ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಇಂಡಿಗೋ ವಿಮಾನಕ್ಕೆ ಹಾನಿ; ತಪ್ಪಿದ ಭಾರಿ ದುರಂತ
IndiGo Flight: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಭಾರಿ ದುರಂತವೊಂದು ತಪ್ಪಿದೆ. ಗುವಾಹಟಿಯಿಂದ ಆಗಮಿಸಿದ ಇಂಡಿಗೋ ವಿಮಾನ ಇಳಿಯುವ ವೇಳೆ ಹಿಂಭಾಗಕ್ಕೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ವಾತಾವರಣದಲ್ಲಿನ ಬದಲಾವಣೆಯೇ ಇದಕ್ಕೆ ಕಾರಣ ಎನ್ನಲಾಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಸೆ. 27: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಗುವಾಹಟಿಯಿಂದ ಆಗಮಿಸಿದ ಇಂಡಿಗೋ ವಿಮಾನ (IndiGo Flight) ಇಳಿಯುವ ವೇಳೆ ಹಿಂಭಾಗಕ್ಕೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ವಾತಾವರಣದಲ್ಲಿನ ಹಠಾತ್ ಬದಲಾವಣೆಯಿಂದ ವಿಮಾನಕ್ಕೆ ಹಾನಿಯಾಗಿದೆ ಎನ್ನಲಾಗಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರ ಕರೆ ತರಲಾಗಿದೆ.
"ಗುವಾಹಟಿಯಿಂದ ಬೆಂಗಳೂರಿಗೆ ಆಗಮಿಸಿದ ಇಂಡಿಗೋ 6E 6542 ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಇಳಿಯುವಾಗ ಬಲವಾದ ಗಾಳಿಯ ಹೊಡೆತಕ್ಕೆ ಸಿಲುಕಿತು. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ವಿಮಾನದಿಂದ ಕೆಳಗಿಳಿದಿದ್ದಾರೆ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) ಈ ಘಟನೆಯ ಕುರಿತು ತನಿಖೆ ಪ್ರಾರಂಭಿಸಿದೆ.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಎಂದ ಇಂಡಿಗೋ
ಸಂಬಂಧಿತ ಅಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ ಮತ್ತು ವಿಮಾನವನ್ನು ನಿರ್ವಹಣಾ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಬದ್ಧತೆಯನ್ನು ಪುನರುಚ್ಚರಿಸಿದ ಇಂಡಿಗೋ ವಕ್ತಾರರು, "ಅಗತ್ಯ ಅನುಮೋದನೆಗಳನ್ನು ಪಡೆದ ನಂತರ ವಿಮಾನವು ಮತ್ತೆ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ" ಎಂದು ಹೇಳಿದ್ದಾರೆ.
ಹಿಂದೆಯೂ ಸಮಸ್ಯೆಯಾಗಿತ್ತು
ದೆಹಲಿಗೆ ಆಗಮಿಸುತ್ತಿದ್ದ ಇಂಡಿಗೋ ಸಂಸ್ಥೆಯ ಡ್ರೀಮ್‌ಲೈನರ್ ವಿಮಾನವೊಂದು ತಾಂತ್ರಿಕ ದೋಷಕ್ಕೆ ಒಳಗಾದ ಕಾರಣ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ ಘಟನೆ ಸೆಪ್ಟೆಂಬರ್ 23ರಂದು ನಡೆದಿತ್ತು. ಲಂಡನ್ ಹೀಥ್ರೂ ಏರ್‌ಪೋರ್ಟ್‌ನಿಂದ ದೆಹಲಿಗೆ ಸಂಚರಿಸುತ್ತಿದ್ದ ಬೋಯಿಂಗ್ 787-9 ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆಯ ಕಾಲ ಆಕಾಶದಲ್ಲಿ ಹಾರಾಟ ನಡೆಸಿ ತುರ್ತು ಭೂಸ್ಪರ್ಶ ಮಾಡಿತು.
ವರದಿಗಳ ಪ್ರಕಾರ, ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದು ಲಂಡನ್ ಹೀಥ್ರೂಗೆ ಹಿಂದಿರುಗಿ ಸುರಕ್ಷಿತವಾಗಿ ಇಳಿಯಿತು. ಈ ವಿಮಾನವು ಮಧ್ಯರಾತ್ರಿ ಸುಮಾರು 12:40ಕ್ಕೆ ಹೊರಟು, ಸುಮಾರು 2 ಗಂಟೆ ಸುಮಾರಿಗೆ ಲಂಡನ್ ಹೀಥ್ರೂಗೆ ಮರಳಿತ್ತು.
ತುಮಕೂರಿನಲ್ಲಿ ಸುತ್ತು ಹಾಕಿದ್ದ ವರ್ಜಿನ್ ಅಟ್ಲಾಂಟಿಕ್ ವಿಮಾನ
ಇನ್ನು ಸೆಪ್ಟೆಂಬರ್ 6ರಂದು ಇದೇ ರೀತಿಯ ಸನ್ನಿವೇಶ ಬೆಂಗಳೂರಿನಲ್ಲಿ ಎದುರಾಗಿತ್ತು. ಲಂಡನ್‌ಗೆ ತೆರಳುತ್ತಿದ್ದ ವರ್ಜಿನ್ ಅಂಟ್ಲಾಟಿಕ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, 270 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.
ವರದಿಗಳ ಪ್ರಕಾರ, ವಿಮಾನವು ಬೆಳಗ್ಗೆ 8.20ರ ಸುಮಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಟಿತು. ಆದರೆ ನಿರ್ಗಮನದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್ ತುಮಕೂರಿನ ಬಳಿ ವಿಮಾನವನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಸುತ್ತು ಹಾಕಿಸಿ ಬೆಂಗಳೂರಿಗೆ ಹಿಂದುರುಗಿದ್ದರು. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ.