#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

PMSGMBY: ʼಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆʼ: 2027ಕ್ಕೆ 1 ಕೋಟಿ ಮನೆಗಳಿಗೆ ಸೌರ ಶಕ್ತಿ ವಿದ್ಯುತ್ ಪೂರೈಕೆ ಗುರಿ

ʼಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆʼ (PMSGMBY)ಗೆ ಫೆ.13 ರಂದು ಮೊದಲ ವಾರ್ಷಿಕೋತ್ಸವ. ಈ ದಿನದಂದು 2027ರ ವೇಳೆಗೆ ದೇಶದ 1 ಕೋಟಿ ಮನೆಗಳಿಗೆ ಸೌರ ಶಕ್ತಿಯ ಬೆಳಕು ಚೆಲ್ಲುವ ಗುರಿ ಹೊಂದಲಾಗಿದೆ.

2027ಕ್ಕೆ 1 ಕೋಟಿ ಮನೆಗಳಿಗೆ ಸೌರ ಶಕ್ತಿ ವಿದ್ಯುತ್ ಪೂರೈಕೆ ಗುರಿ

ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ

Profile Siddalinga Swamy Feb 12, 2025 9:39 PM

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆ ʼಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆʼಗೆ (PMSGMBY) ಫೆ.13ರಂದು ಮೊದಲ ವಾರ್ಷಿಕೋತ್ಸವ. ಈ ದಿನದಂದು 2027ರ ವೇಳೆಗೆ ದೇಶದ 1 ಕೋಟಿ ಮನೆಗಳಿಗೆ ಸೌರ ಶಕ್ತಿಯ ಬೆಳಕು ಚೆಲ್ಲುವ ಗುರಿ ಹೊಂದಿದೆ. 2024ರ ಫೆ. 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಈ ಪರಿವರ್ತನಾಶೀಲ ಯೋಜನೆ, ಮನೆ ಮೇಲ್ಛಾವಣಿಗೆ ಸೌರ ಫಲಕ ಸ್ಥಾಪಿಸಿ ಉಚಿತ ವಿದ್ಯುತ್ ಒದಗಿಸುವ ಜತೆಗೆ ವಿದ್ಯುಚ್ಛಕ್ತಿ ಸ್ವಾವಲಂಬನೆಗೆ ದಿಟ್ಟ ಹೆಜ್ಜೆ ಇರಿಸಿದೆ.

ವಿಶ್ವದ ಅತಿದೊಡ್ಡ ದೇಶೀಯ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆ ಯೋಜನೆ ಎಂದೇ ಖ್ಯಾತಿ ಪಡೆದಿರುವ ʼಸೂರ್ಯ ಘರ್ʼ ಮಾರ್ಚ್ 2027ರ ವೇಳೆಗೆ ಒಂದು ಕೋಟಿ ಮನೆಗಳಿಗೆ ಸೌರಶಕ್ತಿ ಪೂರೈಸುವ ದಿಟ್ಟ ದೃಷ್ಟಿಕೋನದೊಂದಿಗೆ ಮುಂದಡಿ ಇಟ್ಟಿದೆ.

ʼಸೂರ್ಯ ಘರ್ʼ ದೇಶದಲ್ಲೀಗ ನವೀಕರಿಸಬಹುದಾದ ಇಂಧನ ಮೂಲಗಳ ಅಳವಡಿಕೆ ಪ್ರೋತ್ಸಾಹಿಸುತ್ತಿದ್ದು, ಭಾರತದಲ್ಲಿ ಹೆಚ್ಚು ಸುಸ್ಥಿರ ಮತ್ತು ಪರಿಸರ ಸ್ನೇಹಿ ಇಂಧನ ಮಿಶ್ರಣಕ್ಕೆ ಅನನ್ಯ ಕೊಡುಗೆ ನೀಡುತ್ತಿದೆ. ಸೌರ ಶಕ್ತಿ ಶುದ್ಧ ಇಂಧನ ನಾವೀನ್ಯತೆಯಲ್ಲಿ ಜಾಗತಿಕವಾಗಿ ಭಾರತದ ನಾಯಕತ್ವವನ್ನು ಪ್ರತಿಬಿಂಬಿಸುತ್ತಿದ್ದು, ಸುಸ್ಥಿರ ಅಭಿವೃದ್ಧಿಯತ್ತ ಸರ್ಕಾರದ ಬದ್ಧತೆಯನ್ನೂ ಪ್ರದರ್ಶಿಸುತ್ತಿದೆ. ಭಾರತವನ್ನು ಹಸಿರು, ಹೆಚ್ಚು ಇಂಧನ-ಸಮರ್ಥ ಭವಿಷ್ಯದತ್ತ ಕೊಂಡೊಯ್ಯುತ್ತದೆ.

9 ಲಕ್ಷ ಮನೆಗಳಿಗೆ ಅಳವಡಿಕೆ

ಯೋಜನೆ ಆರಂಭವಾದ ಪ್ರಥಮ ವರ್ಷದಲ್ಲೇ ಮಹತ್ತರ ಸಾಧನೆ ತೋರಿದೆ. 2025ರ ಫೆಬ್ರವರಿವರೆಗೆ ಈಗಾಗಲೇ 9,04,823 ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿ ಘಟಕ ಸ್ಥಾಪಿಸಲಾಗಿದೆ. ಮಾಸಿಕ ಅಳವಡಿಕೆ ದರ ಹತ್ತು ಪಟ್ಟು ಹೆಚ್ಚಳದಲ್ಲಿ ಸ್ಪಷ್ಟವಾಗಿದೆ. ತಿಂಗಳಿಗೆ ಸುಮಾರು 70,000 ಅಳವಡಿಕೆಯ ವೇಗ ಪಡೆದುಕೊಂಡಿದೆ. ಯೋಜನೆ ಗುರಿ ಮೀರಿ ಸಾಫಲ್ಯ ಕಾಣುತ್ತಿರುವುದು ಗಮನಾರ್ಹ ಬೆಳವಣಿಗೆ.

ಸೌರಶಕ್ತಿ ಸಾಮರ್ಥ್ಯದ ವಿಸ್ತರಣೆ

ಈ ಯೋಜನೆ ವಸತಿ ವಲಯದಲ್ಲಿ ಮೇಲ್ಛಾವಣಿ ಸ್ಥಾಪನೆ ಮೂಲಕ 30 GW ಸೌರಶಕ್ತಿ ಸಾಮರ್ಥ್ಯವನ್ನು ಸೇರಿಸುವ ನಿರೀಕ್ಷೆಯಿದೆ. ಇದು ಭಾರತದ ನವೀಕರಿಸಬಹುದಾದ ಇಂಧನ ಗುರಿಗಳಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

ಪರಿಸರ ಪ್ರಯೋಜನ

ಸೂರ್ಯ ಘರ್ ಸೌರ ಮೇಲ್ಛಾವಣಿ ಅಳವಡಿಸಿದ 25 ವರ್ಷಗಳ ಅವಧಿಯಲ್ಲಿ 1000 BU ಗಳಷ್ಟು ವಿದ್ಯುತ್ ಉತ್ಪಾದಿಸುತ್ತದೆ ಮತ್ತು CO2 ಹೊರಸೂಸುವಿಕೆಯನ್ನು 720 ಮಿಲಿಯನ್ ಟನ್‌ಗಳಷ್ಟು ಕಡಿಮೆ ಮಾಡುತ್ತದೆ. ಅಲ್ಲದೇ, ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಗಮನಾರ್ಹ ಸಂಗತಿ.

17 ಲಕ್ಷ ನೇರ ಉದ್ಯೋಗ ಸೃಷ್ಟಿ

ಪಿಎಂ ಸೂರ್ಯ ಘರ್ ಯೋಜನೆಯು ವಿವಿಧ ವಲಯಗಳಲ್ಲಿ ಸುಮಾರು 17 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದ್ದು, ದೇಶದಲ್ಲಿ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಮಾದರಿ ಸೌರ ಗ್ರಾಮಕ್ಕೆ ₹1 ಕೋಟಿ ಹಂಚಿಕೆ

ಇಂಧನ ಸ್ವಾವಲಂಬನೆ ಮತ್ತು ಸೌರ ಶಕ್ತಿ ಉತ್ತೇಜನಗೊಳಿಸಲು ಭಾರತದಾದ್ಯಂತ ಪ್ರತಿ ಜಿಲ್ಲೆಗೊಂದು ಮಾದರಿ ಸೌರ ಗ್ರಾಮ ಸ್ಥಾಪಿಸುವತ್ತಲೂ ಯೋಜನೆ ಹಾಕಿಕೊಳ್ಳಲಾಗಿದೆ. ಈ ಘಟಕಕ್ಕಾಗಿ ₹800 ಕೋಟಿ ಹಂಚಿಕೆ ಮಾಡಿದ್ದು, ಆಯ್ಕೆಯಾದ ಪ್ರತಿ ಮಾದರಿ ಸೌರ ಗ್ರಾಮಕ್ಕೆ ₹1 ಕೋಟಿ ನೀಡಲಾಗಿದೆ.

ಗ್ರಾಮಾರ್ಹತೆ ಏನು?

5,000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ (ಅಥವಾ ವಿಶೇಷ ವರ್ಗದ ರಾಜ್ಯಗಳಲ್ಲಿ 2,000) ಕಂದಾಯ ಗ್ರಾಮಗಳು ಅರ್ಹತೆ ಪಡೆಯುತ್ತವೆ. ಆದರೆ, ಸ್ಪರ್ಧಾತ್ಮಕ ಪ್ರಕ್ರಿಯೆ ಮೂಲಕ ಅರ್ಹ ಗ್ರಾಮಗಳ ಆಯ್ಕೆ ಮಾಡಲಾಗುತ್ತದೆ. ಜಿಲ್ಲಾ ಮಟ್ಟದ ಸಮಿತಿ (DLC) ಗುರುತಿಸಿದ 6 ತಿಂಗಳ ನಂತರ ನವೀಕರಿಸಬಹುದಾದ ಇಂಧನ (RE) ವಿತರಣೆ ಸಾಮರ್ಥ್ಯದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿರುವ ಗ್ರಾಮ ಕೇಂದ್ರ ಸರ್ಕಾರದಿಂದ ₹1 ಕೋಟಿ ಹಣಕಾಸು ನೆರವಿನ ಅನುದಾನ ಪಡೆಯುತ್ತದೆ.

ಸೌರ ಮೇಲ್ಛಾವಣಿ ಗುರಿಗಳು

ಪ್ರಸಕ್ತ ಮಾರ್ಚ್ ವೇಳೆಗೆ 10 ಲಕ್ಷ ಮೇಲ್ಛಾವಣಿ ಸೌರ ಫಲಕ ಅಳವಡಿಕೆ ಗುರಿ ಮೀರುವ ನಿರೀಕ್ಷೆಯಿದ್ದು, ಅಕ್ಟೋಬರ್ ವೇಳೆಗೆ ಇದು 20 ಲಕ್ಷಕ್ಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. 2026 ರ ಮಾರ್ಚ್ ವೇಳೆಗೆ 40 ಲಕ್ಷ ಹಾಗೂ ಅಂತಿಮವಾಗಿ 2027ಕ್ಕೆ ಮಹತ್ವಾಕಾಂಕ್ಷೆಯ ಒಂದು ಕೋಟಿ ಗುರಿ ಸಾಧಿಸುವ ಕಾರ್ಯತತ್ಪರತೆಯೊಂದಿಗೆ ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆ ಮಹತ್ತರ ಹೆಜ್ಜೆಯಿರಿಸಿದೆ.

5.54 ಲಕ್ಷ ಗ್ರಾಹಕರಿಗೆ ಸಬ್ಸಿಡಿ

ಶೇ. 40ರವರೆಗೆ ಸಬ್ಸಿಡಿ ಸಹಿತ ಸುಲಭವಾಗಿ ಕೈಗೆಟುಕುವಂತೆ ರೂಪಿತವಾದ ಸೂರ್ಯ ಘರ್ ಯೋಜನೆಯಡಿ ಪ್ರತಿ ಮನೆಗೆ ಸರಾಸರಿ ₹77,800 ಸಬ್ಸಿಡಿ ಇದ್ದು, ಈವರೆಗೆ 5.54 ಲಕ್ಷ ವಸತಿ ಗ್ರಾಹಕರಿಗೆ ಒಟ್ಟಾರೆ ₹4,308.66 ಕೋಟಿ ಮೊತ್ತ ಭರಿಸಲಾಗಿದೆ.

ಶೇ. 45 ಫಲಾನುಭವಿಗಳು ಶೂನ್ಯ ವಿದ್ಯುತ್ ಬಿಲ್: ಸೂರ್ಯ ಘರ್ ಸೌರ ಘಟಕ ಅಳವಡಿಸಿಕೊಂಡ ಅಂದಾಜು ಶೇ.45ರಷ್ಟು ಫಲಾನುಭವಿಗಳು ಸೌರ ವಿದ್ಯುತ್ ಉತ್ಪಾದನೆ ಜತೆಗೆ ಶೂನ್ಯ ವಿದ್ಯುತ್ ಬಿಲ್‌ ಪಡೆಯುತ್ತಿದ್ದಾರೆ.

ಸರ್ಕಾರಕ್ಕೆ ₹ 75000 ಕೋಟಿ ವಿದ್ಯುತ್ ವೆಚ್ಚ ಉಳಿತಾಯ

ಸೂರ್ಯ ಘರ್ ಯೋಜನೆ ಕೇವಲ ಮನೆ ವಿದ್ಯುತ್ ಬಿಲ್ ಅನ್ನು ಮಾತ್ರ ಶೂನ್ಯಗೊಳಿಸುತ್ತಿಲ್ಲ ಸರ್ಕಾರದ ವಿದ್ಯುತ್ ಪೂರೈಕೆ ವೆಚ್ಚವನ್ನೂ ತಗ್ಗಿಸುತ್ತಿದೆ. ಸರ್ಕಾರಕ್ಕೆ ವಾರ್ಷಿಕವಾಗಿ ಅಂದಾಜು ₹75,000 ಕೋಟಿ ವಿದ್ಯುತ್ ವೆಚ್ಚವನ್ನು ಉಳಿಸುವ ನಿರೀಕ್ಷೆಯಿದೆ.

ಸಬ್ಸಿಡಿ ಬೆಂಬಲದ ವಿವರ: ಫಲಾನುಭವಿಗಳು 0-150 ಯುನಿಟ್ ವಿದ್ಯುತ್ ಬಳಸುವವರಿಗೆ ೧-೨ ಕಿ.ವ್ಯಾ. ಸಾಮರ್ಥ್ಯದ ಸೌರ ಫಲಕ, ₹ 30,000 ರಿಂದ ₹ 60,000 ಸಬ್ಸಿಡಿ ಲಭ್ಯವಾಗುತ್ತದೆ. 150-300 ಯೂನಿಟ್ ಬಳಕೆದಾರರಿಗೆ ೨-೩ ಕಿ.ವ್ಯಾ. ಘಟಕ, ₹ 60,000 ರಿಂದ ₹ 78,000 ಸಬ್ಸಿಡಿ ಹಾಗೂ 300 ಯುನಿಟ್ ಮೇಲ್ಪಟ್ಟ ಬಳಕೆದಾರ ಗ್ರಾಹಕರಿಗೆ 3 kW ಗಿಂತ ಹೆಚ್ಚು ಸಾಮರ್ಥ್ಯದ ಸೌರ ಘಟಕ ಅಳವಡಿಕೆ ಮತ್ತು ₹ 78,000 ಸಬ್ಸಿಡಿ ಲಭ್ಯವಾಗಲಿದೆ.

ಮೇಲಾಧಾರ-ಮುಕ್ತ ಸಾಲ ಸೌಲಭ್ಯ: 3 kW ವರೆಗಿನ ವಸತಿ ಮೇಲ್ಛಾವಣಿ ಸೌರಶಕ್ತಿ ಘಟಕ ಸ್ಥಾಪನೆಗೆ ಸರಿಸುಮಾರು ಶೇ.7ರ ಬಡ್ಡಿ ದರದಲ್ಲಿ ಮೇಲಾಧಾರ-ಮುಕ್ತ ಸಾಲ ಸೌಲಭ್ಯವೂ ಇದೆ.

ಈ ಸುದ್ದಿಯನ್ನೂ ಓದಿ | Pralhad Joshi: ರಾಜ್ಯ ಶೇಂಗಾ ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ- ಬೆಂಬಲ ಬೆಲೆಯಲ್ಲಿ ಖರೀದಿ ಅವಧಿ ವಿಸ್ತರಣೆ

ಅರ್ಜಿ ಸಲ್ಲಿಕೆ ವಿಧಾನ

ರಾಷ್ಟ್ರೀಯ ಪೋರ್ಟಲ್ ಮೂಲಕ ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದು. ಇದರಲ್ಲಿ ಮೇಲ್ಛಾವಣಿ ಮೇಲೆ ಸೌರಶಕ್ತಿ ಸ್ಥಾಪಿಸಲು ತಮಗೆ ಸೂಕ್ತ ಮಾರಾಟಗಾರರನ್ನು ಸಹ ಆಯ್ಕೆ ಮಾಡಬಹುದು. ಅರ್ಜಿ ಸಲ್ಲಿಸಿದ ಹದಿನೈದೇ ದಿನಗಳಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.