನರೇಂದ್ರ ಮೋದಿ ಭಾಗಿ

ಭಾರತಿಯ ಕಾನೂನಿನ ಮೇಲೆ ಮೆಕಾಲೆ ಪ್ರಭಾವ:

ಫರ್ಸ್ಟ್ ಲಾ ಕಮಿಷನ್ ಆಫ್ ಇಂಡಿಯಾದ ಅಧ್ಯಕ್ಷನಾಗಿದ್ದುಕೊಂಡು, ಮೆಕಾಲೆ 1837ರಲ್ಲಿ, ಇಂಡಿಯನ್ ಪಿನಲ್ ಕೋಡ್ (ಐಪಿಸಿ) ಕರಡು ರೂಪಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸಿದ್ದ. ಇದು 1860ರಲ್ಲಿ, ಮೆಕಾಲೆ ನಿಧನದ ಬಳಿಕ ಭಾರತದಲ್ಲಿ ಜಾರಿಗೆ ಬರುತ್ತದೆ. ಭಾರತ ಈ ವಸಾಹತಶಾಹಿ ಸಮಯದ ಕೋಡನ್ನು ಕಳೆದ ವರ್ಷವಷ್ಟೇ ಬದಲಾಯಿಸಿ ಆ ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿ.ಎನ್.ಎಸ್.)ನ್ನು ಪರಿಚಯಿಸಿದೆ. ಇದರೊಂದಿಗೆ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಬದಲಿಗೆ ಭಾರತೀಯ ಸುರಕ್ಷಾ ಸಂಹಿತಾ ಮತ್ತು ಇಂಡಿಯನ್ ಎವಿಡನ್ಸ್ ಆಕ್ಟ್ ಜಾಗದಲ್ಲಿ ಭಾರತೀಯ ಸಾಕ್ಷ್ಯ ಆದಿನಿಯಮ ಜಾರಿಗೆ ಬಂದಿದೆ.

ಭಾರತೀಯ ಸಂಸ್ಕೃತಿ ಮೇಲೆ ಮೆಕಾಲೆ ಪ್ರಭಾವ:

‘ಭಾರತೀಯ ಮತ್ತು ಅರೇಬಿಯಾ ನೆಲಗಳ ಸಾಹಿತ್ಯಕ್ಕಿಂತ ಯುರೋಪಿಯನ್ ಲೈಬ್ರೇರಿಯ ಒಂದು ಸಿಂಗಲ್ ಶೆಲ್ಫ್ ಸಾವಿರ ಪಾಲು ಉತ್ತಮ’ ಎಂಬ ಯೂರೋ ಕೇಂದ್ರೀಕೃತ ಭಾವನೆಯನ್ನು ಮೆಕಾಲೆ ಹೊಂದಿದ್ದ ಮತ್ತು ಅದನ್ನು ಭಾರತೀಯರ ಮನದಲ್ಲಿ ಪ್ರತಿಷ್ಠಾಪಿಸಲು ಆತ ತನ್ನ ಅಧಿಕಾರದುದ್ದಕ್ಕೂ ಪಣ ತೊಟ್ಟಿದ್ದ.