ಭಾರತದ ಮೇಲಿನ ಸುಂಕ ಶೇಕಡಾ 18ಕ್ಕೆ ಇಳಿಸಿದ ಅಮೆರಿಕ; ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರತಿಕ್ರಿಯೆ
Narendra Modi: ಅಮೆರಿಕ ಅಧ್ಯಕ್ಷ ಟೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಹೊರಡಿಸಿದ್ದು, ಭಾರತದ ಮೇಲಿನ ಸುಂಕವನ್ನು ಶೇಕಡಾ 18ಕ್ಕೆ ಇಳಿಸಿರುವುದಾಗಿ ತಿಳಿಸಿದ್ದಾರೆ. ಟ್ರಂಪ್ ಘೋಷಣೆ ಹೊರ ಬೀಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ದೆಹಲಿ, ಫೆ. 2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಹತ್ವದ ಘೋಷಣೆ ಹೊರಡಿಸಿದ್ದು, ಭಾರತದ ಮೇಲಿನ ಸುಂಕವನ್ನು ಶೇಕಡಾ 18ಕ್ಕೆ ಇಳಿಸಿರುವುದಾಗಿ ತಿಳಿಸಿದ್ದಾರೆ. ಹಲವು ತಿಂಗಳಿಂದ ನಡೆಯುತ್ತಿರುವ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮವಾಗಿದ್ದು, ಇದರ ಬೆನ್ನಲ್ಲೇ ಭಾರತದ ಮೇಲೆ ವಿಧಿಸಿರುವ ಸುಂಕದ ಭಾರವನ್ನು ಅಮೆರಿಕ ಕಡಿತಗೊಳಿಸಿದೆ. ಟ್ರಂಪ್ ಘೋಷಣೆ ಹೊರ ಬೀಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಟ್ರಂಪ್ ಕರೆ ಮಾಡಿ ಮೋದಿ ಅವರೊಂದಿಗೆ ಮಾತನಾಡಿ ಸುಂಕ ಕಡಿತದ ನಿರ್ಧಾರವನ್ನು ಪ್ರಕಟಿಸಿದರು. ಭಾರತೀಯರೆಲ್ಲ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ ಎಂದು ಮೋದಿ ಬರೆದುಕೊಂಡಿದ್ದಾರೆ.
ಮೋದಿ ಅವರ ಎಕ್ಸ್ ಪೋಸ್ಟ್:
Wonderful to speak with my dear friend President Trump today. Delighted that Made in India products will now have a reduced tariff of 18%. Big thanks to President Trump on behalf of the 1.4 billion people of India for this wonderful announcement.
— Narendra Modi (@narendramodi) February 2, 2026
When two large economies and the…
ಮೋದಿ ಹೇಳಿದ್ದೇನು?
ʼʼನನ್ನ ಆತ್ಮೀಯ ಗೆಳೆಯ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಅದ್ಭುತ ಮಾತುಕತೆ ನಡೆಸಿದೆ. ಭಾರತದಲ್ಲಿ ತಯಾರಾದ ಉತ್ಪನ್ನಗಳ ಸುಂಕ ಕಡಿತವಾಗಿದ್ದು, ಶೇ. 18ಕ್ಕೆ ಇಳಿದಿರುವುದು ಸಂತಸ ತಂದಿದೆ. ಈ ಅದ್ಭುತ ಘೋಷಣೆಗಾಗಿ ಭಾರತದ 1.4 ಬಿಲಿಯನ್ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳುʼʼ ಎಂದಿದ್ದಾರೆ.
ಮುಂದುವರಿದು, ʼʼಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳು ಒಟ್ಟಾಗಿ ಕೆಲಸ ಮಾಡಿದಾಗ, ಅದು ನಮ್ಮ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪರಸ್ಪರ ಪ್ರಯೋಜನಕಾರಿ ಸಹಕಾರಕ್ಕಾಗಿ ಅಪಾರ ಅವಕಾಶಗಳ ಬಾಗಿಲನ್ನು ತೆರೆಯುತ್ತದೆʼʼ ಎಂದು ಹೇಳಿದ್ದಾರೆ.
ʼʼಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅಧ್ಯಕ್ಷ ಟ್ರಂಪ್ ಅವರ ನಾಯಕತ್ವ ಅತ್ಯಗತ್ಯ. ಶಾಂತಿಗಾಗಿ ಅವರ ಪ್ರಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ಪಾಲುದಾರಿಕೆಯನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆʼʼ ಎಂದು ಹೇಳಿದ್ದಾರೆ.
ನರೇಂದ್ರ ಮೋದಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್; ಭಾರತದ ಮೇಲಿನ ಸುಂಕ ಶೇಕಡಾ 18ಕ್ಕೆ ಇಳಿಕೆ
ಟ್ರಂಪ್ ಹೇಳಿದ್ದೇನು?
ದೂರವಾಣಿ ಸಂಭಾಷಣೆ ವೇಳೆ ಪ್ರಧಾನಿ ಮೋದಿ ಮತ್ತು ಟ್ರಂಪ್ ವ್ಯಾಪಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಟ್ರೂತ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, “ಪ್ರಧಾನಿ ಮೋದಿ ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಅವರು ಭಾರತ ದೇಶದ ಪ್ರಭಾವಿ ಮತ್ತು ಗೌರವಾನ್ವಿತ ನಾಯಕ. ವ್ಯಾಪಾರ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ನಾವು ಚರ್ಚಿಸಿದೆವು” ಎಂದು ತಿಳಿಸಿದ್ದಾರೆ.
ʼʼಮೋದಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದ್ದಾರೆ. ಅದರ ಬದಲು ಅಮೆರಿಕ ಮತ್ತು ವೆನಿಜುವೆಲಾದಿಂದ ಖರೀದಿಸಲಿದ್ದಾರೆ. ಇದು ಉಕ್ರೇನ್ ಯುದ್ಧವನ್ನು ನಿಲ್ಲಿಸಲು ನೆರವಾಗಲಿದೆ. ಮೋದಿ ಅವರ ಮನವಿ ಮೇರೆಗೆ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಅದರಂತೆ ಶೇ. 25ರಷ್ಟಿದ್ದ ಸುಂಕವನ್ನು ಶೇ. 18ಕ್ಕೆ ಇಳಿಸಲಾಗಿದೆʼʼ ಎಂದು ವಿವರಿಸಿದ್ದಾರೆ. ಒಪ್ಪಂದದ ಭಾಗವಾಗಿ ಭಾರತ 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಉತ್ಪನ್ನ ಖರೀದಿಸಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.