ಶ್ರೀನಗರ, ಮಾ.1: ಇಸ್ರೇಲ್-ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಸಾವಿಗೀಡಾಗಿದ್ದಾರೆ ಎಂದು ಇರಾನ್ ಮಾಧ್ಯಮ ದೃಢಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ (Jammu-Kashmir) ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಶ್ರೀನಗರ, ಸೋನವಾರಿ ಮತ್ತು ಬಂಡಿಪೋರಾದಲ್ಲಿ ಪ್ರತಿಭಟನೆಗಳು ನಡೆದವು. ಶಿಯಾ ಸಮುದಾಯದ (Shia community) ಜನರು ಇರಾನಿನ ಸರ್ವೋಚ್ಚ ನಾಯಕನ ಫೋಟೋಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಶಿಯಾಗಳು ಎಂದಿಗೂ ಹುತಾತ್ಮರಾಗಲು ಹೆದರುವುದಿಲ್ಲ. ನಾವು ರೆಹಬರ್ ಖಮೇನಿ ಜೊತೆಗಿದ್ದೇವೆ. ಅವರೊಂದಿಗೆ ಒಗ್ಗಟ್ಟಿನಿಂದ ಬೀದಿಗಿಳಿದಿದ್ದೇವೆ ಎಂದು ಬಾರಾಮುಲ್ಲಾದಲ್ಲಿ ಮಹಿಳಾ ಪ್ರತಿಭಟನಾಕಾರರೊಬ್ಬರು ಹೇಳಿದರು. ಖಮೇನಿ ಅವರ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರ ಶಿಯಾ ಸಂಘ ಕೂಡ ಶೋಕ ವ್ಯಕ್ತಪಡಿಸಿದೆ. ಇಮಾಮ್ ಖಮೇನಿಯವರ ಕುಟುಂಬ ಸದಸ್ಯರು ಹುತಾತ್ಮರಾಗಿರುವುದಕ್ಕೆ ನಾವು ಶೋಕಿಸುತ್ತೇವೆ. ನಮ್ಮ ಪ್ರಾರ್ಥನೆಗಳು ನಾಯಕ ಮತ್ತು ಇರಾನ್ ಜನರೊಂದಿಗೆ ಇವೆ ಎಂದು ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತಿಭಟನೆಯ ವಿಡಿಯೊ ಇಲ್ಲಿದೆ:
ದಾಳಿಯನ್ನು ಖಂಡಿಸಿದ ರಾಜಕೀಯ ನಾಯಕರು
ಶನಿವಾರದಂದು (ಫೆಬ್ರವರಿ 28) ಇರಾನ್ ಮೇಲೆ ಇಸ್ರೇಲ್-ಅಮೆರಿಕ ನಡೆಸಿದ ದಾಳಿಯನ್ನು ರಾಜಕೀಯ ನಾಯಕರು ಬಲವಾಗಿ ಖಂಡಿಸಿದರು. ಗಂಭೀರ ಪ್ರಾದೇಶಿಕ ಪರಿಣಾಮಗಳ ಬಗ್ಗೆ ಅವರು ಎಚ್ಚರಿಕೆ ನೀಡಿದರು. ಇರಾನಿನ ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು, ಇಸ್ರೇಲ್‌ನಿಂದ ಆಕ್ರಮಣಕಾರಿ ಕೃತ್ಯವನ್ನು ಎದುರಿಸುತ್ತಿರುವ ಇರಾನ್ ಜನರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಇರಾನ್ ಅನ್ನು ಮುಸ್ಲಿಂ ಜಗತ್ತಿನ ಪ್ರಮುಖ ಧ್ವನಿ ಎಂದು ಬಣ್ಣಿಸಿದ ಮುಫ್ತಿ, ಆ ದೇಶವು ಅಚಲ ನಂಬಿಕೆ ಮತ್ತು ದೃಢ ನಿಶ್ಚಯದಿಂದ ತನ್ನ ಶಕ್ತಿಯನ್ನು ಪಡೆಯುತ್ತದೆ ಎಂದು ಹೇಳಿದರು. ಯಾವುದೇ ಕ್ಷಿಪಣಿ ಅಥವಾ ಬೆದರಿಕೆಯು ಅದರ ಸಾರ್ವಭೌಮತ್ವವನ್ನು ನಾಶಪಡಿಸಲು ಅಥವಾ ಅದರ ಮನೋಬಲವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಅಲ್ಲಾಹನ ರಕ್ಷಣೆ ಇರಾನ್ ಅನ್ನು ಸುತ್ತುವರೆದಿರಲಿ. ಅಲ್ಲಿನ ಜನರಿಗೆ ಧೈರ್ಯ ಮತ್ತು ತಾಳ್ಮೆಯನ್ನು ನೀಡಲಿ. ಅದರ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು ಜ್ಞಾನ ಮತ್ತು ಶಕ್ತಿಯಿಂದ ಮಾರ್ಗದರ್ಶನ ಮಾಡಲಿ ಎಂದು ಅವರು ಹೇಳಿದರು. ಕಾಶ್ಮೀರದ ಮುಖ್ಯ ಧರ್ಮಗುರು ಮಿರ್ವೈಜ್ ಉಮರ್ ಫಾರೂಕ್ ಕೂಡ ಈ ದಾಳಿಯನ್ನು ಖಂಡಿಸಿದ್ದು, ಈಗಾಗಲೇ ಅಸ್ಥಿರವಾಗಿರುವ ಪ್ರದೇಶದಲ್ಲಿ ಇದು ಮತ್ತಷ್ಟು ಅಪಾಯಕಾರಿ ನಿರ್ಧಾರ ಎಂದು ಹೇಳಿದ್ದಾರೆ.
ಟ್ರಂಪ್ ಈ ನಿರ್ಧಾರವೇ ಮೂರನೇ ಮಹಾಯುದ್ಧವನ್ನು ಶುರು ಮಾಡ್ತಾ? ಮಧ್ಯಪ್ರಾಚ್ಯ ಸಂಪೂರ್ಣ ಧಗಧಗ
ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ವಿಶೇಷವಾಗಿ ಪ್ಯಾಲೆಸ್ಟೀನಿಯರ ವಿಷಯದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಣೆಗಾರಿಕೆ ಇಲ್ಲದಿರುವುದರಿಂದಲೇ ಇಂತಹ ಕ್ರಮ ಕೈಗೊಳ್ಳಲು ಕಾರಣವಾಗುತ್ತಿದೆ ಎಂದು ಫಾರೂಕ್ ಹೇಳಿದ್ದಾರೆ.
ಅಯತೊಲ್ಲಾ ಅಲಿ ಖಮೇನಿ ಹತ್ಯೆ
ಟೆಹ್ರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕೆಲವೇ ಗಂಟೆಗಳ ನಂತರ ಇರಾನ್‌ನ ಹಲವಾರು ಮಾಧ್ಯಮಗಳು ಇದನ್ನು ಧೃಡಪಡಿಸಿತ್ತು. ಇರಾನ್ ಘೋಷಣೆ ಮಾಡುವುದಕ್ಕೂ ಮೊದಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಮೇನಿಯನ್ನು ಹೊಡೆದುರುಳಿಸಿದ್ದೇವೆ ಎಂದು ತಿಳಿಸಿದ್ದರು. ಖಮೇನಿಯನ್ನು ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರು ಎಂದು ಟ್ರಂಪ್ ಹೇಳಿದ್ದಾರೆ.