Pralhad Joshi: ಜನರಿಗೆ ಕೈಗೆಟುಕುವ ಬೆಲೆಯಲ್ಲಿ ʼಈರುಳ್ಳಿʼ ಲಭ್ಯವಾಗುವಂತೆ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಜೋಶಿ ಸೂಚನೆ
Pralhad Joshi: ಸೆಪ್ಟೆಂಬರ್, ಅಕ್ಟೋಬರ್ ಮಾಹೆ ಹಾಗೂ ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಹರಿದಿನಗಳು ಇರುವುದರಿಂದ ಜನಸಾಮಾನ್ಯರಿಗೆ ʼಈರುಳ್ಳಿʼ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

-

ನವದೆಹಲಿ: ದೇಶದಲ್ಲಿ ಪ್ರಸ್ತುತ ಸಾಲು ಸಾಲು ಹಬ್ಬಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ʼಈರುಳ್ಳಿʼ ಸಂಗ್ರಹಣೆ ಮತ್ತು ಕ್ರಯ-ವಿಕ್ರಯದ ಮೇಲೆ ಕಣ್ಣಿಟ್ಟಿದೆ. ಜನಸಾಮಾನ್ಯರಿಗೆ ತೊಂದರೆ-ತೊಡಕುಗಳು ಎದುರಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ್ದಾರೆ.
ಸೆಪ್ಟೆಂಬರ್, ಅಕ್ಟೋಬರ್ ಮಾಹೆ ಹಾಗೂ ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಹರಿದಿನಗಳು ಇರುವುದರಿಂದ ಜನಸಾಮಾನ್ಯರಿಗೆ ʼಈರುಳ್ಳಿʼ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಅಧಿಕಾರಿಗಳಿಗೆ ನಿರ್ದೇಶನ ಸಹ ನೀಡಿದ್ದಾರೆ.
ಈರುಳ್ಳಿ ಕ್ರಯ-ವಿಕ್ರಯ ಸುಗಮಕ್ಕೆ ಮಾರ್ಗಸೂಚಿ
ದೇಶದೆಲ್ಲೆಡೆ ಈರುಳ್ಳಿ ಸುಗಮ ಕ್ರಯ-ವಿಕ್ರಯಕ್ಕೆ ಮಾರ್ಗಸೂಚಿ ಹೊರಡಿಸುವಂತೆ ಸೂಚಿಸಿದ ಸಚಿವರು, ಉತ್ತಮ ಗುಣಮಟ್ಟದ ಈರುಳ್ಳಿ ಖರೀದಿ, ಸಂಗ್ರಹಣೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳ ತಂಡ ಎಲ್ಲಾ FPOಗಳು ಮತ್ತು FPCಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಆದೇಶಿಸಿದರು.
ಈರುಳ್ಳಿ ಖರೀದಿಯಲ್ಲಿ ಪಾರದರ್ಶಕ ಮತ್ತು ಪರಿಣಾಮಕಾರಿ ಸಂಗ್ರಹಣೆ ಕುರಿತಂತೆ DOCAಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರಲ್ಲದೆ, ಈರುಳ್ಳಿ ಖರೀದಿ ಪ್ರಕ್ರಿಯೆ ಸುಗಮಗೊಳಿಸಲು ಮತ್ತು ವೈಜ್ಞಾನಿಕವಾಗಿ ಸಂಗ್ರಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಪ್ರಾಥಮಿಕ ವರದಿ ಸಲ್ಲಿಕೆ
ಪ್ರಸ್ತುತದಲ್ಲಿ ಈರುಳ್ಳಿ ಖರೀದಿ ಸ್ಥಿತಿಗತಿ ಪರಿಶೀಲನೆ, ಖರೀದಿ ಕೇಂದ್ರಗಳು ಮತ್ತು FPO/FPCಗಳ ಸಂಗ್ರಹಣಾ ಕೇಂದ್ರಗಳಿಗೆ ಪರಿಶೀಲನಾ ತಂಡಗಳು ಭೇಟಿ ನೀಡಿ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ ಎಂದಿರುವ ಸಚಿವರು, ಎಲ್ಲೆಡೆಯೂ ಗ್ರಾಹಕರಿಗೆ ಈರುಳ್ಳಿ ಸುಗಮವಾಗಿ ಲಭ್ಯವಾಗುವಂತೆ ಕಟ್ಟೆಚ್ಚರ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | PM Svanidhi Scheme: ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ʼಪಿಎಂ ಸ್ವನಿಧಿʼ ಯೋಜನೆ ಮತ್ತೈದು ವರ್ಷ ವಿಸ್ತರಣೆ
ಮುನ್ನೆಚ್ಚರಿಕೆ ವಹಿಸಲು ಸಲಹೆ
ಹಬ್ಬಗಳು ಇರುವುದರಿಂದ ಹಾಗೂ ಎಲ್ಲೆಡೆ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಳಿತ ಆಗುತ್ತಿರುತ್ತದೆ. ಅಲ್ಲದೇ, ಕೆಲ ವರ್ತಕರು ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಇರಿಸಿಕೊಳ್ಳುತ್ತಾರೆ. ಇದರಿಂದ ಸಹಜವಾಗಿ ಕೃತಕ ಅಭಾವ ಎದುರಾಗುತ್ತದೆ. ಹಾಗಾಗಿ ಅಧಿಕಾರಿಗಳ ತಂಡ ಇದೆಲ್ಲದರ ಮೇಲೆ ನಿಗಾ ವಹಿಸಬೇಕು, ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಲಹೆ ನೀಡಿದರು.