ನವದೆಹಲಿ, ಏ.18: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಏಪ್ರಿಲ್18) ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಿಎಂಒ ಕಚೇರಿ ತಿಳಿಸಿದೆ. ಯಾವ ವಿಷಯದ ಬಗ್ಗೆ ಭಾಷಣ ಮಾಡಲಿದ್ದಾರೆ ಎಂಬ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಪ್ರಧಾನಿ ಅವರ ಭಾಷಣ ಬಹಳ ಮಹತ್ವದಾಗಿದೆ. ವಿರೋಧ ಪಕ್ಷದ ಟೀಕೆಗಳ ನಡುವೆಯೂ ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಪಡೆಯಲು ವಿಫಲವಾಯಿತು. ಇದಾದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದು, ಕುತೂಹಲ ಮೂಡಿಸಿದೆ.
ಸಂವಿಧಾನ (131ನೇ ತಿದ್ದುಪಡಿ) ಮಸೂದೆಯು ಲೋಕಸಭೆಯಲ್ಲಿ ಈಗಿರುವ 543ರಿಂದ 816ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿತ್ತು. ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯನ್ನು ಕಲ್ಪಿಸಲು ಉದ್ದೇಶಿಸಲಾಗಿತ್ತು. ಈ ಮಸೂದೆಯನ್ನು 298 ಸದಸ್ಯರು ಬೆಂಬಲಿಸಿದರೆ, 230 ಸಂಸದರು ಅದರ ವಿರುದ್ಧ ಮತ ಚಲಾಯಿಸಿದರು. ಮತ ಚಲಾಯಿಸಿದ 528 ಸದಸ್ಯರಲ್ಲಿ, ಮಸೂದೆಗೆ ಮೂರನೇ ಎರಡರಷ್ಟು ಬಹುಮತಕ್ಕೆ 352 ಮತಗಳು ಬೇಕಾಗಿದ್ದವು. ಇದರಿಂದಾಗಿ ಮಸೂದೆ ಜಾರಿಗೆ ತರುವಲ್ಲಿ ವಿಫಲವಾಯಿತು.
ಇದಕ್ಕೂ ಮುನ್ನ ತಮ್ಮ ಸಂಪುಟ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮಹಿಳಾ ಕೋಟಾ ಮಸೂದೆಯನ್ನು ಬೆಂಬಲಿಸದೆ ವಿರೋಧ ಪಕ್ಷಗಳು ತಪ್ಪು ಮಾಡಿವೆ. ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಅವರು ದೇಶದ ಮಹಿಳೆಯರನ್ನು ನಿರಾಸೆಗೊಳಿಸಿದ್ದಾರೆ. ಈ ಸಂದೇಶವನ್ನು ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಂದು ಹಳ್ಳಿಗೂ ತಲುಪಿಸಬೇಕು ಎಂದು ಪ್ರಧಾನಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿಯವರು ದೇಶವನ್ನುದ್ದೇಶಿಸಿ ಕೊನೆಯದಾಗಿ ಸೆಪ್ಟೆಂಬರ್ 21, 2025 ರಂದು ಭಾಷಣ ಮಾಡಿದ್ದರು. ಆಗ ಅವರು ಜಿಎಸ್ಟಿ 2.0 ಸುಧಾರಣೆಗಳ ಕುರಿತು ಜನರಿಗೆ ಮಾಹಿತಿ ನೀಡಿದ್ದರು. ಇದಕ್ಕೂ ಮುನ್ನ, ಅವರು ಮೇ 12, 2025 ರಂದು ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ನಂತರ ಭಾರತ ನಡೆಸಿದ ಪ್ರತಿದಾಳಿಯಾದ ಆಪರೇಷನ್ ಸಿಂಧೂರ್ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು.
ವಿಪಕ್ಷಗಳಿಗೆ ಎಚ್ಚರಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ
"25-30 ವರ್ಷಗಳ ಹಿಂದೆ, ಈ ಕಲ್ಪನೆ ಮೊದಲು ಹೊರಹೊಮ್ಮಿದಾಗ, ನಾವು ಅದನ್ನು ಆಗಲೇ ಕಾರ್ಯಗತಗೊಳಿಸಬೇಕಾಗಿತ್ತು. ಇದೀಗ ತಡವಾಗಿಯಾದರೂ ಮಹಿಳೆಯರಿಗೆ ಅವಕಾಶ ಸಿಗುತ್ತಿದೆ. ಒಂದು ರಾಷ್ಟ್ರಕ್ಕೆ ಸಂಬಂಧಿಸಿ ಕೆಲವು ನಿರ್ಣಾಯಕ ಕ್ಷಣಗಳು ಬರುತ್ತವೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ನಾಯಕತ್ವವು ಬಲವಾದ ಪರಂಪರೆಯನ್ನು ಸೃಷ್ಟಿಸುತ್ತದೆ. ಇದು ಕೂಡ ಅಂತಹದ್ದೇ ಒಂದು ಕ್ಷಣ" ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹೇಳಿದ್ದರು.
"ಮಹಿಳೆಯರು ಈಗ ಎಲ್ಲ ಕ್ಷೇತ್ರದಲ್ಲೂ ಸಬಲರಾಗಿದ್ದಾರೆ. ಅವರು ಮಹತ್ವಾಕಾಂಕ್ಷೆಯುಳ್ಳವರು. ಅವರು ಆಡಳಿತ ಮತ್ತು ಕಾನೂನು ರಚನೆಯ ಭಾಗವಾಗಲು ಬಯಸುತ್ತಾರೆ. ರಾಜಕೀಯವಾಗಿ ಮಾತ್ರ ಯೋಚಿಸುವವರಿಗೆ ನಾನು ಸಲಹೆ ನೀಡಲು ಬಯಸುತ್ತೇನೆ. ನಮ್ಮ ದೇಶದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ ಪ್ರಾರಂಭವಾದಾಗಿನಿಂದ ಮತ್ತು ನಂತರದ ಪ್ರತಿಯೊಂದು ಚುನಾವಣೆಯಲ್ಲೂ ಮಹಿಳೆಯರ ಈ ಹಕ್ಕನ್ನು ವಿರೋಧಿಸಿದ ಯಾರೇ ಆಗಿರಲಿ, ದೇಶ ಅವರನ್ನು ಕ್ಷಮಿಸಿಲ್ಲ" ಎಂದು ಪ್ರಧಾನಿ ಮೋದಿ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದರು.