Viral Video: ದೀಪಾವಳಿ ಬೋನಸ್ ನೀಡದ್ದಕ್ಕೆ ಟೋಲ್ ಗೇಟ್ ಸಿಬ್ಬಂದಿ ವಿಶಿಷ್ಟ ಪ್ರತಿಭಟನೆ; ವಾಹನ ಸವಾರರಂತೂ ಫುಲ್ ಖುಷ್
Diwali Bonus: ದೀಪಾವಳಿ ಬೋನಸ್ ನೀಡದ್ದಕ್ಕೆ ಕೋಪಗೊಂಡ ಟೋಲ್ ಗೇಟ್ ನೌಕರರು, ಎಲ್ಲ ವಾಹನ ಸವಾರರಿಗೂ ಮುಕ್ತ ಸಂಚಾರಕ್ಕೆ ಅವಕಾಶ ನೀಡಿದ್ದಾರೆ. ಇದರಿಂದ ವಾಹನ ಸವಾರರು ಟೋಲ್ ಹಣ ಪಾವತಿಸದೆ ಮುಂದೆ ಸಾಗಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

-

ನವದೆಹಲಿ: ದೀಪಾವಳಿ ಬೋನಸ್ (Diwali Bonus) ನೀಡದ್ದಕ್ಕೆ ಕೋಪಗೊಂಡ ನೌಕರರು ಮುಷ್ಕರ ನಡೆಸಿದ್ದಾರೆ. ಎಲ್ಲ ವಾಹನ ಸವಾರರ ಮುಕ್ತ ಸಂಚಾರಕ್ಕೆ ಗೇಟ್‌ಗಳನ್ನು ತೆರೆದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಇದರಿಂದ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿರುವ ಫತೇಹಾಬಾದ್ ಟೋಲ್ ಪ್ಲಾಜಾದಲ್ಲಿ ಸಾವಿರಾರು ವಾಹನಗಳು ಟೋಲ್ ಪಾವತಿಸದೆ ಹಾದು ಹೋಗಿವೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ವಾಹನಗಳು ಯಾವುದೇ ತೆರಿಗೆ ಪಾವತಿಯಿಲ್ಲದೆ ಎರಡೂ ಟೋಲ್‌ಗಳನ್ನು ದಾಟಿ ಹೋಗಿರುವುದು ಕಂಡುಬಂದಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಹಲವು ಲಕ್ಷ ರೂ. ನಷ್ಟ ಉಂಟಾಗಿದೆ. ಈ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶಕ್ಕೆ ಪ್ರಮುಖ ಮಾರ್ಗವಾಗಿದ್ದು, ಆಗ್ರಾ ಮತ್ತು ಲಖನೌ ನಡುವೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಇದು ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೂ ಸಂಪರ್ಕ ಕಲ್ಪಿಸುತ್ತದೆ.
ವಿಡಿಯೊ ವೀಕ್ಷಿಸಿ:
दिवाली पर सिर्फ ₹1100 बोनस मिलने से नाराज टोल कर्मचारियों ने आगरा-लखनऊ एक्सप्रेसवे के फतेहाबाद टोल पर गेट खोल दिए.#agralucknowexpressway #fatehabadtoll #bonusprotest pic.twitter.com/zFUcb6ena1
— NDTV India (@ndtvindia) October 21, 2025
ನಾನು ಕಳೆದ ಒಂದು ವರ್ಷದಿಂದ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಆದರೆ ಅವರು ನಮಗೆ ಯಾವುದೇ ಬೋನಸ್ ನೀಡಿಲ್ಲ. ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಆದರೆ ಅವರು ನಮಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡುವುದಿಲ್ಲ. ಕಂಪನಿಯು ಈಗ ಸಿಬ್ಬಂದಿಯನ್ನು ಬದಲಾಯಿಸುತ್ತೇವೆ. ಆದರೆ, ಯಾವುದೇ ಬೋನಸ್ ನೀಡುವುದಿಲ್ಲ ಎಂದು ಹೇಳುತ್ತಿದೆ ಎಂದು ಪ್ರತಿಭಟನಾ ನಿರತ ನೌಕರರಲ್ಲಿ ಒಬ್ಬರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: Viral Video: ಸಂಗೀತ ಕಾರ್ಯಕ್ರಮದಲ್ಲಿ ಯುವಕ-ಯುವತಿಯ ನಡುವೆ ನಡೀತು ಬಿಗ್ ಫೈಟ್; ಇಲ್ಲಿದೆ ನೋಡಿ ವಿಡಿಯೊ
ಈ ಉದ್ಯೋಗಿಗಳು ಶ್ರೀಸಾಯಿ ಮತ್ತು ದಾತಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ದೀಪಾವಳಿಯ ಸಂದರ್ಭದಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಕಳೆದ ವಾರ ಜಮಾ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಕೆಲವರು ಹೇಳಿದ್ದಾರೆ.
ನಂತರ ಕೋಪಗೊಂಡ ನೌಕರರು ಭಾನುವಾರ ರಾತ್ರಿ ಟೋಲ್ ಬೂತ್‌ನ ಬೂಮ್ ತಡೆಗೋಡೆ ತೆರೆದು ಮುಷ್ಕರ ನಡೆಸಿದರು. ಧರಣಿ 10 ಗಂಟೆಗಳ ಕಾಲ ನಡೆಯಿತು. ಅಧಿಕಾರಿಗಳು ಬೋನಸ್ ನೀಡುವುದಾಗಿ ಭರವಸೆ ನೀಡಿದ ನಂತರ ಮುಷ್ಕರವನ್ನು ಹಿಂಪಡೆಯಲಾಯಿತು ಎಂದು ತಿಳಿದುಬಂದಿದೆ.
ಮೊನ್ನೆಯಷ್ಟೇ ಚಂಡೀಗಢದಲ್ಲಿ ಫಾರ್ಮಾ ಕಂಪನಿಯ ಮಾಲೀಕರು ದೀಪಾವಳಿ (Deepavali) ಉಡುಗೊರೆಯಾಗಿ ತಮ್ಮ ಉದ್ಯೋಗಿಗಳಿಗೆ 51 ಐಷಾರಾಮಿ ಕಾರುಗಳನ್ನು ಹಸ್ತಾಂತರಿಸಿದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. MITS ಗುಂಪಿನ ಸಂಸ್ಥಾಪಕ ಮತ್ತು ಅಧ್ಯಕ್ಷ ಎಂಕೆ ಭಾಟಿಯಾ, ಅವರು ತಮ್ಮ ಉದ್ಯೋಗಿಗಳಿಗೆ ದುಬಾರಿ ಸ್ಕಾರ್ಪಿಯೋ ಎಸ್‌ಯುವಿಗಳನ್ನು ಗಿಫ್ಟ್ ಮಾಡಿದ್ದರು.