ಚಂಡೀಗಢ ಜುಲೈ 27: ಪಂಜಾಬ್‌ನ ಸಂಗ್ರೂರ್ ಜಿಲ್ಲೆಯಲ್ಲಿರುವ ಭಾರತೀಯ ಜನತಾ ಪಕ್ಷ (BJP) ಕಚೇರಿ ಮೇಲೆ ಸೋಮವಾರ ಮುಂಜಾನೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ (Petrol Bomb) ಎಸೆದಿರುವ ಘಟನೆ ನಡೆದಿದೆ. ದಾಳಿಯಿಂದ ಕಟ್ಟಡದ ಹೊರಭಾಗದ ಗೋಡೆಯ ಮೇಲೆ ಸುಟ್ಟ ಗುರುತುಗಳು ಕಂಡುಬಂದಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.
ಪೊಲೀಸರ ಮಾಹಿತಿ ಪ್ರಕಾರ, ಬೆಳಗಿನ ಸುಮಾರು 3 ಗಂಟೆ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಗಾಜಿನ ಬಿಯರ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ಅದನ್ನು ಕಚೇರಿ ಮೇಲೆ ಎಸೆದಿದ್ದಾನೆ. ಬಾಟಲಿ ಕಟ್ಟಡದ ಹೊರಗೋಡೆಗೆ ಬಡಿದು ಬೆಂಕಿ ಹೊತ್ತಿಕೊಂಡಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಪೆಟ್ರೋಲ್ ಬಾಂಬ್ ಆಗಿ ಬಳಸಿದ ಬಾಟಲಿಯ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಸಿಟಿವಿ ದೃಶ್ಯಗಳ ಪರಿಶೀಲನೆ
ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಬಿಜೆಪಿ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಗಳು ಒಬ್ಬರೇ ಈ ಕೃತ್ಯ ಎಸಗಿದರೋ ಅಥವಾ ಮತ್ತಿತರರ ಸಹಕಾರವಿದೆಯೋ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸಂಗ್ರೂರ್ ಎಸ್‌ಪಿ ದಿವೇಂದ್ರ ಅತ್ರಿ ಮಾತನಾಡಿ, "ಪೆಟ್ರೋಲ್ ಅನ್ನು ಬಿಯರ್ ಬಾಟಲಿಯಲ್ಲಿ ತುಂಬಿ ಪೆಟ್ರೋಲ್ ಬಾಂಬ್ ರೂಪದಲ್ಲಿ ಬಳಸಲಾಗಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು" ಎಂದು ತಿಳಿಸಿದ್ದಾರೆ.
ಈ ನಡುವೆ, ವಿಧಿವಿಜ್ಞಾನ (ಫೊರೆನ್ಸಿಕ್) ತಂಡವೂ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದು, ತನಿಖೆ ಮುಂದುವರಿದಿದೆ.
ಕಾನೂನು ಸುವ್ಯವಸ್ಥೆ ಕುರಿತು ಬಿಜೆಪಿ ಆಕ್ರೋಶ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಇದು ಪೂರ್ವಯೋಜಿತ ದಾಳಿ ಎಂದು ಆರೋಪಿಸಿದ್ದು, ಪಂಜಾಬ್ ಸರ್ಕಾರದ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕ ರಣದೀಪ್ ದಿಯೋಲ್ ಮಾತನಾಡಿ, "ನಿನ್ನೆ ರಾತ್ರಿ ಇಬ್ಬರು ಯುವಕರು ಮೊದಲೇ ಪೆಟ್ರೋಲ್ ಬಾಂಬ್ ತಯಾರಿಸಿಕೊಂಡು ಬಂದು ಕಚೇರಿ ಮೇಲೆ ಎಸೆದಿದ್ದಾರೆ. ಈ ಹಿಂದೆ ಚಂಡೀಗಢದ ಬಿಜೆಪಿ ಕಚೇರಿಯ ಮೇಲೂ ದಾಳಿ ನಡೆದಿತ್ತು. ಈಗ ಸಂಗ್ರೂರ್‌ನಲ್ಲೂ ಇದೇ ರೀತಿಯ ಘಟನೆ ನಡೆದಿರುವುದು ಆಡಳಿತದ ವೈಫಲ್ಯವನ್ನು ತೋರಿಸುತ್ತದೆ" ಎಂದು ಆರೋಪಿಸಿದರು.
ಇನ್ನೊಂದೆಡೆ, ಪಂಜಾಬ್ ಬಿಜೆಪಿ ನಾಯಕ ರವನೀತ್ ಸಿಂಗ್ ಬಿಟ್ಟು ಅವರು ಎಕ್ಸ್ (X)ನಲ್ಲಿ ಪೋಸ್ಟ್ ಮಾಡಿ, "ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸ್ವಂತ ಜಿಲ್ಲೆ ಸಂಗ್ರೂರ್‌ನಲ್ಲೇ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿರುವುದು ಪಂಜಾಬ್‌ನ ಕಾನೂನು ಸುವ್ಯವಸ್ಥೆಯ ನಿಜ ಸ್ಥಿತಿಯನ್ನು ಬಯಲಿಗೆಳೆಯುತ್ತದೆ. ಇಂತಹ ಹೇಡಿತನದ ಕೃತ್ಯಗಳಿಂದ ಬಿಜೆಪಿ ಕಾರ್ಯಕರ್ತರನ್ನು ಬೆದರಿಸಲು ಸಾಧ್ಯವಿಲ್ಲ" ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.