ಕೋಲ್ಕತ್ತಾ, ಜೂ. 1: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮಥುರಾಪುರದಲ್ಲಿ ಭಾನುವಾರ ಸಂಜೆ ತೀವ್ರ ಉದ್ವಿಗ್ನತೆ ಉಂಟಾಗಿದೆ. ತೃಣಮೂಲ ಕಾಂಗ್ರೆಸ್ (Trinamool Congress) ಸಂಸದ ಬಾಪಿ ಹಲ್ದಾರ್ (MP Bapi Haldar) ಅವರ ಕಚೇರಿಯಲ್ಲಿ ಭಾರಿ ಪ್ರಮಾಣದ ಪ್ರವಾಹ ಪರಿಹಾರ ಸಾಮಗ್ರಿಗಳನ್ನು ಅಕ್ರಮವಾಗಿ ಬಚ್ಚಿಡಲಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಕಚೇರಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಮತ್ತು ಬಿಜೆಪಿ ಕಾರ್ಯಕರ್ತರ ಪ್ರಕಾರ, ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರವಾಹ ಪೀಡಿತ ಬಡ ಕುಟುಂಬಗಳಿಗೆ ವಿತರಿಸಬೇಕಾಗಿದ್ದ ನೂರಾರು ಕಾರ್ಟನ್ ಅತ್ಯಗತ್ಯ ಪರಿಹಾರ ಸಾಮಗ್ರಿಗಳನ್ನು ಸಂಸದರ ಕಚೇರಿಯೊಳಗೆ ಸಂಗ್ರಹಿಸಿಡಲಾಗಿತ್ತು. ಸಂತ್ರಸ್ತರಿಗೆ ತಲುಪಬೇಕಾದ ಸಾಮಗ್ರಿಗಳನ್ನು ಸಕಾಲದಲ್ಲಿ ವಿತರಿಸದೆ ಹೀಗೆ ಸ್ವಾರ್ಥಕ್ಕಾಗಿ ಬಚ್ಚಿಟ್ಟಿರುವುದನ್ನು ಕಂಡು ತೀವ್ರ ಆಕ್ರೋಶಗೊಂಡ ನೂರಾರು ಸಾರ್ವಜನಿಕರು ಕಚೇರಿಗೆ ಮುತ್ತಿಗೆ ಹಾಕಿದರು.
ಟಿಎಂಸಿ ಕಚೇರಿ ಮೇಲೆ ದಾಳಿ:
ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಜನರು ಕಚೇರಿಯ ಮುಂದೆ ಜಮಾಯಿಸಿ 'ಜೈ ಶ್ರೀರಾಮ್' ಘೋಷಣೆಗಳನ್ನು ಕೂಗುತ್ತಾ ಧಾವಿಸಿದರು. ಅಲ್ಲಿ ಬಚ್ಚಿಡಲಾಗಿದ್ದ ಪರಿಹಾರದ ಬಾಕ್ಸ್‌ಗಳನ್ನು ತಾವೇ ಕೈಯಾರೆ ಹೊರಗೆ ತಂದರು. ಈ ವೇಳೆ ಪರಿಸ್ಥಿತಿ ಕೈ ಮೀರಿ, ಉದ್ರಿಕ್ತರ ಗುಂಪು ಕಚೇರಿಯ ಕಿಟಕಿ ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿತು. ಹಲವರು ಕಾರ್ಟನ್‌ಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯ ಕಂಡುಬಂತು. ಮಾಹಿತಿ ತಿಳಿದ ತಕ್ಷಣ ಭಾರಿ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವಾಗುತ್ತ?
ರಾಜಕೀಯ ಸಂಘರ್ಷ ತೀವ್ರ
ವಿಧಾನಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಈ ಘಟನೆ ನಡೆಯುವ ಕೇವಲ ಒಂದು ದಿನದ ಮುನ್ನವಷ್ಟೇ, ಟಿಎಂಸಿ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಸೋನಾರ್‌ಪುರದಲ್ಲಿ ಸ್ಥಳೀಯರು ಕಲ್ಲು, ಮೊಟ್ಟೆ ಹಾಗೂ ಚಪ್ಪಲಿಗಳಿಂದ ದಾಳಿ ನಡೆಸಿದ್ದರು. ಈ ವೇಳೆ ಅವರ ಶರ್ಟ್ ಹರಿದು ಹೋಗಿದ್ದು, ಹೆಲ್ಮೆಟ್ ಧರಿಸಿ ಅವರು ಅಲ್ಲಿಂದ ಪಾರಾಗಿದ್ದರು. ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.
ಇದಾದ ಮರುದಿನವೇ ಹೂಗ್ಲಿ ಜಿಲ್ಲೆಯಲ್ಲಿ ಮತ್ತೊಬ್ಬ ಟಿಎಮ್‌ಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲೂ ಭೀಕರ ದಾಳಿ ನಡೆದಿದ್ದು, ತಮಗೆ ತಲೆಗೆ ಗಂಭೀರ ಗಾಯವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಬಿಜೆಪಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಟಿಎಂಸಿ ನಾಯಕರ ದುರಾಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶವೇ ಇದಕ್ಕೆ ಕಾರಣ ಎಂದು ಹೇಳಿದೆ. ಈ ಬೆನ್ನಲ್ಲೇ ಸಂಸದರ ಕಚೇರಿ ಧ್ವಂಸ ಘಟನೆ ನಡೆದಿರುವುದು ರಾಜ್ಯದಲ್ಲಿ ರಾಜಕೀಯ ಕಿಡಿಯನ್ನು ಮತ್ತಷ್ಟು ಹೆಚ್ಚಿಸಿದೆ.