ಚೆನ್ನೈ, ಮೇ 4: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 98ರಿಂದ 120 ಸ್ಥಾನಗಳನ್ನು ಗೆಲ್ಲಬಹುದು ಎಂದು ಏಪ್ರಿಲ್ 29ರಂದು ಚುನಾವಣಾ ಸಮೀಕ್ಷಾ ಸಂಸ್ಥೆಯೊಂದು ಹೇಳಿದಾಗ ಅನೇಕರು ಅದನ್ನು ಲೇವಡಿ ಮಾಡಿದ್ದರು. ಯಾವುದೇ ರಾಜಕೀಯ ಅನುಭವವಿಲ್ಲದ ನಟನೊಬ್ಬ ಹೊಸದಾಗಿ ಸ್ಥಾಪಿಸಿದ ಪಕ್ಷವು ಇಷ್ಟು ದೊಡ್ಡ ಸಾಧನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಆದರೆ ಮತದಾನದ ನಂತರದ ಎಕ್ಸಿಟ್ ಪೋಲ್‌ಗಳು ನೀಡಿದ್ದ ಈ ಅಂಕಿ-ಅಂಶಗಳಿಗಿಂತಲೂ ಮಿಗಿಲಾಗಿ, ಒಂದು ವರ್ಷದ ಹಿಂದೆಯೇ ಪ್ರಶಾಂತ್ ಕಿಶೋರ್ ನೀಡಿದ್ದ ಭವಿಷ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಕಳೆದ ವರ್ಷ ಮಾರ್ಚ್‌ನಲ್ಲಿ 'ತಂತಿ ಟಿವಿ'ಗೆ ನೀಡಿದ ಸಂದರ್ಶನದಲ್ಲಿ, ಚುನಾವಣಾ ತಂತ್ರಜ್ಞ ಹಾಗೂ ರಾಜಕಾರಣಿ ಪ್ರಶಾಂತ್ ಕಿಶೋರ್ ಅವರಿಗೆ ವಿಜಯ್ ಅವರ ಪಕ್ಷದ ಭವಿಷ್ಯದ ಬಗ್ಗೆ ಕೇಳಲಾಗಿತ್ತು. ಆಗ ಕಿಶೋರ್ ಅತ್ಯಂತ ಆತ್ಮವಿಶ್ವಾಸದಿಂದ, "ವಿಜಯ್ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅವರು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಕಣಕ್ಕಿಳಿದರೆ ತಮಿಳುನಾಡಿನಲ್ಲಿ ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದ್ದಾರೆ" ಎಂದು ಹೇಳಿದ್ದರು. ಬಿಹಾರ ಚುನಾವಣೆಯಲ್ಲಿ ಅವರ ಸ್ವಂತ ಪಕ್ಷ 'ಜನ್ ಸುರಾಜ್' ಅಷ್ಟೇನು ಪ್ರಭಾವ ಬೀರದಿದ್ದರೂ, ತಮಿಳುನಾಡಿನ ಬಗ್ಗೆ ಅವರು ನೀಡಿದ್ದ ಈ ಮಾತು ಈಗ ನಿಜವಾಗುತ್ತಿದೆ.
ವಿಡಿಯೊ ಇಲ್ಲಿದೆ:
ಸಂದರ್ಶನದ ವೇಳೆ ಪತ್ರಕರ್ತರು, "ಗೆಲುವು ಎಂದರೆ 234 ಸದಸ್ಯರ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ 118 ಸ್ಥಾನಗಳನ್ನು ಗೆಲ್ಲುವುದು ಎಂದರ್ಥ, ಇದು ಸಾಧ್ಯವೇ?" ಎಂದು ಮರುಪ್ರಶ್ನಿಸಿದ್ದರು. ಇದಕ್ಕೆ ಕಿಶೋರ್ ಅಷ್ಟೇ ದೃಢವಾಗಿ, "ಹೌದು, ಖಂಡಿತವಾಗಿಯೂ ಸಾಧ್ಯ. ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಇಟ್ಟುಕೊಳ್ಳಿ ಮತ್ತು ತಮಿಳುನಾಡಿನ ಫಲಿತಾಂಶ ಬಂದಾಗ ಇದನ್ನು ಪ್ಲೇ ಮಾಡಿ ನೋಡಿ" ಎಂದು ಸವಾಲು ಹಾಕಿದ್ದರು. ಅವರು ನುಡಿದಿದ್ದ ಈ ಭವಿಷ್ಯವು ಇಂದು ನಿಜದ ಹತ್ತಿರ ತಲುಪಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಶಿಕ್ಷಕರ ಸಂಘದ ಚುನಾವಣೆ: ಅಶೋಕ್ ಕುಮಾರ್ ಬಣದ ಅಭ್ಯರ್ಥಿಗಳ ದಿಗ್ವಿಜಯ
ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಐ-ಪ್ಯಾಕ್ (I-PAC) ಸಂಸ್ಥೆಯು ಟಿವಿಕೆ ಪರವಾಗಿ ಕೆಲಸ ಮಾಡುತ್ತಿದೆ ಎಂಬ ವರದಿಗಳಿದ್ದರೂ, ಕಿಶೋರ್ ಅವರು ಇದನ್ನು ನಿರಾಕರಿಸಿದ್ದರು. ತಾವು ವಿಜಯ್ ಅವರಿಗೆ ರಾಜಕೀಯ ಸಲಹೆಗಾರರಲ್ಲ, ಬದಲಾಗಿ ಒಳ್ಳೆಯ ಸ್ನೇಹಿತರು ಮತ್ತು ಸಮಾನ ಮೌಲ್ಯಗಳನ್ನು ಹಂಚಿಕೊಳ್ಳುವವರು ಎಂದು ಹೇಳಿದ್ದರು.
ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಧ ಹೊರ ಬೀಳುತ್ತಿದ್ದು, ವಿಜಯ್ ಅವರ ಪಕ್ಷವು ಸುಮಾರು 111 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಬಹುತೇಕ ಎಕ್ಸಿಟ್ ಪೋಲ್‌ಗಳ ಭವಿಷ್ಯವನ್ನು ಇದು ಸುಳ್ಳಾಗಿಸಿದೆ. ಪ್ರಶಾಂತ್ ಕಿಶೋರ್ ಅವರ ಈ ಹಳೆಯ ವಿಡಿಯೊ ಈಗ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.