ಪಾಟ್ನಾ, ಆ. 8: ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡ ಪರಿಣಾಮ ರೋಗಿಗಳು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಿಕಿತ್ಸೆ ಪಡೆಯುವಂತಾದ ಘಟನೆ ಬಿಹಾರದ (Bihar) ರೋಹ್ತಾಸ್ ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ನಡೆದಿದೆ. ಹಠಾತ್ ವಿದ್ಯುತ್ ಕಡಿತದಿಂದ ತುರ್ತು ಚಿಕಿತ್ಸಾ ಸೇವೆಗಳು ಅಸ್ತವ್ಯಸ್ತಗೊಂಡಿತು. ಮೊಬೈಲ್ ಫೋನ್‌ಗಳ ಟಾರ್ಚ್‌ಲೈಟ್ ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೊಗಳು, ಮೀಸಲಾದ ಬ್ಯಾಕಪ್ ವಿದ್ಯುತ್ ವ್ಯವಸ್ಥೆಗಳನ್ನು ಹೊಂದಿದ್ದರೂ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಸ್ಥಳೀಯ ವರದಿಗಳ ಪ್ರಕಾರ, ಈ ಘಟನೆ ಸಸಾರಾಮ್‌ನ ಸದರ್ ಆಸ್ಪತ್ರೆಗೆ ಸಂಯೋಜಿತವಾಗಿರುವ ಮಾಡೆಲ್ ಆಸ್ಪತ್ರೆಯಲ್ಲಿ ನಡೆದಿದೆ. ಅಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತುರ್ತು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.
ಅನಿರೀಕ್ಷಿತವಾಗಿ ಕರೆಂಟ್ ಹೋದ ಕಾರಣ, ವೈದ್ಯಕೀಯ ಸಿಬ್ಬಂದಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಫ್ಲ್ಯಾಷ್‌ಲೈಟ್ ಬಳಸಿಕೊಂಡು ವಿದ್ಯುತ್ ಮತ್ತೆ ಬರುವವರೆಗೆ ಚಿಕಿತ್ಸೆಯನ್ನು ಮುಂದುವರಿಸಿದರು. ಆಸ್ಪತ್ರೆಯಲ್ಲಿ ನಿರಂತರ ವಿದ್ಯುತ್ ಪೂರೈಕೆಗಾಗಿ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದ್ದರೂ ಈ ಘಟನೆ ನಡೆದಿರುವುದು ಕಳವಳವನ್ನು ಹುಟ್ಟುಹಾಕಿದೆ. ವೈದ್ಯಕೀಯ ಸೇವೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಜನರೇಟರ್‌ಗಳು ಸೇರಿ ಇತರ ತುರ್ತು ವಿದ್ಯುತ್ ಪೂರೈಕೆ ವ್ಯವಸ್ಥೆಗಳಂತಹ ಪರ್ಯಾಯ ಮೂಲಸೌಕರ್ಯವನ್ನೂ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿದೆ ವಿಡಿಯೊ:
ಈ ವ್ಯವಸ್ಥೆಗಳ ಹೊರತಾಗಿಯೂ, ತುರ್ತು ವಾರ್ಡ್ ಕತ್ತಲೆಯಲ್ಲಿ ಮುಳುಗಿತು. ಇದರಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ವೈದ್ಯರು ಮೊಬೈಲ್ ಫೋನ್ ಟಾರ್ಚ್ ಅವಲಂಬಿಸಬೇಕಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳಲ್ಲಿ ಆರೋಗ್ಯ ಕಾರ್ಯಕರ್ತರು ಮಂದ ಬೆಳಕಿನಲ್ಲಿ ರೋಗಿಗಳನ್ನು ಪರೀಕ್ಷಿಸುತ್ತಿರುವುದನ್ನು ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿದೆ. ಆಸ್ಪತ್ರೆಯ ತುರ್ತು ಮೂಲಸೌಕರ್ಯದ ವಿಶ್ವಾಸಾರ್ಹತೆಯ ಬಗ್ಗೆ ಟೀಕೆಗೆ ಕಾರಣವಾಗಿದೆ.
ಅವ್ಯವಸ್ಥೆಯ ಆಗರವಾದ ಕುಷ್ಟಗಿಯ ತಾಯಿ-ಮಕ್ಕಳ ಆಸ್ಪತ್ರೆ
ವೈರಲ್ ಆಗಿರುವ ವಿಡಿಯೊಗಳಿಗೆ ಪ್ರತಿಕ್ರಿಯಿಸಿದ ರೋಹ್ತಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಕುಮಾರ್ ಮಿಶ್ರಾ, ʼʼಮಿನಿಯೇಚರ್ ಸರ್ಕ್ಯೂಟ್ ಬ್ರೇಕರ್ (ಎಂಸಿಬಿ) ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ವಿದ್ಯುತ್ ಕಡಿತಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆʼʼ ಎಂದರು. ಇದರ ಪರಿಣಾಮವಾಗಿ ಸುಮಾರು ಎರಡು ನಿಮಿಷಗಳ ಕಾಲ ವಿದ್ಯುತ್ ಕಡಿತಗೊಂಡಿತು.
ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲು ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರು. ತನಿಖೆಯ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಈ ಘಟನೆಯು ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ವಿದ್ಯುತ್ ವೈಫಲ್ಯಗಳನ್ನು ಎದುರಿಸಲು ಸನ್ನದ್ಧತೆಯ ಬಗ್ಗೆ ಕಳವಳವನ್ನು ಎತ್ತಿ ತೋರಿಸಿದೆ. ವಿಶೇಷವಾಗಿ ತುರ್ತು ವಿಭಾಗಗಳಲ್ಲಿ ರೋಗಿಗಳ ಆರೈಕೆಗೆ ನಿರಂತರ ವಿದ್ಯುತ್ ನಿರ್ಣಾಯಕ.