ಮುಂಬೈ, ಜು. 7: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸರಸಾಯಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ (Heavy rain) ಪ್ರವಾಹ ಉಂಟಾಗಿದೆ. ಪ್ರವಾಹದ ನಡುವೆ ಸಿಕ್ಕಿಹಾಕಿಕೊಂಡ ಬಸ್‌ನಲ್ಲಿದ್ದ 72 ವರ್ಷದ ವೃದ್ಧೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ಹೆಗಲ ಮೇಲೆ ಹೊತ್ತುಕೊಂಡು ಸಾಗಿರುವ ದೃಶ್ಯ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಎಂಟು ಮಂದಿ ಪ್ರಯಾಣಿಕರನ್ನು ಪೊಲೀಸ್ ಸಿಬ್ಬಂದಿ, ಹೆಲ್ಪ್ ಫೌಂಡೇಷನ್ ನೆರವಿನೊಂದಿಗೆ ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು.
ಪೊಲೀಸ್ ಅಧಿಕಾರಿಯೊಬ್ಬರು ವೃದ್ಧೆಯೊಬ್ಬರನ್ನು ಹೊತ್ತುಕೊಂಡು ಪ್ರವಾಹದ ಪ್ರದೇಶವನ್ನು ಸುರಕ್ಷಿತವಾಗಿ ದಾಟಿದರು. ಈ ರಕ್ಷಣೆಯ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. “ಪೊಲೀಸರ ತ್ವರಿತ ಕ್ರಮವು ಪ್ರವಾಹದ ನೀರಿನಲ್ಲಿ ಎಸ್‌ಟಿ ಬಸ್‌ನಲ್ಲಿ ಸಿಲುಕಿದ್ದ 8 ಪ್ರಯಾಣಿಕರನ್ನು ರಕ್ಷಿಸಿತು. ಪೊಲೀಸರು 72 ವರ್ಷದ ವೃದ್ಧೆಯನ್ನು ಸುರಕ್ಷಿತವಾಗಿ ಹೊರ ತಂದರು” ಎಂದು ರಾಯಗಢ ಪೊಲೀಸರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಇಲ್ಲಿದೆ ಫೋಟೊ:
ಸರಸೈಯಲ್ಲಿ ಎಂಎಸ್‌ಆರ್‌ಟಿಸಿ ಬಸ್ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದೆ. ಪ್ರಯಾಣಿಕರು ಒಳಗೆ ಸಿಲುಕಿದ್ದಾರೆ ಎಂಬ ಸಂದೇಶ ಬಂತು. ಪೊಲೀಸರು ಕಾರ್ಯಪ್ರವೃತ್ತರಾಗಿ, ಹೆಲ್ಪ್ ಫೌಂಡೇಷನ್‌ನ ಸ್ವಯಂಸೇವಕರೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸ್ಥಳಕ್ಕೆ ಧಾವಿಸಿದರು ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ಮಳೆ: ಒಂದೇ ದಿನದಲ್ಲಿ ಮಹಾರಾಷ್ಟ್ರದಲ್ಲಿ 13 ಮಂದಿ ಸಾವು
ಜುಲೈ 8ರವರೆಗೆ ಭಾರಿ ಮಳೆ ಮುಂದುವರಿಯುವ ನಿರೀಕ್ಷೆಯಿರುವುದರಿಂದ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮಂಗಳವಾರ (ಜು. 7) ನಾಸಿಕ್‌ನಲ್ಲಿ ಮೇಘಸ್ಫೋಟದಂತಹ ಮಳೆ ಬೀಳಬಹುದು ಎಂದು ಅವರು ಎಚ್ಚರಿಸಿದ್ದಾರೆ. ಉದ್ಯೋಗಿಗಳು ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ಮುಂಬೈಯಲ್ಲಿರುವ ಖಾಸಗಿ ಕಂಪನಿಗಳಿಗೆ ಸಲಹೆ ನೀಡಿದೆ.
ಜುಲೈ 6 ಮತ್ತು 7ರಂದು ಕೊಂಕಣ ಮತ್ತು ಕರಾವಳಿ ಜಿಲ್ಲೆಗಳ ಕೆಲವು ಭಾಗಗಳಿಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಮತ್ತು ಆರೆಂಟ್ ಅಲರ್ಟ್ ನೀಡಲಾಗಿದೆ ಎಂದು ಎಸ್‌ಡಿಎಂಎ ತಿಳಿಸಿದೆ. ಈ ಮಧ್ಯೆ, ಬಾಂಬೆ ಹೈಕೋರ್ಟ್ ಹವಾಮಾನ ವೈಪರೀತ್ಯದಿಂದಾಗಿ ತನ್ನ ಸಿಬ್ಬಂದಿಗೆ ಹಾಜರಾತಿ ನಿಯಮಗಳನ್ನು ಸಡಿಲಗೊಳಿಸಿದೆ. ಕಚೇರಿ ಆದೇಶದಲ್ಲಿ, ರಿಜಿಸ್ಟ್ರಾರ್ ಜನರಲ್, ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ನಿರ್ದೇಶನದ ಮೇರೆಗೆ, ದೂರದ ಪ್ರದೇಶಗಳಲ್ಲಿ ವಾಸಿಸುವ ಮತ್ತು ಭಾರಿ ಮಳೆಯಿಂದಾಗಿ ನ್ಯಾಯಾಲಯವನ್ನು ತಲುಪಲು ಸಾಧ್ಯವಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗೈರುಹಾಜರಿ ಎಂದು ಗುರುತಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.