ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚುನಾವಣಾ ಆಯೋಗದ ವಿರುದ್ಧ ರಾಜಕೀಯ ಪ್ರೇರಿತ ಅಪಪ್ರಚಾರ ಸಲ್ಲದು

ಪ್ರಜಾಪ್ರಭುತ್ವದ ಅತಿ ದೊಡ್ಡ ಉತ್ಸವವಾದ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಜವಾಬ್ದಾರಿ ಹೊತ್ತಿರುವ ಭಾರತೀಯ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ, ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುವುದು ಇಂದು ಫ್ಯಾಶನ್ ಆಗಿಬಿಟ್ಟಿದೆ. ಸುಪ್ರೀಂ ಕೋರ್ಟ್‌ ಸಹ ಈ ಕುರಿತು ಮಾತನಾಡಿದೆ.

ಸಂಗ್ರಹ ಚಿತ್ರ

ರವಿಶೇಖರ ವರ್ಮಾ, ಬೆಂಗಳೂರು

ಬೆಂಗಳೂರು: ಪ್ರಜಾಪ್ರಭುತ್ವದ ಅತಿ ದೊಡ್ಡ ಉತ್ಸವವಾದ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಜವಾಬ್ದಾರಿ ಹೊತ್ತಿರುವ ಭಾರತೀಯ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ, ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುವುದು ಇಂದು ಫ್ಯಾಶನ್ ಆಗಿಬಿಟ್ಟಿದೆ. ಆದರೆ, ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮತ್ತು ಮುಖ್ಯ ಚುನಾವಣಾ ಆಯುಕ್ತರ ಅಮಾನತು ನಿರೀಕ್ಷಿಸಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ತಳ್ಳಿಹಾಕಿರುವ ಕ್ರಮವು, ಚುನಾವಣಾ ಆಯೋಗದ ವಿರುದ್ಧ ರಾಜಕೀಯ ಪ್ರೇರಿತ ಅಪಪ್ರಚಾರಕ್ಕೆ ಗದಾ ಪ್ರಹಾರವಾಗಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು, ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ನಿರ್ಧಾರಗಳ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸ್ಪಷ್ಟವಾಗಿ ವಜಾಗೊಳಿಸಿತು. ಕೇವಲ ಮಾಧ್ಯಮ ವರದಿಗಳನ್ನು ಮಾತ್ರ ಆಧರಿಸಿ ಯಾವುದೇ ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರ ಮೇಲೆ ಮಧ್ಯಂತರ ಅಮಾನತು ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ನುಡಿಯಿತು.

"ಮಾಧ್ಯಮ ವರದಿಯೊಂದು ಶೇ. 100ರಷ್ಟು ಸರಿಯಿರಬಹುದು, ಭಾಗಶಃ ಸರಿಯಿರಬಹುದು ಅಥವಾ ತಪ್ಪಿರಬಹುದು; ಆದರೆ ಕೇವಲ ಊಹಾಪೋಹಗಳ ಮೇಲೆ ಕೋರ್ಟ್ ಆಡಳಿತಾತ್ಮಕ ಸ್ತಂಭವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ" ಎಂಬ ನ್ಯಾಯಾಲಯದ ಮಾತುಗಳು ಅತ್ಯಂತ ದೂರದೃಷ್ಟಿಯಿಂದ ಕೂಡಿದೆ. ಒಂದು ವೇಳೆ ಆಧಾರರಹಿತ ಆರೋಪಗಳಿಗೆ ಮಣಿದು ಸಿಇಸಿಯನ್ನು ಅಮಾನತುಗೊಳಿಸಿದರೆ, ದೇಶದಲ್ಲಿ ಮುಂದಿನ ಚುನಾವಣೆಗಳನ್ನು ನಡೆಸುವವರು ಯಾರು ಎಂಬ ಗಂಭೀರ ಪ್ರಶ್ನೆಯನ್ನು ಎತ್ತುವ ಮೂಲಕ ನ್ಯಾಯಾಲಯವು 'ಸಂಸ್ಥೆಯ ಸ್ಥಿರತೆ'ಗೆ ಮೊದಲ ಪ್ರಾಶಸ್ತ್ಯ ನೀಡಿದೆ.

ಫಾರ್ಮ್ 6 ಮತ್ತು ಡಿಕ್ಲರೇಷನ್ ಗೊಂದಲ: ಅಪಪ್ರಚಾರಕ್ಕೆ ಹಿನ್ನಡೆ : ಚುನಾವಣಾ ಆಯೋಗದ ಸೆಪ್ಟೆಂಬರ್ 26, 2026ರ ಪ್ರೆಸ್ ನೋಟ್ ಕುರಿತು ಕೆಲ ವಿರೋಧಿಗಳು ಅಪಪ್ರಚಾರ ನಡೆಸಿ, ಆಯೋಗವು ಫಾರ್ಮ್ 6 ಅನ್ನು "ಅಕ್ರಮವಾಗಿ ಮಾರ್ಪಡಿಸಿದೆ" ಎಂದು ಆರೋಪಿಸಿದ್ದರು. ಆದರೆ ಇಲ್ಲಿ ವಾಸ್ತವ ಬೇರೆಯಾಗಿದೆ.

ರೂಪ ಬದಲಾವಣೆ ಬೇರೆ, ಹೆಚ್ಚುವರಿ ದಾಖಲೆ ಬೇರೆ. 1960ರ ನಿಯಮಗಳ ಅಡಿಯಲ್ಲಿ 'ಫಾರ್ಮ್ 6'ರ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆ ತರಲಾಗಿಲ್ಲ. ಆದರೆ ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಮತದಾರರ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿಯಾಗಿ ಒಂದು ಘೋಷಣಾಪತ್ರವನ್ನು (Declaration) ಲಗತ್ತಿಸಲು ಸೂಚಿಸಲಾಗಿದೆ.

ವಿಶೇಷ ಪರಿಷ್ಕರಣೆಗಳ ಸಂದರ್ಭದಲ್ಲಿ ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಪಾಡಲು ಆಯೋಗಕ್ಕೆ ಪೂರಕ ದಾಖಲೆಗಳನ್ನು ಕೇಳುವ ಸಂಪೂರ್ಣ ಅಧಿಕಾರವಿದೆ ಎಂಬುದನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ (ಬಿಹಾರ ಎಸ್‌ ಐಆರ್ ತೀರ್ಪು ಹಾಗೂ ಪ್ಯಾರಾ 152 ಮತ್ತು 161) ಸ್ಪಷ್ಟಪಡಿಸಿದೆ.

ಆಯೋಗವು ತನ್ನ ಪ್ರೆಸ್ ನೋಟ್‌ನಲ್ಲಿ "ಘೋಷಣಾಪತ್ರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ" ಎಂದಿದೆ. ಆದರೆ ಇದನ್ನು ತಿರುಚಿ ಆಯೋಗವೇ ಸುಳ್ಳು ಹೇಳಿದೆ ಎಂದು ಬಿಂಬಿಸಲು ಹೊರಟವರ ಪ್ರಯತ್ನಗಳು ನ್ಯಾಯಾಲಯದ ದಾಖಲೆಗಳ ಮುಂದೆ ವಿಫಲವಾಗಿವೆ.

ಮತದಾರರ ಪಟ್ಟಿಯಿಂದ ನಕಲಿ, ಅನರ್ಹ ಹಾಗೂ ಅಸ್ತಿತ್ವದಲ್ಲಿಲ್ಲದ ನೂರಾರು ನಕಲಿ ನಮೂದುಗಳನ್ನು ಕಿತ್ತುಹಾಕಿ, ಪಟ್ಟಿಯನ್ನು ದೋಷರಹಿತವಾಗಿಸುವ ಬೃಹತ್ ಪ್ರಕ್ರಿಯೆಯೇ 'ವಿಶೇಷ ತೀವ್ರ ಪರಿಷ್ಕರಣೆ'. ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಗೆ ಇದು ಮೂಲಭೂತ ಅವಶ್ಯಕತೆ. ಹೀಗಿರುವಾಗ, ಈ ಪಟ್ಟಿ ಶುದ್ಧೀಕರಣದಂತಹ ಅತ್ಯಂತ ಪವಿತ್ರ ಕಾರ್ಯವನ್ನು ಕೆಲವು ವಲಯಗಳು ಕಡುಬಲದಿಂದ ವಿರೋಧಿಸುತ್ತಿರುವುದು ಯಾಕೆ? ಇದು ಸಾರ್ವಜನಿಕವಾಗಿ ಯೋಚಿಸಬೇಕಾದ ಗಂಭೀರ ವಿಷಯವಾಗಿದೆ. ಸಾಂವಿಧಾನಿಕ ಶಿಸ್ತು ಮತ್ತು ಆಯೋಗದ ಬದ್ಧತೆ

ಚುನಾವಣಾ ಆಯೋಗದ ಒಳಗೆ ವಿವಿಧ ಚರ್ಚೆಗಳು, ಭಿನ್ನಾಭಿಪ್ರಾಯಗಳು ಮೂಡುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವೇ ಹೊರತು ಬಿಕ್ಕಟ್ಟಲ್ಲ. ಅಂತಿಮವಾಗಿ ಎಲ್ಲಾ ನಿರ್ಧಾರಗಳು ಒಮ್ಮತದೊಂದಿಗೆ ನಡೆದಿವೆ. ಆಂತರಿಕ ಟಿಪ್ಪಣಿಗಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಹೊರಟವರಿಗೆ ಸುಪ್ರೀಂ ಕೋರ್ಟ್‌ನ ಆದೇಶ ತಣ್ಣೀರೆರಚಿದೆ.

ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದ ಈ ಸಮನ್ವಯ ಹಾಗೂ ದೃಢ ನಿಲುವುಗಳು, ನಮ್ಮ ಪ್ರಜಾಪ್ರಭುತ್ವದ ಬೇರುಗಳು ಎಷ್ಟೇ ಗಾಢವಾಗಿವೆ ಎಂಬುದನ್ನು ತೋರಿಸಿಕೊಟ್ಟಿವೆ. ಕೇವಲ ರಾಜಕೀಯ ರಂಗುಗಳಿಗಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ಕಳಂಕಗೊಳಿಸುವ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದಕ್ಕೆ ಈ ಇಡೀ ಪ್ರಸರಣವೇ ಸಾಕ್ಷಿಯಾಗಿದೆ.

Vishakha Bhat Heggar

View all posts by this author