ನವದೆಹಲಿ: ಇವತ್ತಿಗೆ ಏಳು ವರ್ಷಗಳ ಹಿಂದೆ ಜಮ್ಮು–ಕಾಶ್ಮೀರದ ಪುಲ್ವಾಮಾ (Pulwama Attack) ಜಿಲ್ಲೆಯಲ್ಲಿ ನಡೆದ ಭೀಕರ ಉಗ್ರ ದಾಳಿ ಭಾರತವನ್ನು ದುಃಖದ ಸಾಗರದಲ್ಲಿ ಮುಳುಗಿಸಿತು. ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸುವ 44ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಯೋಧರು ಪ್ರಯಾಣಿಸುತ್ತಿದ್ದ ಬಸ್‌ಗಳ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು. ಲೇತಾಪೋರಾ ಪ್ರದೇಶದಲ್ಲಿ ನಡೆದ ಈ ದಾಳಿಯಲ್ಲಿ ಸುಮಾರು 40 ಯೋಧರು ಹುತಾತ್ಮರಾಗಿದ್ದರು. 1989ರ ನಂತರ ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದು.
ಇಂದಿಗೂ ಪ್ರತಿ ವರ್ಷ ಫೆಬ್ರವರಿ 14 ಬಂದಾಗ, ಭಾರತೀಯರ ಮನದಲ್ಲಿ ಮರೆಯಲಾಗದ ಒಂದು ಕರಾಳ ದಿನ ನೆನಪಾಗುತ್ತದೆ. ಏಳು ವರ್ಷಗಳ ಹಿಂದೆ ಇದೇ ದಿನ 40 ಸಿಆರ್‌ಪಿಎಫ್ ಯೋಧರು ದೇಶಕ್ಕಾಗಿ ಹುತಾತ್ಮರಾದರು. ಆ ದುರ್ಘಟನೆಯ ಸುದ್ದಿ ಕೇಳಿ ಇಡೀ ಭಾರತವೇ ದುಃಖದಲ್ಲಿ ಮುಳುಗಿತ್ತು.ಜೈಶ್-ಎ-ಮೊಹಮ್ಮದ್ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ಸಾಗುತ್ತಿದ್ದ ಯೋಧರು ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡರು. ಸ್ಫೋಟಕ ತುಂಬಿದ ವಾಹನವನ್ನು ಬೆಂಗಾವಲು ಪಡೆಯ ಮೇಲೆ ಡಿಕ್ಕಿ ಹೊಡೆಸಿ ಈ ಭೀಕರ ದಾಳಿ ನಡೆಸಲಾಗಿತ್ತು. ಇಂದು ಸಹ ನೆಟ್ಟಿಗರು #BlackDay ಮೂಲಕ ವೀರ ಯೋಧರ ಬಲಿದಾನವನ್ನು ಸ್ಮರಿಸಲಾಗುತ್ತದೆ.
ದಾಳಿಯ ಹೊಣೆಗಾರಿಕೆಯನ್ನು ಹೊತ್ತ ಪಾಕ್ ಉಗ್ರ ಸಂಘಟನೆ
ಈ ದಾಳಿಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತು. ಆತ್ಮಹತ್ಯಾ ದಾಳಿ ನಡೆಸಿದ ವ್ಯಕ್ತಿ ಕಾಶ್ಮೀರ ಕಣಿವೆಯ ಕಾಕಪೋರಾ ನಿವಾಸಿಯಾಗಿದ್ದ ಆದಿಲ್ ಅಹಮದ್ ದಾರ್ ಎಂಬ ಯುವಕನಾಗಿದ್ದು, ಆತನ ವಿಡಿಯೋವನ್ನು ಸಂಘಟನೆ ಬಿಡುಗಡೆ ಮಾಡಿತ್ತು. ಆದರೆ, ಪಾಕಿಸ್ತಾನ ಸರ್ಕಾರ ಎಂದಿನಂತೆ ಈ ಘಟನೆಯೊಂದಿಗೆ ತನ್ನ ಸಂಬಂಧವಿಲ್ಲವೆಂದು ನಿರಾಕರಿಸಿತು.
ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲು
ಈ ಘಟನೆ ದೇಶದ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಗುಪ್ತಚರ ಮಾಹಿತಿಯ ಆಧಾರದ ಮೇಲೆ ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿತು. ಪುಲ್ವಾಮಾ ದಾಳಿಗೆ ಸಂಬಂಧಿಸಿದವರನ್ನು ಪತ್ತೆಹಚ್ಚಲು ಸಿಆರ್‌ಪಿಎಫ್ ಹಾಗೂ 55 ರಾಷ್ಟ್ರೀಯ ರೈಫಲ್ಸ್‌ಗಳ ಸಂಯುಕ್ತ ಪಡೆ ಕಾರ್ಯಾಚರಣೆ ಆರಂಭಿಸಿತು. ಫೆಬ್ರವರಿ 18ರಂದು ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಹುತಾತ್ಮರಾದರು.
ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಮಹತ್ವದ ಕ್ರಮ ಕೈಗೊಂಡಿತು. 12 ಮಿರಾಜ್–2000 ಯುದ್ಧ ವಿಮಾನಗಳು ನಿಯಂತ್ರಣ ರೇಖೆಯನ್ನು ದಾಟಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ಪ್ರದೇಶದಲ್ಲಿದ್ದ ಉಗ್ರ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದವು. ಈ ದಾಳಿಯಲ್ಲಿ ಹಲವು ಉಗ್ರರು ಹತರಾದರು. ಇದಕ್ಕೆ ಪ್ರತಿಯಾಗಿ
ಮುಂದಿನ ದಿನಗಳಲ್ಲಿ ಪಾಕಿಸ್ತಾನದ ವಾಯುಪಡೆಯ ವಿಮಾನಗಳು ಪ್ರತೀಕಾರದ ಪ್ರಯತ್ನವಾಗಿ ಭಾರತೀಯ ಗಡಿಗೆ ನುಗ್ಗಿದವು. ಅವುಗಳನ್ನು ಹಿಮ್ಮೆಟ್ಟಿಸಲು ಭಾರತೀಯ ವಾಯುಪಡೆ ಯೋಧರು ಮಿಗ್–21 ವಿಮಾನಗಳಲ್ಲಿ ಹಾರಾಟ ನಡೆಸಿದರು. ಈ ವೇಳೆ ಒಂದು ವಿಮಾನ ಹೊಡೆದುರುಳಿಸಲ್ಪಟ್ಟು, ಅದರ ಪೈಲಟ್ ವಿಂಗ್ ಕಮಾಂಡರ್ ಬಂಧಿತರಾದರು. ಅಂತಾರಾಷ್ಟ್ರೀಯ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ಅವರನ್ನು ನಂತರ ಬಿಡುಗಡೆ ಮಾಡಿತು.
ಪುಲ್ವಾಮಾ ದಾಳಿಯ ನಂತರ ತನಿಖೆಗಳು ಮುಂದುವರಿದವು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2020ರ ಆಗಸ್ಟ್‌ನಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. 2021ರ ಆಗಸ್ಟ್‌ನಲ್ಲಿ ದಾಳಿಗೆ ಸಂಬಂಧಿಸಿದ ಇನ್ನೂ ಹಲವು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿ, ಕೆಲವು ಮಂದಿಯನ್ನು ಬಂಧಿಸುವ ಮೂಲಕ ತನಿಖೆಯನ್ನು ಮುಂದುವರೆಸಿದವು.ಪುಲ್ವಾಮಾ ದಾಳಿ ದೇಶದ ಭದ್ರತಾ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯವಾಗಿ ಉಳಿದಿದ್ದು, ವೀರಮರಣ ಹೊಂದಿದ ಯೋಧರ ತ್ಯಾಗವನ್ನು ದೇಶ ಸದಾ ಕೃತಜ್ಞತೆಯಿಂದ ಸ್ಮರಿಸುತ್ತದೆ.