ಶ್ರೀನಗರ, ನ. 26: 2008ರ ನವೆಂಬರ್ 26ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಅಮಾಯಕ ಜೀವಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಗೌರವ ನಮನ ಸಲ್ಲಿಸಿದರು. ಅಲ್ಲದೆ, ಭಯೋತ್ಪಾದಕರ ವಿರುದ್ಧ ಹೋರಾಡಿದ ಭದ್ರತಾ ಸಿಬ್ಬಂದಿಯ ಧೈರ್ಯ ಮತ್ತು ತ್ಯಾಗವನ್ನು ಅವರು ಸ್ಮರಿಸಿ ನಮನ ಸಲ್ಲಿಸಿದರು.
'ಎಕ್ಸ್' (X) ನಲ್ಲಿನ ಪೋಸ್ಟ್ ಮಾಡಿರುವ ರಾಷ್ಟ್ರಪತಿ ಮುರ್ಮು ಅವರು, "26/11 ಮುಂಬೈ ಭಯೋತ್ಪಾದಕ ದಾಳಿಯ ಈ ಗಂಭೀರ ಸ್ಮರಣಾರ್ಥ ದಿನದಂದು, ಪ್ರಾಣ ಕಳೆದುಕೊಂಡ ಅಮಾಯಕ ಜೀವಗಳನ್ನು ನೆನೆದು ನಾನು ಶಿರಬಾಗಿ ನಮಸ್ಕರಿಸುತ್ತೇನೆ. ಹಾಗೆಯೇ, ನಮ್ಮ ಧೀರ ಸೈನಿಕರು, ಪೊಲೀಸ್ ಸಿಬ್ಬಂದಿ ಮತ್ತು ಭಯೋತ್ಪಾದನೆಯ ವಿರುದ್ಧ ನಿರ್ಭೀತಿಯಿಂದ ನಿಂತ ಎಲ್ಲರ ಧೈರ್ಯಕ್ಕೆ ನಾನು ವಂದಿಸುತ್ತೇನೆ. ಅವರ ತ್ಯಾಗ ಮತ್ತು ನಿಸ್ವಾರ್ಥ ಸೇವೆಯು ನಮ್ಮ ರಾಷ್ಟ್ರದ ಆತ್ಮದಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯಲಿದೆ" ಎಂದು ಬರೆದುಕೊಂಡಿದ್ದಾರೆ.
"ಭಯೋತ್ಪಾದನೆಯು ಜೀವನಗಳನ್ನು ಛಿದ್ರಗೊಳಿಸಬಹುದು, ಆದರೆ ಧೈರ್ಯ, ಸಹಾನುಭೂತಿ ಮತ್ತು ದೃಢತೆಯಿಂದ ಒಂದಾದ ರಾಷ್ಟ್ರದ ಮನೋಸ್ಥೈರ್ಯವನ್ನು ಅದು ಎಂದಿಗೂ ಮುರಿಯಲಾರದು. ಇಂದು, ನಾವು ಸಂತ್ರಸ್ತರ ಮತ್ತು ಅವರ ಕುಟುಂಬಗಳೊಂದಿಗೆ ನಿಲ್ಲುತ್ತೇವೆ. ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳಲ್ಲಿ ನಿರ್ಮೂಲನೆ ಮಾಡಲು ಹಾಗೂ ಹೆಚ್ಚು ಶಾಂತಿಯುತ ಮತ್ತು ಮಾನವೀಯ ಜಗತ್ತನ್ನು ನಿರ್ಮಿಸುವತ್ತ ಶ್ರಮಿಸಲು ನಮ್ಮ ಸಾಮೂಹಿಕ ಸಂಕಲ್ಪವನ್ನು ಪುನರುಚ್ಚರಿಸುತ್ತೇವೆ," ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
2008ರ ಈ ದುರಂತಕ್ಕೆ 18 ವರ್ಷಗಳು ಕಳೆದರೂ ಘಟನೆಯ ಭೀಕರತೆ, ಮೃತಪಟ್ಟವರ ನೆನಪು, ಕುಟುಂಬಗಳ ರೋಧನೆ ಇನ್ನೂ ಜೀವಂತ.
ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಗುಂಪಿನ ಭಯೋತ್ಪಾದಕರು 2008ರ ನವೆಂಬರ್ 26ರಂದು ರಾತ್ರಿ ಮುಂಬೈ ನಗರವನ್ನು ಪ್ರವೇಶಿಸಿದ್ದರು. ಏಕಾಏಕಿ ನಡೆಸಿದ ಗುಂಡಿನಲ್ಲಿ ದಾಳಿಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ 166 ಜನರು ಮೃತಪಟ್ಟು 300 ಜನರು ಗಾಯಗೊಂಡಿದ್ದರು.
ತಾಜ್ ಮತ್ತು ಒಬೆರಾಯ್ ಹೊಟೇಲ್ಗಳು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ನಾರಿಮನ್ ಹೌಸ್ನಲ್ಲಿರುವ ಯಹೂದಿ ಕೇಂದ್ರ ಮತ್ತು ಲಿಯೋಪೋಲ್ಡ್ ಕೆಫೆ, ಈ ಸ್ಥಳಗಳಿಗೆ ಯುರೋಪಿಯನ್ನರು, ಭಾರತೀಯರು ಮತ್ತು ಯಹೂದಿಗಳು ಆಗಾಗ್ಗೆ ಭೇಟಿ ನೀಡುವುದರಿಂದ ಗರಿಷ್ಠ ಪ್ರಮಾಣದಲ್ಲಿ ಜನಸಂದಣಿ ಇರುವುದರ ಬಗ್ಗೆ ಸಮೀಕ್ಷೆ ನಡೆಸಿದ ನಂತರ ಯೋಜಿತ ದಾಳಿ ನಡೆಸಲಾಗಿತ್ತು.
ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ 10 ಭಯೋತ್ಪಾದಕರ ಪೈಕಿ 9 ಮಂದಿ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದರು. ಬದುಕುಳಿದಿದ್ದ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ‘ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್’ಗೆ 2010ರಲ್ಲಿ ಮರಣದಂಡನೆ ವಿಧಿಸಿ. 2012ರಲ್ಲಿ ಪುಣೆಯಲ್ಲಿ ಗಲ್ಲಿಗೇರಿಸಲಾಯಿತು.