ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪವರ್‌ ಬ್ಯಾಂಕ್‌ನಿಂದಾಗಿ ದೆಹಲಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

Delhi-Chennai IndiGo Flight: ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೈದರಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಅದೃಷ್ಟವಶಾತ್‌ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇಂಡಿಗೋ ವಿಮಾನದಲ್ಲಿ ಕಾನಿಸಿಕೊಂಡ ಬೆಂಕಿ, ಸಾಂದರ್ಭಿಕ ಚಿತ್ರ

ದೆಹಲಿ, ಅ. 11: ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (Delhi-Chennai IndiGo Flight) ಬೆಂಕಿ ಕಾಣಿಸಿಕೊಂಡಿದ್ದು, ಹೈದರಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಅದೃಷ್ಟವಶಾತ್‌ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಲಗೇಜ್‌ನಲ್ಲಿದ್ದ ಪವರ್‌ ಬ್ಯಾಂಕ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಕ್ಟೋಬರ್‌ 11ರಂದು ದೆಹಲಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ 6E6115 ವಿಮಾನದಲ್ಲಿದ್ದ ಪವರ್‌ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಉಳಿದ ಕಡೆ ವ್ಯಾಪಿಸಿತು ಎಂದು ವರದಿಯೊಂದು ಹೇಳಿದೆ. ದೆಹಲಿಯಿಂದ ಮಧ್ಯಾಹ್ನ 1:30ಕ್ಕೆ ಹೊರಟಿದ್ದ ವಿಮಾನ ತಮಿಳುನಾಡು ರಾಜಧಾನಿ ಚೆನ್ನೈಗೆ 4 ಗಂಟೆಗೆ ತಲುಪಬೇಕಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಿದ್ದು ಯಾವಾಗ, ಎಲ್ಲಿ ಎನ್ನುವ ನಿಖರ ಮಾಹಿತಿ ಲಭಿಸಿಲ್ಲ. ಘಟನೆ ಬಳಿಕ ವಿಮಾನವನ್ನು ಹೈದರಾಬಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಸದ್ಯ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಮಾನದೊಳಗೆ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಪ್ರಯಾಣಿಕರು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.

ಇಂಡಿಗೋ ವಿಮಾನದಲ್ಲಿ ಬೆಂಕಿ ಆಕಸ್ಮಿಕ:



ಘಟನೆ ವೇಳೆ ವಿಮಾನದಲ್ಲಿ ಎಷ್ಟು ಜನ ಪ್ರಯಾಣಿಕರಿದ್ದರು ಎನ್ನುವ ಮಾಹಿತಿ ಗೊತ್ತಾಗಿಲ್ಲ. ಆಕಸ್ಮಿಕ ಘಟನೆಯಿಂದ ಪ್ರಯಾಣಿಕರಿಗಾದ ಅನಾನುಕೂಲತೆಗೆ ಇಂಡಿಗೋ ವಿಷಾದ ವ್ಯಕ್ತಪಡಿಸಿದೆ. ಜತೆಗೆ ಪ್ರಯಾಣಿಕರ ಸುರಕ್ಷತೆಯೇ ತನ್ನ ಆದ್ಯತೆ ಎಂದು ಒತ್ತಿ ಹೇಳಿದೆ.

ಇನ್ಮುಂದೆ ಭಾರತೀಯ ವಿಮಾನದಲ್ಲಿ ಪವರ್‌ ಬ್ಯಾಂಕ್‌ ನಿಷೇಧ? ನಿಯಮ ಜಾರಿಗೆ ಸಿದ್ಧತೆ

ಚೆನ್ನೈಗೆ ತೆರಳಲು ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ. ವಿಮಾನ ವ್ಯವಸ್ಥೆ ಮಾಡುವವರೆಗೆ ಪ್ರಯಾಣಿಕರಿಗೆ ಉಪಾಹಾರ ನೀಡಲಾಯಿತು. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನಿಯಮಿತ ಮಾಹಿತಿ ಒದಗಿಸಲಾಯಿತು ಎಂದು ಸಂಸ್ಥೆಯ ಮೂಲಗಳು ತಿಳಿಸಿದೆ. "ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಉಪಾಹಾರದ ವ್ಯವಸ್ಥೆ ಮತ್ತು ಸಕಾಲದಲ್ಲಿ ಮಾಹಿತಿ ನೀಡುವುದು ಸೇರಿ ಈ ಸಮಸ್ಯೆಯ ಪರಿಹಾರಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಂಡಿಗೋದಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ಪ್ರಮುಖ ಆದ್ಯತೆ" ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ವಿವರಿಸಿದ್ದಾರೆ.

"ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ" ಎಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (RGIA) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಂದೆಯೂ ಇದೇ ರೀತಿಯ ದುರಂತ ನಡೆದಿತ್ತು

ಕಳೆದ ವರ್ಷ ಅಕ್ಟೋಬರ್‌ನಲ್ಲಿಯೇ ದೆಹಲಿಯಲ್ಲಿ ಇಂಡಿಗೋ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಭಾರಿ ಅನಾಹುತವೊಂದು ತಪ್ಪಿತ್ತು. ದೆಹಲಿಯಿಂದ ನಾಗಾಲ್ಯಾಂಡ್‌ನ ದಿಮಾಪುರಕ್ಕೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರ ಪವರ್‌ ಬ್ಯಾಂಕ್‌ನಿಂದ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಸಿಬ್ಬಂದಿ ಎಚ್ಚೆತ್ತು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯವಾಗಿರಲಿಲ್ಲ. ವಿಮಾನ ಟೇಕ್‌ಆಫ್‌ ಆಗುವ ವೇಳೆ ಈ ಘಟನೆ ನಡೆದಿತ್ತು. ಅದಕ್ಕೂ ಮೊದಲು ಚೀನಾದಲ್ಲಿ ಏರ್‌ ಚೀನಾ ವಿಮಾನದಲ್ಲಿ ಇದೇ ರೀತಿಯ ಅವಘಡ ಸಂಭವಿಸಿತ್ತು. ಲೀಥಿಯಂ ಬ್ಯಾಟರಿ ಬಿಸಿಯಾಗಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇಡೀ ವಿಮಾನವನ್ನು ವ್ಯಾಪಿಸಿತ್ತು. ಅದೃಷ್ಟವಶಾತ್‌ ಅಲ್ಲೂ ಯಾವುದೇ ಜೀವಹಾನಿ ಸಂಭವಿಸಿರಲಿಲ್ಲ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಇಂಡಿಗೋ ವಿಮಾನಕ್ಕೆ ಹಾನಿ; ತಪ್ಪಿದ ಭಾರಿ ದುರಂತ

ಪವರ್‌ ಬ್ಯಾಂಕ್‌ನಿಂದ ಶಾರ್ಟ್ ಸರ್ಕ್ಯೂಟ್‌

ಪವರ್ ಬ್ಯಾಂಕ್‌ಗಳು ಲಿಥಿಯಂ-ಐಯಾನ್ ಸೆಲ್‌ಗಳನ್ನು ಹೊಂದಿರುತ್ತವೆ. ಹೆಚ್ಚಿನ ಪವರ್‌ ಉಳ್ಳ ಬ್ಯಾಟರಿಗಳು ಗಮನಾರ್ಹ ವಿದ್ಯುತ್ ಚಾರ್ಜ್ ಅನ್ನು ಸಂಗ್ರಹಿಸಬಲ್ಲವು. ಆದಾಗ್ಯೂ ಅಗ್ಗದ ಪವರ್‌ ಬ್ಯಾಂಕ್‌ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಲ್ಲದು ಎಂದು ತಜ್ಞರು ಎಂದು ಹೇಳಿದ್ದಾರೆ.

Ramesh Ballamoole

View all posts by this author